Advertisement

Students: ಹಾಸ್ಟೆಲ್‌ ಜೀವನ ಸ್ನೇಹ, ಪಾಠ ಲೋಕ

03:36 PM Jan 09, 2025 | Team Udayavani |

ಹಾಸ್ಟೆಲ್‌ ಜೀವನ  ಎನ್ನುವುದು ಅನೇಕರ ಬದುಕಿನಲ್ಲಿ ಮರೆಯಲಾರದ ಅದೆಷ್ಟೊ ಅನುಭವ ನೀಡುವ ವಿಶೇಷ ಸ್ಥಳ. ಇಲ್ಲಿ ಹೊಸ ಸಂಬಂಧಗಳನ್ನು ಬೆಳೆಸುವ, ಹೊಸ ಪಾಠಗಳನ್ನು ಕಲಿಸುವ ಮತ್ತು ವ್ಯಕ್ತಿತ್ವವನ್ನು ರೂಪಿಸುವ ಒಂದು ಪಥವಾಗಿದೆ. ಮನೆಯಿಂದ ಮೊದಲ ಬಾರಿ ದೂರವಾಗುವ ಕ್ಷಣವು ಒತ್ತಡ ಮತ್ತು ಉತ್ಸಾಹದಿಂದ ಕೂಡಿರುತ್ತದೆ. ತಂದೆ-ತಾಯಿಯಿಂದ ದೂರವಾಗುವ ನೋವು, ಅಪರಿಚಿತರ ನಡುವೆ ತನ್ನನ್ನು ಹೊಂದಿಕೊಳ್ಳಬೇಕಾದ ಸಂಕೋಚ, ಮತ್ತು ಹೊಸದಾಗಿ ಬದುಕನ್ನು ಕಾಣುವ ಕುತೂಹಲ ಈ ಎಲ್ಲ ಭಾವನೆಗಳ ಮಿಶ್ರಣವೇ ಹಾಸ್ಟೆಲ್‌ ಜೀವನ.

Advertisement

ಈ ಜೀವನವು ಕಷ್ಟ ಮತ್ತು ಸುಖವನ್ನು ಸಮಾನವಾಗಿ ಅನುಭವಿಸುವ ಪಾಠವನ್ನು ಕಲಿಸುತ್ತದೆ. ಹೊಸ ಸ್ನೇಹಿತರು, ಹೊಸ ಜವಾಬ್ದಾರಿಗಳು, ಹೊಸ ಕನಸುಗಳು ನಮ್ಮ ಜೀವನದ ಬಗೆಯನ್ನು ಸಂಪೂರ್ಣವಾಗಿ ಬದಲಿಸುತ್ತವೆ. ಹಾಸ್ಟೆಲ್‌ ಜೀವನದ ವಿಶೇಷತೆಯು, ಅದರ ಪ್ರತಿಯೊಂದು ದಿನವೂ ಹೊಸ ರಂಗ ತಂದುಕೊಡುವುದರಲ್ಲಿ ಇದೆ.

ಹಾಸ್ಟೆçಲ್‌ನಲ್ಲಿ ಯಾರ ಪರಿಚಯವು ಇಲ್ಲ ಎಂದಾಗ ನೆನಪಿಗೆ ಬರುವುದೇ ತಾಯಿಯ ಕೈತುತ್ತು, ತಮ್ಮನ ಕೀಟಲೆ ಮಾತು. ತಂದೆಯ ಪ್ರೀತಿ, ಅಕ್ಕನ ಕಾಳಜಿ, ಕುಟುಂಬದಿಂದ ದೂರವಾದಾಗ ಅವರ ಬೆಲೆಯನ್ನು ತಿಳಿಸಿದ ದಿನ.

ಮೊದಲಿಗೆ ಸಾರಿಗೆ ವ್ಯವಸ್ಥೆ ಇರದ ಕಾರಣ ಮಕ್ಕಳನ್ನು ಬೇರೆ ಊರಿನಲ್ಲಿ ಇರಲು ಬಿಡುತ್ತಿದ್ದರು, ಕಾಲ ಬದಲಾದಂತೆಯೇ ಮಕ್ಕಳು ನಿರ್ದಿಷ್ಟವಾದ ಗುರಿಯನ್ನು ತಲುಪಲು ಕುಟುಂಬವನ್ನು ಬಿಟ್ಟು ಹಾಸ್ಟೆಲ್‌ ಎಂಬ ಜೀವನಕ್ಕೆ ಹೊಂದಿಕೊಳ್ಳುತ್ತಾರೆ. ಹಾಸ್ಟೆಲ್‌ ಜೀವನದಲ್ಲಿ ಅಪರಿಚಿತರು ಕೂಡ ಸ್ನೇಹಿತರಾಗುತ್ತಾರೆ. ನಾವು ಕೇವಲ ನಮ್ಮ ಕೊಠಡಿಯನ್ನು ಹಂಚಿಕೊಳ್ಳುವುದಿಲ್ಲ ಅದರ ಜತೆಗೆ ಸುಖ-ದುಃಖ ನಗು ಮತ್ತು ನೆನಪುಗಳನ್ನು ಹಂಚಿಕೊಳ್ಳುತ್ತೇವೆ. ಇದು ವಿವಿಧತೆಯಲ್ಲಿ ಏಕತೆಯನ್ನು ತೋರಿಸುವ ಮಂದಿರ ಎಂದರೆ ತಪ್ಪಾಗಲಾರದು.

