Advertisement

ಬಿಸಿ ಏರಿದ ಬೇಸಗೆ; 40 ಡಿಗ್ರಿ ತಲುಪುತ್ತಿರುವ ತಾಪಮಾನ

05:58 PM Mar 19, 2022 | Team Udayavani |

ಬೆಳ್ತಂಗಡಿ: ಕಳೆದ ವರ್ಷ ಪೂರ್ತಿ ಸುರಿದ ಮಳೆಯಿಂದ ಇಳೆ ತಂಪಾಗಿತ್ತು. ಪ್ರಸಕ್ತ ಬೇಸಗೆ ಧಗೆ ಏರುತ್ತಿದೆ. ವಾತಾವರಣ ಸರಿಸುಮಾರು 40ರಿಂದ 42 ಡಿಗ್ರಿ ವರೆಗೆ ತಲುಪುತ್ತಿರುವುದರಿಂದ ಮನೆಯಿಂದ ಹೊರ ಹೋದ ಮಂದಿ ತಂಪು ಪಾನೀಯಗಳಿಗೆ ಮೊರೆ ಹೋಗಲೇಬೇಕಾದ ಅನಿವಾರ್ಯತೆಯಿದೆ. ಇತ್ತ ಮಾರ್ಚ್‌ ಅವಧಿಯಲ್ಲೇ ತಾಪಮಾನ ವಿಪರೀತ ಏರಿಕೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ನದಿ ನೀರಿನ ಮಟ್ಟ ಇಳಿಕೆಯಾದರೆ ಕುಡಿಯುವ ನೀರಿಗೂ ಕೊರತೆಯಾಗಲಿದೆ.

Advertisement

ಕಳೆದ ವಾರ ಕರಾವಳಿಯ ಕೆಲವೆಡೆ ಮಳೆ ಸುರಿದಿತ್ತು. ಆದರೆ ವಾತಾವರಣ ತಂಪಾಗಿಲ್ಲ. ಅರಣ್ಯ ಪ್ರದೇಶ ವ್ಯಾಪ್ತಿ ಕಡಿಮೆಯಾಗುತ್ತಲೆ ಕಾಂಕ್ರೀಟ್‌ ನಾಡು ಹೆಚ್ಚುತ್ತಿವೆ. ಇವೆಲ್ಲದರ ಪರಿಣಾಮ ಕಲಬುರಗಿ, ರಾಯಚೂರು, ಕೋಲಾರ ಸೇರಿದಂತೆ ಉತ್ತರ ಕನ್ನಡಗಳಲ್ಲಿ ಏರಿಕೆಯಾಗುವ ತಾಪಮಾನದಂತೆ ಕರಾವಳಿಯ ತಾಪಮಾನವೂ ಏರಿಕೆಯಾಗತೊಡಗಿದೆ. ಪರಿಣಾಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನದಿಯಲ್ಲಿನ ನೀರಿನ ಹರಿವು ಕ್ಷೀಣಿಸಿದ್ದು, ತಾಲೂಕಿನಲ್ಲಿರುವ ವಿದ್ಯುತ್‌ ಉತ್ಪಾದನ ಕೇಂದ್ರ ಗಳು ಕಾರ್ಯಚಟುವಟಿಕೆ ಸ್ಥಗಿತಗೊಳಿಸಿವೆ. ಬಾವಿ, ಕೆರೆ, ಕೊಳವೆ ಬಾವಿ ಗಳು ತಳ ಹಿಡಿಯುತ್ತಿವೆ. ಪ್ರಾಣಿ, ಪಕ್ಷಿ ಸಂಕುಲವು ನೀರಿಗಾಗಿ ದಾಹಕ್ಕೆ ಹಾತೊರೆಯುವಂತಾಗಿದೆ. ನದಿ, ಕೆರೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿರುವುದರಿಂದ ವಿವಿಧ ಪ್ರಭೇದದ ಮತ್ಸ್ಯ ಸಂಕುಲಕ್ಕೂ ಆಪತ್ತು ಉಂಟಾಗುತ್ತಿದೆ.

ತಂಪು ಪಾನೀಯ ಬೇಡಿಕೆ

ಬಿಸಿಲಿನ ಧಗೆ ಏರುತ್ತಲೆ ಎಳನೀರು ಹಾಗೂ ತಂಪು ಪಾನೀಯದ ಬೇಡಿಕೆ ಹೆಚ್ಚಾಗಿದೆ. ಹಾಸನ, ಚೆನ್ನರಾಯಣಪಟ್ಟಣ, ಕಡೂರುಗಳಿಂದ ಬರುವ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಏಳನೀರಿಗೆ ಮಾರುಕಟ್ಟೆಯಲ್ಲಿ 30ರಿಂದ 40 ರೂ. ವರೆಗೆ ಬೆಲೆಯಿದೆ. ಕಲ್ಲಂಗಡಿ ಹಣ್ಣು ಕೆ.ಜಿ.ಗೆ 20ರಿಂದ 30 ರೂ. ಗೆ ಮಾರಾಟವಾಗುತ್ತಿದೆ. ಲಿಂಬೆ ಹಣ್ಣಿನ ರಸ, ಎಳ್ಳು, ರಾಗಿ, ಮಜ್ಜಿಗೆ, ದಾಳಿಂಬೆ, ಕರಬೂಜ ಹಣ್ಣು ಹಾಗೂ ಜ್ಯೂಸ್‌ಗೆ ಬೇಡಿಕೆ ಬಂದಿದೆ.

