Advertisement

ವಾತಾವರಣದಲ್ಲಿ ಏರಿದ ಬಿಸಿ: ಸೆಕೆಯಿಂದ ಹೈರಾಣ!

11:44 AM Mar 30, 2018 | |

ಸುಳ್ಯ: ಮಲೆನಾಡಿನ ಮಗ್ಗುಲಿನಲ್ಲಿರುವ ತಾಲೂಕಿನಲ್ಲಿ ಒಂದು ವಾರದಿಂದ ಉಷ್ಣಾಂಶ ಮಟ್ಟ 38 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು ವಾತಾವರಣ ಬಿಸಿಯೇರಿದೆ. ನದಿ, ಬಾವಿಗಳಲ್ಲಿ ನೀರಿನ ಮಟ್ಟ ತೀವ್ರ ಇಳಿಮುಖ ಆಗುತ್ತಿದ್ದು, ವಾತಾವರಣದಲ್ಲಿನ ದಿಢೀರ್‌ ಬದಲಾವಣೆ ಇದಕ್ಕೆ ಕಾರಣವಾಗಿದೆ.

Advertisement

ಸಾಮಾನ್ಯವಾಗಿ ಮಾರ್ಚ್‌ ಅಂತ್ಯದಲ್ಲಿ ಬಿಸಿಲು ಹೆಚ್ಚಾಗುವುದು ವಾಡಿಕೆ ಆಗಿದ್ದರೂ, ಜಿಲ್ಲೆಯಲ್ಲಿ ತಾಪ ಏರಿಕೆ ಪ್ರಮಾಣ ನಿರೀಕ್ಷಿತ ಮಟ್ಟಕ್ಕಿಂತ ಅಧಿಕವಾಗಿದೆ. ಹಾಗಾಗಿ ಕೃಷಿ, ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆಯು ಇದೆ.

ನೀರಿನ ಪ್ರಮಾಣ ಇಳಿಕೆ
ಈಗಾಗಲೇ ಸಣ್ಣ-ಪುಟ್ಟ ಹೊಳೆ, ತೋಡು, ಕೆರೆ ಬಾವಿಗಳು ನೀರಿಲ್ಲದೆ ಬತ್ತಿವೆ. ಕೆಲವು ದಿನಗಳ ಹಿಂದೆ ಸುರಿದ ಮಳೆಯ ಪರಿಣಾಮ ನದಿಯಲ್ಲಿನ ನೀರಿನ ಮಟ್ಟ ಕೊಂಚ ಹೆಚ್ಚಿತ್ತು. ಬಿಸಿಲಿನ ಪರಿಣಾಮ ಒಂದು ವಾರದಲ್ಲೇ ಮತ್ತೆ ಇಳಿಮುಖ ಕಂಡಿದೆ. ನಗರದಲ್ಲೇ ಹಾದು ಹೋಗುವ ಪಯಸ್ವಿನಿ ನದಿಯ ಕೆಲ ಭಾಗದಲ್ಲಿ ನೀರು ಕಡಿಮೆ ಆಗಿ ಬಂಡೆ ಕಾಣುತ್ತಿದೆ. ನಾಗಪಟ್ಟಣದ ಮರಳಿನ ಕಟ್ಟದಲ್ಲಿ ನೀರಿನ ಮಟ್ಟ ಈಗ ಸುಸ್ಥಿತಿಯಲ್ಲಿದ್ದರೂ ಬಿಸಿಲಿನ ತೀವ್ರತೆ ಹೀಗೆಯೇ ಮುಂದುವರಿದರೆ, ಎಪ್ರಿಲ್‌ ಕೊನೆಯಲ್ಲಿ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಇದೆ.