ತಡ ರಾತ್ರಿಯ ಮಾತುಕತೆಗಳು, ಅನುಭವಗಳನ್ನು ಹಂಚಿಕೊಂಡಂತಹ ಶಾಶ್ವತ ಸಂಪರ್ಕಗಳ ಜಗತ್ತಾಗಿದೆ. ದಿನವೂ ಕೂಡ ಸ್ನೇಹಿತರ ಜತೆ ಪ್ರತಿ ರಾತ್ರಿಯೂ ಒಬ್ಬನೊಬ್ಬರು ಕಾಲು ಎಳೆದು ಮಾತನಾಡುವ ಪಾರ್ಟಿಯಾಗಿದೆ.

Advertisement

ನಾವೆಲ್ಲರೂ ಒಂದೇ ನಮ್ಮವರೆಲ್ಲರೂ ಒಂದೇ ಎಂಬ ಭಾವನೆಯಿಂದ ಎಷ್ಟೇ ಕಷ್ಟವಿದ್ದರೂ ನಮ್ಮ ಕನಸಿಗೆ ಪ್ರತಿನಿತ್ಯವೂ ಹಿಡಿಯಷ್ಟು ಪ್ರಯತ್ನಪಟ್ಟು ಜೀವನದ ಗುರಿಯನ್ನು ಸಾಧಿಸಬೇಕೆಂದು ಛಲದಿಂದ ನಡೆಯುತ್ತವೆ. ನಮ್ಮದಲ್ಲದ ಊರಿನಲ್ಲಿ ನಮ್ಮತನವನ್ನು ಬೆಳೆಸಿಕೊಂಡು ನಮ್ಮವರಿಗಾಗಿ ಇಟ್ಟುಕೊಂಡಂತಹ ಗುರಿಯನ್ನು ಸಾಧಿಸಲು ಮುಂದಾಗುತ್ತೇವೆ. ಅಪ್ಪ ಅಮ್ಮ ಭೇಟಿಯಾಗಲು ಬರದೇ ಇದ್ದಾಗ ಕಣ್ಣಂಚಲ್ಲಿ ಮೆಲ್ಲನೆ ಬಂದ ಕಣ್ಣೀರು.

ಗೆಳತಿಯರ ಬಟ್ಟೆಯನ್ನು ಹಾಕಿಕೊಂಡು ಹೊರಗೆ ಸುತ್ತಾಡಿದ ದಿನ. 7-8 ಜನರು ಸೇರಿಕೊಂಡು ನೆಲದ ಮೇಲೆ ಮಲಗಿಕೊಂಡ ದಿನ, ಭಾನುವಾರ ರಾತ್ರಿಯಾದರೆ ಸಾಕು ರೂಮಿನ ಬಲ್ಬ್ಅನ್ನು ಆರಿಸಿ ಒಟ್ಟಾರೆ ಕುಳಿತು ಭೂತದ ಸಿನೆಮಾಗಳನ್ನು ನೋಡಿದ ಕ್ಷಣ, ಓದಿಗೆ ಟಾಟಾ ಬೈ ಹೇಳಿ ಹರಟೆ ಹೊಡೆಯುವುದೇ ಮನಮುಟ್ಟುವ ಸಂಗತಿಯಾಗಿದೆ. ಸ್ನಾನದ ಕೋಣೆಯಲ್ಲಿ ನೀರು ಬರುತ್ತಿಲ್ಲ ಎಂದು ಮಾಡಿದ ಪ್ರತಿಭಟನೆಗಳು, ಗೆಳತಿಯರು ಓದುತ್ತಿರುವಾಗ ಅವರ ಓದಿಗೆ ಅಡ್ಡಿಯಾಗಿ ಕಿರುಚಾಡುವುದೇ ಒಂದು ಮೋಜು, ದೆವ್ವದ ಬಗ್ಗೆ ಹೆದರುವ ಗೆಳತಿಯನ್ನು ನೋಡಿ ಆಕೆಯ ಮುಂದೆ ಮತ್ತಷ್ಟು ಭೂತದ ವಿಚಾರಗಳನ್ನು ಮಾತನಾಡಿ ಹೆದರಿಸುವುದು,

