Advertisement
ಕೋವಿಡ್-19 ಸೋಂಕುಪೀಡಿತರನ್ನು ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಮೃತದೇಹಗಳ ನಿರ್ವಹಣೆಯ ಕುರಿತು ಶುಕ್ರವಾರ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ ಮತ್ತು ವಿವಿಧ ರಾಜ್ಯ ಸರಕಾರಗಳಿಗೂ ನೋಟಿಸ್ ಜಾರಿ ಮಾಡಿದೆ.
ಕೋವಿಡ್-19 ಸೋಂಕಿಗೆ ಬಲಿಯಾದವರ ಮೃತ ದೇಹಗಳನ್ನು ಆಸ್ಪತ್ರೆಗಳು ಸರಿಯಾಗಿ ನಿಭಾಯಿಸುತ್ತಿಲ್ಲ, ಸಾವಿನ ಕುರಿತು ಅವರ ಕುಟುಂಬ ಸದಸ್ಯರಿಗೂ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಕುಟುಂಬ ಸದಸ್ಯರಿಗೆ ಆಪ್ತರ ಅಂತ್ಯಕ್ರಿಯೆಯಲ್ಲೂ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದೊಂದು ದಯನೀಯ ಸ್ಥಿತಿ ಎಂದು ನ್ಯಾ| ಅಶೋಕ್ ಭೂಷಣ್, ನ್ಯಾ| ಸಂಜಯ್ ಕೌಲ್ ಮತ್ತು ನ್ಯಾ| ಎಂ.ಆರ್. ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು,ಮೃತದೇಹಗಳನ್ನು ಗೌರವಿಸದೇ ಇರುವುದು ಕೂಡ ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪ ರಾಧ ಎಂದರು. ಎಲ್‌ಎನ್‌ಜೆಪಿ ಆಸ್ಪತ್ರೆಯ ವೀಡಿಯೋ ಒಂದರಲ್ಲಿ ಮೃತದೇಹಗಳನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎನ್ನುವುದು ಕಾಣುತ್ತದೆ. ಮೃತರಿಗೆ ಗೌರವ, ಘನತೆಯೇ ಇಲ್ಲವೇ ಎಂದು ಪ್ರಶ್ನಿಸಿದರು.
Related Articles
ಕೋವಿಡ್-19 ಪರೀಕ್ಷೆ ಪ್ರಮಾಣ ತಗ್ಗಿಸಿರುವ ದಿಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯ ಪೀಠವು, ಈ ಹಿಂದೆ ದಿನಕ್ಕೆ 7 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಈಗ ಅದು 5 ಸಾವಿರಕ್ಕಿಳಿದಿದೆ. ಚೆನ್ನೈ, ಮುಂಬಯಿಗಳಲ್ಲೆಲ್ಲ ಪರೀಕ್ಷೆ ಪ್ರಮಾಣವನ್ನು ಜಾಸ್ತಿ ಮಾಡಿದರೆ, ನೀವೇಕೆ ಕಡಿಮೆ ಮಾಡಿದ್ದೀರಿ ಎಂದು ಪ್ರಶ್ನಿಸಿತು. ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳು ಮತ್ತು ಮೃತದೇಹಗಳ ನಿರ್ವಹಣೆ ಕುರಿತು ಸವಿವರ ಮಾಹಿತಿ ನೀಡುವಂತೆ ಸೂಚಿಸಿ ಕೇಂದ್ರ ಸರಕಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ ಮತ್ತು ತಮಿಳುನಾಡು ಸರಕಾರಗಳಿಗೆ ನೋಟಿಸ್ ಜಾರಿ ಮಾಡಿತು.
Advertisement
ಕೋವಿಡ್-19 ಸೇನಾನಿಗಳಿಗೆ ವೇತನ ನೀಡಿ: ಸು.ಕೋ. ಚಾಟಿಕೋವಿಡ್-19 ವಿರುದ್ಧದ ಈ ಯುದ್ಧದಲ್ಲಿ ಸೈನಿಕರನ್ನು ಅತೃಪ್ತಗೊಳಿಸಬಾರದು. ವೈದ್ಯ ಸಿಬಂದಿಯ ಕುಂದುಕೊರತೆಗಳನ್ನು ನಿವಾರಿಸಲು ಹೆಚ್ಚುವರಿ ಹಣ ಹೊಂದಿಸಬೇಕು ಎಂದು ಸು.ಕೋರ್ಟ್ ಸರಕಾರಗಳಿಗೆ ಸೂಚಿಸಿದೆ. ಕೋವಿಡ್-19 ವಿರುದ್ಧದ ಯುದ್ಧದಲ್ಲಿ ದೇಶ ಅತೃಪ್ತ ಸೈನಿಕರನ್ನು ಹೊಂದಬಾರದು. ಅನೇಕ ಕಡೆಗಳಲ್ಲಿ ವೈದ್ಯರಿಗೆ ಸಂಬಳ ನೀಡುತ್ತಿಲ್ಲ ಎಂಬ ವರದಿಗಳಿವೆ. ದಿಲ್ಲಿ, ಹೈದರಾಬಾದ್‌ನಲ್ಲಿ ಕೆಲವು ವೈದ್ಯರಿಗೆ 3 ತಿಂಗಳುಗಳಿಂದ ಸಂಬಳ ನೀಡಿಲ್ಲ. ಇದೆಲ್ಲವೂ ಸರಕಾರವೇ ವಹಿಸಬೇಕಾದ ಕಾಳಜಿ. ನ್ಯಾಯಾಲಯ ಹಸ್ತಕ್ಷೇಪ ಮಾಡಬೇಕಾದ ಅಗತ್ಯವಿಲ್ಲ ಎಂದು ಕಟುವಾಗಿ ಸೂಚಿಸಿದೆ. ಪ್ರಸ್ತುತ ಖಾಸಗಿ ಆಸ್ಪತ್ರೆಗಳೂ ವೈದ್ಯರ ವೇತನ ಕಡಿತಗೊಳಿಸಬಾರದು ಎಂದು ಅದು ಹೇಳಿದೆ. ನ್ಯಾ| ಅಶೋಕ್ ಭೂಷಣ್, ನ್ಯಾ| ಎಸ್.ಕೆ. ಕೌಲ್ ಮತ್ತು ನ್ಯಾ| ಎಂ.ಆರ್. ಶಾ ಒಳಗೊಂಡ ತ್ರಿಸದಸ್ಯ ಪೀಠವು ಈ ವಿಚಾರಣೆ ನಡೆಸಿತ್ತು.