ವಾಡಿ: ಗ್ರಾಮಸ್ಥರ ಆರೋಗ್ಯ ಕಾಳಜಿಯಿಂದ ಶಾಸಕ ಪ್ರಿಯಾಂಕ್ ಖರ್ಗೆ ಸುಸಜ್ಜಿತ ದೊಡ್ಡ ಆಸ್ಪತ್ರೆ ಕಟ್ಟಿಸಿ ನೀಡಿದರೂ ಕರವೇ ಕಾರ್ಯಕರ್ತರು ಹಳೆ ಆಸ್ಪತ್ರೆ ಕಟ್ಟಡದಲ್ಲೇ ಚಿಕಿತ್ಸೆ ಮುಂದುವರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಪ್ರಸಂಗ ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ರಾವೂರ ಗ್ರಾಮದಲ್ಲಿ ನಡೆದಿದೆ.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ರಾವೂರ ಗ್ರಾಮದಲ್ಲಿರುವ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಹಳೆ ಆಸ್ಪತ್ರೆಯ ಕಟ್ಟಡದಲ್ಲೇ ಆರೋಗ್ಯ ಸೇವೆ ಮುಂದುವರಿಸಬೇಕು ಎಂದು ಘೋಷಣೆ ಕೂಗಿದರು.
ಹೊಸ ಆಸ್ಪತ್ರೆ ಕಟ್ಟಡ ಗ್ರಾಮದ ಹೊರ ವಲಯದಲ್ಲಿದ್ದು, ರೋಗಿಗಳಿಗೆ ಹೋಗಲು ಉತ್ತಮ ರಸ್ತೆ ಸೌಕರ್ಯ ಒದಗಿಸಿಲ್ಲ. ವಾಹನಗಳ ವ್ಯವಸ್ಥೆಯೂ ಇಲ್ಲ. ಪರಿಣಾಮ ದೂರದ ಆಸ್ಪತ್ರೆಗೆ ಹೋಗಲು ಬಾಣಂತಿಯರು, ವೃದ್ಧರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಇದೇ ಆಸ್ಪತ್ರೆ ಅವಲಂಬಿಸಿರುವ ಪಕ್ಕದ ಲಕ್ಷ್ಮೀಪುರವಾಡಿ ಗ್ರಾಮಸ್ಥರಿಗೆ ಇದು ಗಗನಕುಸುಮವಾಗಿದೆ. ಹೊಸ ಆಸ್ಪತ್ರೆ ಕಟ್ಟಡ ಗ್ರಾಮದಿಂದ ದೂರವಿರುವ ಕಾರಣ ಅನಾನುಕೂಲತೆ ಹೆಚ್ಚಿದೆ. ಗ್ರಾಮಸ್ಥರು ಖಾಸಗಿ ಅಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಕರವೇ ಮುಖಂಡರು ದೂರಿದರು.
ಬಡ ಜನರ ಕೈಗೆಟುಕಬೇಕಾದ ಸರಕಾರಿ ಆಸ್ಪತ್ರೆ ಊರಿನಿಂದ ದೂರ ಹೋಗಿದ್ದೇ ಸಮಸ್ಯೆಗೆ ಕಾರಣವಾಗಿದೆ. ಮೊದಲು ರಾವೂರ ಹಾಗೂ ಲಕ್ಷ್ಮೀಪುರವಾಡಿ ಮಧ್ಯ ಇದ್ದ ಹಳೆಯ ಆಸ್ಪತ್ರೆ ಕಟ್ಟಡ ಎರಡೂ ಗ್ರಾಮಸ್ಥರಿಗೆ ಅನುಕೂಲವಾಗಿತ್ತು. ಆದರೆ ಹೊಸ ಆಸ್ಪತ್ರೆ ಆರಂಭವಾದ ಬಳಿಕ ರೋಗಿಗಳು ಗೋಳಾಡುತ್ತಿದ್ದಾರೆ. ಆದ್ದರಿಂದ ಹೊಸ ಆಸ್ಪತ್ರೆಗೆ ರಸ್ತೆ ಮತ್ತು ವಾಹನ ಸೌಲಭ್ಯ ಒದಗಿಸಬೇಕು. ಇಲ್ಲವೇ ಹಳೆಯ ಕಟ್ಟಡದಲ್ಲೇ ಚಿಕಿತ್ಸೆ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕರವೇ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ, ವಾಡಿ ವಲಯ ಅಧ್ಯಕ್ಷ ಸಿದ್ಧು ಪೂಜಾರಿ, ರಾವೂರ ಗ್ರಾಮ ಘಟಕ ಅಧ್ಯಕ್ಷ ಜಗದೀಶ ಪೂಜಾರಿ, ಮುಖಂಡರಾದ ವಿಶ್ವರಾಧ್ಯ ಫಿರೋಜಾಬಾದ, ವೆಂಕಟೇಶ ಕೈಮೂರ, ನಾಗೇಂದ್ರ ಜಡಿ, ಜಗದೀಶ ಪೂಜಾರಿ, ಜಗು ಮಸ್ಕಿ, ಗುರುನಾಥ ಗುತ್ತೇದಾರ, ಲಿಂಗರಾಜ ನಾಚವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಿಡಿಒ ಕಾವೇರಿ ರಾಠೊಡ ಹಾಗೂ ಗ್ರಾಪಂ ಅಧ್ಯಕ್ಷೆ ದೇವಕಿ ನಾರಾಯಣ ಮಿನಿಗಿಲೇರ ಸ್ಥಳಕ್ಕಾಗಮಿಸಿ ಮನವಿಪತ್ರ ಸ್ವೀಕರಿಸಿದರು.