ನಮ್ಮದೇ ಆದಂತಹ ಗ್ಯಾಂಗ್‌ಗಳು, ಸೆಲ್ಫಿಗಳು, ಸರ್ಪ್ರೈಸ್‌ ಬರ್ತಡೆಗಳು, ಸಂಜೆಯಾದರೆ ಸಾಕು ತಿನ್ನುವ ತಿಂಡಿ ತಿನಿಸುಗಳು, ಇಷ್ಟವಿಲ್ಲದ ಊಟ,ಆದರೂ ಹಸಿವಿಗಾಗಿ ಏನಾದರೂ ತಿನ್ನಬೇಕು ಎನ್ನುವ ಆತುರ, ಕ್ಯಾಂಡಲ್‌ ಇಟ್ಟು ಮ್ಯಾಗಿ ಮಾಡಿ ತಿಂದ ಕ್ಷಣಗಳು, ಅವಕಾಶ ಸಿಕ್ಕಾಗ ಮಾಡುವ ರೀಲ್ಸ್‌ಗಳು.. ಹಾಸ್ಟೆಲ್‌ ಜೀವನದ ಸವಿ ನೆನಪುಗಳು ಕೋಟಿ ಕೊಟ್ಟರು ಮರಳಿ ಬರುವುದಿಲ್ಲ.

ಕುಟುಂಬ ಜೀವನದ ಪಾಠ ಕಲಿಸಿದರೆ ಹಾಸ್ಟೆಲ್‌ ಜೀವನದ ಶೈಲಿ… ಧೈರ್ಯ, ಸಹನೆ, ಸೋದರತ್ವ ಭಾವನೆ ಮುಂತಾದವುಗಳ ಮೌಲ್ಯ ತಿಳಿಸಿಕೊಡುತ್ತದೆ.

ಹಾಸ್ಟೆಲ್‌ ಜೀವನವು ಕೇವಲ ದಿನಚರಿಯ ಸಂಭ್ರಮವಲ್ಲ, ಅದು ನಮ್ಮ ಜೀವನದ ಅಡಿಗಲ್ಲು. ಹೊಸ ಸಂಬಧಗಳು, ಹೊಸ ಕೌಶಲಗಳು, ಮತ್ತು ಹೊಸ ಜವಾಬ್ದಾರಿಗಳನ್ನು ಅನುಭವಿಸುವ ಈ ಕಾಲವು ನಮಗೆ ಧೈರ್ಯ, ಸಹನೆ, ಮತ್ತು ಸೋದರತ್ವದ ಮೌಲ್ಯಗಳನ್ನು ತೋರಿಸುತ್ತದೆ. ಹಾಸ್ಟೆಲ್‌ನಲ್ಲಿ ಹುಟ್ಟುವ ಸ್ನೇಹ, ಹಂಚಿಕೊಳ್ಳುವ ನಗು ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಕಲಿಯುವ ಹೃತೂ³ರ್ವಕ ಪಾಠಗಳು ಜೀವಿತಕಾಲದೊಂದಿಗೆ ಹೆಜ್ಜೆಹಿಡಿಯುತ್ತವೆ.

ಜೀವನವು ನಮ್ಮ ಕನಸುಗಳನ್ನು ಬೆಳೆಸಲು, ನಮ್ಮ ಗುರಿಗಳನ್ನು ಸಾಧಿಸಲು, ಮತ್ತು ನಮ್ಮ ವ್ಯಕ್ತಿತ್ವವನ್ನು ಪ್ರಾಬಲ್ಯಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಅನುಭವಿಸಿದಾಗ ಮಾತ್ರ ಅದರ ಮಹತ್ವವನ್ನು ಸ್ಮರಿಸಲು ಸಾಧ್ಯ. ಈ ಜೀವನವು ನೆನಪಿನ ಹೆಜ್ಜೆಗುರುತುಗಳು ಮಾತ್ರವಲ್ಲ, ಜೀವನದ ನಿಲುವುಗಳನ್ನೂ ನೀಡುವ ಒಂದು ಅಮೂಲ್ಯ ಸಂದರ್ಭವಾಗಿದೆ.

-ವಿದ್ಯಾಶ್ರೀ ಎಂ. ಮೇಗಾಡಿ

ಮಹಿಳಾ ವಿವಿ ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next