ಹೊಸಪೇಟೆ: 11ನೇ ದಿನದ ಗಣೇಶ ವಿಸರ್ಜನಾ ಸಮಯದಲ್ಲಿ ಮೂರ್ತಿ ಸಮೇತ ಕ್ರೇನ್ ಕಾಲುವೆಗೆ ವಾಲಿದ ಕಾರಣ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ತಾಲೂಕಿನಲ್ಲಿ ನಡೆದಿದೆ.
ಸಮೀಪದ ಟಿಬಿ ಡ್ಯಾಂನ ಇ.ವಿ.ಕ್ಯಾಂಪ್ ಬಳಿ ಪ್ರತಿಷ್ಠಾಪಿಸಿದ್ದ 34 ಅಡಿ ಎತ್ತರದ ಗಣೇಶ ಮೂರ್ತಿಯ 11ನೇ ದಿನದ ವಿಸರ್ಜನೆ ಕಾರ್ಯಕ್ರಮ ನಡೆದಿದ್ದು, ಈ ಸಮಯದಲ್ಲಿ ಅದ್ಧೂರಿ ಡಿಜೆ ಮೆರವಣಿಗೆ ಮೂಲಕ ಟಿಬಿ ಡ್ಯಾಂ ಸಮೀಪ ಬಂದು ಗಣೇಶ ದೇವಸ್ಥಾನದ ಕಾಲುವೆಯಲ್ಲಿ ಕ್ರೇನ್ ಮೂಲಕ ವಿಸರ್ಜನೆ ವೇಳೆ ಈ ಘಟನೆ ನಡೆದಿದೆ.
ತಡರಾತ್ರಿ ಈ ಘಟನೆ ನಡೆದಿದ್ದು, ಕ್ರೇನ್ ಮತ್ತು ಸೇತುವೆ ತಡೆಗೋಡೆ ನಡುವೆ ಸಿಲುಕಿದ ಅಶೋಕ್ (18) ಮೃತಪಟ್ಟಿದ್ದಾನೆ. ಸಾಯಿ ನಿಖಿಲ್ (18) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಆಸ್ಪತ್ರೆಗೆ ಸಾಗಿಸಲಾಗಿದೆ.
ಪೊಲೀಸ್ ಸಿಬ್ಬಂದಿ ಸೇರಿದಂತೆ ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಕ್ರೇನಿನಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲಾಯಿತು. ಘಟನೆ ನಡೆದ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ನಿರ್ಲಕ್ಷ್ಯ ಹಾಗೂ ಸುರಕ್ಷಾ ಕ್ರಮ ಕೈಗೊಳ್ಳದ ಕಾರಣ ಕ್ರೇನ್ ಆಪರೇಟರ್ ರಾಜು ಹಾಗೂ ಶ್ರೀ ಮಹಾಗಣಪತಿ ಸಂಘದ ಆರ್.ನೂಕರಾಜು ವಿರುದ್ಧ ಟಿಬಿ ಡ್ಯಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.