ಕ್ಷೀಣಿಸಿದ ಹರಿವು

Advertisement

ತಾಲೂಕಿನ ನೇತ್ರಾವತಿ, ಸೋಮಾವತಿ, ಮೃತ್ಯುಂಜಯ ಮೊದಲಾದ ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಬೆಳ್ತಂಗಡಿ ನಗರ ವ್ಯಾಪ್ತಿಗೆ ನೀರಿನಾಶ್ರಯವಾಗಿರುವ ಸೋಮಾವತಿ ನದಿ ಸದ್ಯಕ್ಕೆ ತುಂಬಿದೆ. ಮುಂದಿನ ತಿಂಗಳವರೆಗೆ ನೀರಿನ ಕೊರತೆಯಾಗದು. ನಗರಕ್ಕೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಇಲ್ಲಿನ ಸೋಮಾವತಿ ನದಿ ದಡದಲ್ಲಿ ಅಂದಾಜು 13 ಕೋ.ರೂ.ವೆಚ್ಚದಲ್ಲಿ ಜ್ಯಾಕ್‌ವೆಲ್‌ ಹಾಗೂ ಪಂಪ್‌ಹೌಸ್‌ ನಿರ್ಮಿಸಲಾಗಿದೆ. ಇಲ್ಲಿ ಶುದ್ಧೀಕರಿಸಿದ ನೀರನ್ನು ನಗರದ ಬಹುತೇಕ ಕಡೆಗೆ ಉಪಯೋಗಕ್ಕೆ ಬಳಸಲಾಗುತ್ತಿದೆ. ಈ ಟ್ಯಾಂಕ್‌ಗೆ ನೀರು ತುಂಬಲು ಮಳೆಗಾಲ ಮುಗಿದ ಬಳಿಕ ತಾತ್ಕಾಲಿಕವಾಗಿ ಮಣ್ಣಿನಿಂದ ಕಟ್ಟವನ್ನು ನಿರ್ಮಾಣ ಮಾಡಲಾಗುತ್ತದೆ. ಆದರೆ ಈ ಬಾರಿ ಕಟ್ಟ ನಿರ್ಮಿಸಿದ ಕೆಲ ದಿನದಲ್ಲೇ ನೀರಿನ ಪ್ರಮಾಣ ಕಡಿಮೆಯಾಗಿ ನೀರಿನ ಬರ ಎದುರಿಸುವ ಮುನ್ಸೂಚನೆ ರವಾನೆಯಾದಂತಿದೆ. ಇನ್ನು ಅನೇಕರು ನಗರ ಪ್ರದೇಶದಲ್ಲಿರುವ ಕೊಳವೆ ಬಾವಿಗಳನ್ನು ನಂಬಿದ್ದು ಅದರಲ್ಲೂ ಎಪ್ರಿಲ್‌, ಮೇಯಲ್ಲಿ ಜಲಮಟ್ಟ ಇಳಿಕೆಯಾಗುವ ಸಾಧ್ಯತೆಯಿದೆ.

ಧಾರಾಳ ನೀರು ಕುಡಿಯಿರಿ ತಾಪಮಾನ ಏರಿಕೆಯಿಂದ ದೇಹ ನೀರಿನ ಕೊರತೆ ಎದುರಿಸುತ್ತದೆ. ದಿನದಲ್ಲಿ ಮೂರು ಲೀಟರ್‌ ಆರಿಸಿದ ಬಿಸಿನೀರು ಬಳಕೆ ಮಾಡಿದರೆ ಉತ್ತಮ. ಮಧ್ಯಾಹ್ನ ಬಿಸಿಲನ್ನು ತಪ್ಪಿಸಲು ಪ್ರಯತ್ನಿಸಿ. ನೀರಿನಾಂಶವಿರುವ ಆಹಾರ ಹೆಚ್ಚು ಸೇವಿಸಬೇಕು –ಡಾ| ಗೋಪಾಲಕೃಷ್ಣ, ವೈದ್ಯರು

ಬಿಸಿಲಿನ ತಾಪ ಏರಿಕೆಯಿಂದ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಿದೆ. ಎಳನೀರು, ಲಿಂಬೆ ಶರಬತ್ತು, ಹಣ್ಣಿನ ಜ್ಯೂಸ್‌, ಐಸ್‌ ಕ್ರೀಂಗೆ ಹೆಚ್ಚಿನ ಬೇಡಿಕೆ ಇದೆ  -ದಿವಾಕರ ಪ್ರಭು, ಹೊಟೇಲ್‌ ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next