ಕೊಳವೆಬಾವಿ ಹೆಚ್ಚಳ
ಕೃಷಿ ನೀರಿನ ಮೂಲಗಳು ಬತ್ತಿರುವ ಕಾರಣದಿಂದ ಅಲ್ಲಲ್ಲಿ ಕೊಳವೆ ಬಾವಿ ಕೊರೆಯುವ ಸಂಖ್ಯೆ ಹೆಚ್ಚಳವಾಗಿದೆ. ಐದಾರು ವರ್ಷಗಳ ಹಿಂದೆ ತೆಗೆದ ಕೆಲವು ಕೊಳವೆ ಬಾವಿಗಳು ನೀರಿನ ಕೊರತೆ ಎದುರಿಸು ವಂತಾಗಿದೆ. 300 ಫೀಟ್‌ ನೊಳಗೆ ಸಿಗುತ್ತಿದ್ದ ನೀರಿಗೆ ಈಗ 500ರಿಂದ 600 ಫೀಟ್‌ ತನಕ ಕೊರೆಯಬೇಕು. ಐದು ವರ್ಷ ಕಳೆದರೆ, ಆಳದ ಪ್ರಮಾಣ ಇನ್ನಷ್ಟು ಹೆಚ್ಚಳಗೊಂಡು ಬಯಲು ಸೀಮೆ ಸ್ಥಿತಿ ಇಲ್ಲಿ ಬರಬಹುದು ಅನ್ನುತ್ತಿದೆ ಇಲ್ಲಿನ ಚಿತ್ರಣ.

ಅಂತರ್ಜಲ ಮಟ್ಟ
ಅಂತರ್ಜಲದ ಮಟ್ಟ ಆಶಾದಾಯಕವಾಗಿದ್ದರೂ ವಾತಾವರಣದಲ್ಲಿ ಬಿಸಿ ತಗ್ಗಿಲ್ಲ. 2015ರಲ್ಲಿ ಬಂಟ್ವಾಳ 8.85 ಮೀ., ಬೆಳ್ತಂಗಡಿ-7.53 ಮೀ., ಮಂಗಳೂರು- 12.18 ಮೀ., ಪುತ್ತೂರು-6.76, ಸುಳ್ಯ- 10.22 ಮೀ. ನಷ್ಟಿತ್ತು. 2016ರಲ್ಲಿ ಬಂಟ್ವಾಳ- 9.53 ಮೀ, ಬೆಳ್ತಂಗಡಿ-8.67 ಮೀ., ಮಂಗಳೂರು-12.96 ಮೀ.  ಪುತ್ತೂರು-7.12 ಮೀ., ಸುಳ್ಯ – 10.68 ಮೀ. ನಷ್ಟಿತ್ತು. 

Advertisement

2017ರಲ್ಲಿ ಬಂಟ್ವಾಳ – 9.20 ಮೀ., ಬೆಳ್ತಂಗಡಿ – 10.72 ಮೀ., ಮಂಗಳೂರು – 15.33 ಮೀ., ಪುತ್ತೂರು – 7.65 ಮೀ., ಸುಳ್ಯ-9.94 ಮೀ. ನಷ್ಟಿತ್ತು. ಮೂರು ವರ್ಷಗಳ ಅಂಕಿ ಅಂಶ ಗಮನಿಸಿದರೆ, ಸುಳ್ಯ ತಾ|ನಲ್ಲಿ ಎರಡು ವರ್ಷಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಿದೆ.

 2018ನೇ ಜನವರಿಯ ಅಂತರ್ಜಲದ ಮಟ್ಟ ಬಂಟ್ವಾಳ 7.89 ಮೀ., ಬೆಳ್ತಂಗಡಿ – 11.6 ಮೀ., ಮಂಗಳೂರು-16.08 ಮೀ., ಪುತ್ತೂರು- 7.86 ಮೀ., ಸುಳ್ಯ-10.9 ಮೀ.ನಲ್ಲಿ ಅಂತರ್ಜಲದ ಮಟ್ಟ ಇದೆ. 2017ಕ್ಕೆ ಹೋಲಿಸಿದರೆ, ಫೆಬ್ರವರಿ, ಮಾರ್ಚ್‌ನಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. 

ಉರಿ ಸೆಕೆ
ಮೋಡ ಕವಿದ ವಾತಾವರಣವಿದ್ದು, ಬೆಳಗ್ಗೆ, ಮಧ್ಯಾಹ್ನ ಉರಿ ಸೆಕೆ, ರಾತ್ರಿ ವೇಳೆಯೂ ಸೆಕೆ ಪ್ರಮಾಣ ದುಪ್ಪಟ್ಟಾಗಿದೆ. ಬೇಸಗೆಯ ಇನ್ನೆರಡು ತಿಂಗಳಲ್ಲಿ ಬಿಸಿಲಿನ ಝಳ ಇನ್ನಷ್ಟು ಹೆಚ್ಚಳವಾಗುವ ಆತಂಕ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next