Advertisement
ರಥೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ವಿರೂಪಾಕ್ಷೇಶ್ವರ ಕಲ್ಯಾಣೋತ್ಸವ ನಡೆಯಿತು. ಅಲ್ಲದೆ, ಏ.10 ರಂದು ಚಕ್ರತೀರ್ಥ ಕೋದಂಡರಾಮ ಸ್ವಾಮಿಕಲ್ಯಾಣೋತ್ಸವ ಹಾಗೂ ರಥೋತ್ಸವ ಕೂಡ ವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ನಡೆಯಲಿದೆ. ಕೊರೊನಾ ತಡೆಗಾಗಿ ಲಾಕ್ ಡೌನ್ ಇರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಆದರೆ ದೇವಾಲಯದಲ್ಲಿ ಎಂದಿನಂತೆ ವಿರೂಪಾಕ್ಷನಿಗೆ ತ್ರಿಕಾಲ ಪೂಜೆ, ನೈವೇದ್ಯ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತಿವೆ ಎಂದು ಹಂಪಿ ವಿದ್ಯಾರಣ್ಯ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿ ಪ್ರದೇಶದಲ್ಲಿ ಇರುವ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಇತರೆ ಎಲ್ಲಾ ಪುರಾತನ ದೇಗುಲಗಳಿಗೆ ಕಳೆದ ಮಾ.21 ರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಈ ಆದೇಶದ ಅನ್ವಯ ಪ್ರವೇಶ ದ್ವಾರವನ್ನು ಬಂದ್ ಮಾಡಲಾಗಿತ್ತು.
ಹಂಪಿ ಚಕ್ರತೀರ್ಥ ಕೋದಂಡರಾಮಸ್ವಾಮಿ, ಯಂತ್ರೋದ್ಧಾರಕ ಆಂಜನೇಯ, ಉದ್ದಾನವೀರಭದ್ರ ಸೇರಿದಂತೆ ಬುಕ್ಕಸಾಗರದ ಏಳುಹೆಡೆ ನಾಗಪ್ಪ, ಹೊಸೂರಮ್ಮ ದೇವಾಲಯವನ್ನು ಬಂದ್ ಮಾಡಲಾಗಿತ್ತು. ಆದರೆ, ಈ ದೇಗುಲಗಳಲ್ಲಿ ನಿತ್ಯ ಪೂಜೆಗಳು ನಡೆಯುತ್ತಿವೆ.
ಅಲಂಕಾರದಿಂದ ಕಂಗೊಳಿಸುತ್ತಿದ್ದ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾದೇವಿ ಮತ್ತು ಭುವನೇಶ್ವರಿ ದೇವಿ ಪ್ರತಿಮೆಗೆ ಹೂವಿನ ಅಲಂಕಾರವಿಲ್ಲದೇ
ಪೂಜೆ ಸಲ್ಲಿಸಲಾಗುತ್ತಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹಂಪಿ ಬ್ರಹ್ಮರಥೋತ್ಸವ ಈ ಬಾರಿ ರದ್ದಾಗಿದೆ. ಆದರೂ ಪಂಪಾ ವಿರೂಪಾಕ್ಷೇಶ್ವರಸ್ವಾಮಿ, ಚಂದ್ರಮೌಳೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಕಿರು ರಥದಲ್ಲಿ ಪ್ರತಿಷ್ಠಾಪಿಸಿ ದೇವಾಲಯ ಪ್ರಾಂಗಣದಲ್ಲಿ ರಥೋತ್ಸವ ನೆರವೇರಿಸಲು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮುಂದಾಗಿದೆ.
ಎಂ.ಎಚ್. ಪ್ರಕಾಶರಾವ್ ಕಾರ್ಯನಿರ್ವಾಹಕ ಅಧಿಕಾರಿ,
ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ, ಹಂಪಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಹೊರತಾಗಿ ದೇವಾಲಯಲ್ಲಿ
ಎಂದಿನಂತೆ ವಿರೂಪಾಕ್ಷನಿಗೆ ತ್ರಿಕಾಲ ಪೂಜೆ, ನೈವೇದ್ಯ, ವಿಶೇಷ ಪೂಜೆಗಳು ನಿರಂತರವಾಗಿ ನಡೆಯುತ್ತಿವೆ. ಅದ್ಧೂರಿ ರಥೋತ್ಸವದ ಬದಲು ದೇವಸ್ಥಾನ
ಪ್ರಾಂಗಣದಲ್ಲಿ ಸರಳವಾಗಿ ನಡೆಯಲಿದೆ.
ಶ್ರೀ ವಿದ್ಯಾರಣ್ಯ ಭಾರತಿ
ಸ್ವಾಮೀಜಿ, ವಿದ್ಯಾರಣ್ಯ ಮಠ, ಹಂಪಿ.