ಮಂಗಳೂರು: ಗುಜ್ಜರಕೆರೆ ಬಳಿಯಿರುವ ಪದವಿ ಕಾಲೇಜೊಂದರ ಹಾಸ್ಟೆಲ್‌ನ ವಿದ್ಯಾರ್ಥಿಗಳ ತಂಡ ಪರಸ್ಪರ ಹಲ್ಲೆ ನಡೆಸುವ ಜತೆಗೆ ಪೊಲೀಸರ ಮೇಲೂ ಹಲ್ಲೆ ನಡೆಸಿದ ಪ್ರತ್ಯೇಕ ಪ್ರಕರಣ ನಡೆದಿದ್ದು, ಈ ಬಗ್ಗೆ 9 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಐವರು ಪೊಲೀಸರು ಹಾಗೂ 7 ಮಂದಿ ವಿದ್ಯಾರ್ಥಿಗಳು ಗಾಯ ಗೊಂಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆದಿತ್ಯಾ, ಕೆನ್ ಜಾನ್ಸನ್, ಮುಹಮ್ಮದ್, ಅಬ್ದುಲ್ ಶಾಹಿದ್, ವಿಮಲ್ ಹಾಗೂ ಫಹಾದ್, ಅಬು ತಹರ್, ಮುಹಮ್ಮದ್ ನಾಸಿಫ್, ಆದರ್ಶ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಹಾಗೂ 3ನೇ ವರ್ಷದ ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್ ವಿದ್ಯಾರ್ಥಿ ಆದರ್ಶ ಪ್ರೇಮ್ ಕುಮಾರ್ ಎಂಬಾತ ಡಿ. 2ರಂದು ರಾತ್ರಿ ಅಪಾರ್ಟ್‌ಮೆಂಟ್ ಬಳಿ ತನ್ನ ಸ್ನೇಹಿತರನ್ನು ಭೇಟಿ ಮಾಡಲು ಬಂದಾಗ ಸಿನಾನ್ ಹಾಗೂ ಇತರ 8 ಮಂದಿ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ. ಆದರ್ಶ್ ನೀಡಿರುವ ದೂರಿನ ಮೇರೆಗೆ ಗಲಾಟೆ ಬಿಡಿಸಲು ಬಂದಿದ್ದ ಸ್ನೇಹಿತರಾದ ಶೆನಿನ್ ಮತ್ತು ಶ್ರವಣ್ ಗುಜ್ಜರಕೆರೆ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು, ಅವರು ಅಪಾಯದಲ್ಲಿದ್ದಾರೆಂದು ಕೋರಿಕೊಂಡ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಗೆ ಪಾಂಡೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಶೀತಲ್ ಮತ್ತು ಸಿಬಂದಿ ಹಾಸ್ಟೆಲ್ ಬಳಿ ತೆರಳಿದಾಗ ಹಾಸ್ಟೆಲ್‌ನ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಐವರು ಪೊಲೀಸರು ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳಾದ ಆದರ್ಶ, ಮುಹಮ್ಮದ್ ನಸಿಫ್, ಇಸ್ಮಾಯಿಲ್, ಇಸ್ಮಾಯಿಲ್ ಅನ್ವರ್, ಜಾದ್ ಅಲ್ ಗಫೂರ್, ತಮಮ್, ಸಿನಾನ್ ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಗುರುವಾರ ರಾತ್ರಿ ಸ್ಥಳೀಯ ಕಾರ್ಪೊರೇಟರ್ ಮನೆ ಎದುರು ಹೊಡೆದಾಟ ನಡೆದಿತ್ತು. ಇದರಿಂದ ಕೆಲವು ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದ ಬಗ್ಗೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಆರೋಪಿತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಹಾಸ್ಟೆಲ್‌ಗೆ ತೆರಳಿದ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದ ಕಾರಣ ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವುದು ಪೊಲೀಸರ ಆರೋಪ. ಪೊಲೀಸರು ಎಳೆದೊಯ್ದಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ:ಟ್ರಾಫಿಕ್ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್
ಹಾಸ್ಟೆಲ್ ಒಳಗೆ ಪೊಲೀಸರನ್ನು ಬಿಟ್ಟಿದ್ದು ಹೇಗೆ? ಸೆಕ್ಯೂರಿಟಿ ರೂಂನ ಗಾಜು, ಅಲ್ಲಿದ್ದ ಸಿಸ್ಟಮ್ಸ್ ಸೇರಿ ಅಲ್ಲಿದ್ದ ವಸ್ತುಗಳನ್ನು ವಿದ್ಯಾರ್ಥಿಗಳು ಹಾಳುಗೆಡವಿದ್ದಾರೆ ಎಂಬ ಆಪಾದನೆ ಕಾಲೇಜು ಆಡಳಿತ ಪ್ರತಿನಿಧಿಗಳ ಕಡೆಯಿಂದ ಕೇಳಿ ಬರುತ್ತಿದೆ. ಸೆಕ್ಯೂರಿಟಿ ರೂಂ ಎದುರಿದ್ದ ಚೇರ್‌ಗಳನ್ನು, ಹಾಸ್ಟೆಲ್ ಕಟ್ಟಡದ ಮೇಲಿನಿಂದ ಕೆಲವೊಂದು ವಸ್ತುಗಳನ್ನು ಪೊಲೀಸರ ಮೇಲೆ ಎಸೆದಿರುವ ಬಗ್ಗೆಯೂ ದೂರು ಬಂದಿದೆ. ರಾತ್ರಿ ಘಟನೆ ನಡೆಯುತ್ತಿದ್ದ ಸಂದರ್ಭ ಸ್ಥಳೀಯರು ಹೊರಗಡೆ ನೋಡುತ್ತಿದ್ದಾಗ ಮೇಲಿನಿಂದ ತಮ್ಮ ಮೇಲೂ ಕಲ್ಲು, ವಸ್ತುಗಳನ್ನು ಎಸೆದಿರುವುದಾಗಿಯೂ ದೂರಲಾಗಿದೆ. ವಿದ್ಯಾರ್ಥಿಗಳನ್ನು ಪೊಲೀಸರು ಕರೆದೊಯ್ಯುವ ವೇಳೆ ಹೊರಗಡೆ ಬಂದ ವಿದ್ಯಾರ್ಥಿಗಳ ಜತೆ ಅಲ್ಲಿದ್ದ ಸಾರ್ವಜನಿಕರು ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪವೂ ವ್ಯಕ್ತವಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ವಿವರಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಗುಜ್ಜರಕೆರೆಯ ಹಾಸ್ಟೆಲ್ ಎದುರು ಸೇರಿದ್ದ ಸ್ಥಳೀಯರು ಮತ್ತು ಜನಪ್ರತಿನಿಧಿಗಳು ಹಾಸ್ಟೆಲನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿದ್ದಾರೆ.