ಕೆಲವು ಸಿನಿಮಾಗಳ ಪರಮ ಉದ್ದೇಶ ಪ್ರೇಕ್ಷಕರನ್ನು ನಗಿಸಬೇಕು, ಹೆಚ್ಚು ಆಲೋಚಿಸಲು ಅವಕಾಶ ಕೊಡದೇ ನಗೆಬುಗ್ಗೆಯೊಂದಿಗೆ ಕಚಗುಳಿ ಇಡುತ್ತಲೇ ಸಾಗಬೇಕು ಎಂಬುದು. ಇಂತಹ ಸಿನಿಮಾಗಳನ್ನು ಪ್ರೇಕ್ಷಕ ಕೂಡಾ ಎಂಜಾಯ್ ಮಾಡುವುದರಲ್ಲಿ ಎರಡು ಮಾತಿಲ್ಲ. ಸದ್ಯ “ನಗೆಹಬ್ಬ’ವನ್ನು ಹಮ್ಮಿಕೊಂಡಿರುವುದು “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ.
ಈ ವಾರ ತೆರೆಕಂಡಿರುವ ಈ ಚಿತ್ರದಲ್ಲಿ ಏನಿದೆ ಎಂದರೆ ಒಂದು ಜಾಲಿರೈಡ್ ಇದೆ, ಪಕ್ಕಾ ತರೆಲ ಹುಡುಗರ ಜೊತೆ ಒಂದು ಲಾಂಗ್‌ಟ್ರಿಪ್ ಹೋದಾಗ ಸಿಗುವಂತಹ ಖುಷಿ, ಮಜ ಈ ಚಿತ್ರದಲ್ಲಿದೆ. ಆ ಮಟ್ಟಿಗೆ “ಹಾಸ್ಟೆಲ್ ಹುಡುಗರ ಬೇಕಾಗಿದ್ದಾರೆ’ ಒಂದು ಫನ್‌ರೈಡ್.
ಹೆಸರಿಗೆ ತಕ್ಕಂತೆ ಇದು ಹಾಸ್ಟೆಲ್‌ನಲ್ಲಿ ನಡೆಯುವ ಕಥೆ. ಒಂದು ರಾತ್ರಿಯೊಳಗೆ ನಡೆಯುವ ಕಥೆಯಲ್ಲಿ ಕಾಮಿಡಿ ತುಂಬಿ ತುಳುಕಿದೆ. ಹಾಸ್ಟೆಲ್ ಹುಡುಗರ ತರೆಲ ತಾಪತ್ರಯ, ಅವರು ಮಾಡುವ ಕಿತಾಪತಿ, ಅದರಿಂದ ಎದುರಾಗುವ ತೊಂದರೆ, ತರೆಲ ಹುಡುಗರಿಗೆ ಸಿಗುವ ಖಡಕ್ ವಾರ್ಡನ್, ಅವರ ನಡುವಿನ ಜಗಳ, ಜೊತೆಗೆ ಶಾರ್ಟ್ μಲಂ ಮಾಡಲು ಹೊರಟವನಿಂದ ಆಗುವ ಅವಾಂತರ… ಇವೆಲ್ಲವೂ “ಹುಡುಗರ’ ಕಥೆಯನ್ನು ಚೆಂದಗಾಣಿಸಿದೆ. ಆರಂಭದಿಂದ ಕೊನೆಯವರೆಗೂ ಸಾಗಿಬರುವ ಹುಡುಗರ ತರೆಲ ತಮಾಷೆಗಳೇ ಈ ಸಿನಿಮಾದ “ಮೂಲ ವಸ್ತು’.
ಇತ್ತೀಚೆಗೆ ಬರುವ ಹೊಸಬರ ಸಿನಿಮಾಗಳು ಸಿದ್ಧಸೂತ್ರಗಳನ್ನು ಬದಿಗೊತ್ತಿ ಹೊಸ ನಿರೂಪಣೆಯಲ್ಲಿ ಸಾಗುತ್ತವೆ. ಹಾಸ್ಟೆಲ್ ಹುಡುಗರದ್ದು ಕೂಡಾ ಇದೇ ಹಾದಿ. ಸಿನಿಮಾದ ತುಂಬಾ ಮಾತು ತುಂಬಿಕೊಂಡಿದೆ. ಹಾಗಾಗಿ, ಸಂಭಾಷಣೆ ಕೂಡಾ ಈ ಚಿತ್ರದ ಒಂದು “ಶಕ್ತಿಕೇಂದ್ರ’ ಎನ್ನಬಹುದು. ಇಂದಿನ ಯುವಕರನ್ನು ಗಮನದಲ್ಲಿಟ್ಟುಕೊಂಡು ಬರೆದಿರುವ ಸಂಭಾಷಣೆ ಆಗಾಗ “ಡಬಲ್’ ಆಗುತ್ತದೆ!
ಚಿತ್ರದಲ್ಲಿ ರಮ್ಯಾ, ರಿಷಭ್ ಕೂಡಾ ಕಾಣಿಸಿಕೊಂಡಿದ್ದಾರೆ. ಅದು ಹೇಗೆ ಎಂಬ ಕುತೂಹಲಕ್ಕೆ ಚಿತ್ರಮಂದಿರದಲ್ಲಿ ಉತ್ತರ ಸಿಗಲಿದೆ. ಉಳಿದಂತೆ ಪ್ರಜ್ವಲ್, ಮಂಜುನಾಥ್ ನಾಯಕ್, ಚೇತನ್ ದುರ್ಗ ಸೇರಿ ಚಿತ್ರದಲ್ಲಿ ಸಿಕ್ಕಾಪಟ್ಟೆ ಪಾತ್ರಗಳು ಬಂದು ಹೋಗುತ್ತವೆ. ಒಂದಕ್ಕಿಂತ ಒಂದು “ವಿಭಿನ್ನ’. ಎಲ್ಲಾ ಟೆನ್ಶನ್ ಗಳನ್ನು ಬದಿಗಿಟ್ಟು, ಲಾಜಿಕ್ ಹುಡುಕದೇ ಸುಖಾಸುಮ್ಮನೆ ಬಾಯ್ತುಂಬ ನಕ್ಕು ಬರಬೇಕೆಂದುಕೊಂಡವರಿಗೆ “ಹುಡುಗರು’ ಒಳ್ಳೆಯ ಆಯ್ಕೆ.
ಆರ್.ಪಿ