Advertisement

ಹೊಸಮಠ: ಮುಗಿದಿಲ್ಲ ಸಂಪರ್ಕ ರಸ್ತೆ ಕಾಮಗಾರಿ

02:55 AM Jun 28, 2018 | Team Udayavani |

ಕಡಬ: ತಾಲೂಕು ಕೇಂದ್ರವಾಗಿರುವ ಕಡಬವನ್ನು ಮಳೆಗಾಲದಲ್ಲಿ ಸಂಪರ್ಕಿಸಲು ಪ್ರಮುಖ ತೊಡಕಾಗಿರುವುದು ಹೊಸಮಠದ ಮುಳುಗು ಸೇತುವೆ. ಈ ಸೇತುವೆಯ ಪಕ್ಕ 7.50 ಕೋ. ರೂ. ಅನುದಾನದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಕಳೆದ ವರ್ಷವೇ ಮುಗಿದಿತ್ತು. ಆದರೆ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಪೂರ್ತಿಯಾಗದೆ ಈ ಮಳೆಗಾಲದಲ್ಲಿಯೂ ಜನರಿಗೆ ಸೇತುವೆ ಮುಳುಗಡೆಯ ಬಾಧೆ ಮಾತ್ರ ತಪ್ಪಿಲ್ಲ.

Advertisement

ಭರವಸೆ ಮಾತ್ರ
ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಸೇತುವೆಯ ಇಕ್ಕೆಲಗಳ ಸಂಪರ್ಕ ರಸ್ತೆಯ ಕಾಮಗಾರಿಯೂ ಪೂರ್ತಿಯಾಗಿ ಎರಡು ವರ್ಷಗಳ ಹಿಂದೆಯೇ ಮಳೆಗಾಲದಲ್ಲಿ ಮುಳುಗಡೆಯ ಭೀತಿ ಇಲ್ಲದೆ ಹೊಸ ಸೇತುವೆಯ ಮೇಲೆ ವಾಹನಗಳು ಸಂಚರಿಸಬ ಹುದಾಗಿತ್ತು. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ, ಜನರ ಅಸಹಕಾರ ಪ್ರವೃತ್ತಿಯ ಕಾರಣ ದಿಂದಾಗಿ ಸೇತುವೆಯ ಉಪಯೋಗಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಸಂಪರ್ಕ ರಸ್ತೆ ನಿರ್ಮಾಣಕ್ಕೆ ಜಾಗದ ಸಮಸ್ಯೆ ಕಾರಣ ಮುಂದಿಟ್ಟುಕೊಂಡು ಕಾಲಹರಣ ಮಾಡಿದ ಅಧಿಕಾರಿಗಳು ಜಾಗ ಸಿಕ್ಕ ಮೇಲೂ ಕೆಲಸ ಮುಗಿಸಿಲ್ಲ.

ಮಳೆಗಾಲದಲ್ಲಿ ಹೊಸ ಸೇತುವೆಯ ಮೇಲೆ ವಾಹನ ಸಂಚರಿಸುವಂತೆ ಸಂಪರ್ಕ ರಸ್ತೆಯನ್ನು ಪೂರ್ತಿಗೊಳಿಸಲಾಗುವುದು ಎಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (KRDCL) ಅಧಿಕಾರಿಗಳು ಈಗ ಮಳೆಯ ಕಾರಣ ಮುಂದಿಡುತ್ತಿದ್ದಾರೆ. ಕಳೆದ ತಿಂಗಳು ಹಳೆಯ ಸೇತುವೆ ಸಂಪರ್ಕ ರಸ್ತೆಯು ಕುಸಿದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಸುಳ್ಯ ಶಾಸಕರು, ಹೊಸ ಸೇತುವೆ ಸಂಪರ್ಕ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿ ಹೊಸ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ತಾಕೀತು ಮಾಡಿದ್ದರು. ಕಾಮಗಾರಿ  ಶೀಘ್ರ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಮಳೆಯಿಂದಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ.

ಮತ್ತೆ ಕುಸಿಯುವ ಭೀತಿ
ಕಳೆದ ತಿಂಗಳು ಹಳೆ ಸೇತುವೆಯ ಸಂಪರ್ಕ ರಸ್ತೆಯ ಒಂದು ಭಾಗ ಕುಸಿದು ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಬಳಿಕ ಅದನ್ನು ದುರಸ್ತಿ ಮಾಡಿ ವಾಹನ ಸಂಚಾರ ಪುನರಾರಂಭವಾಗಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ರಸ್ತೆ ಕುಸಿಯುವ ಸೂಚನೆಗಳು ಕಂಡುಬರುತ್ತಿದ್ದು, ಸಂಬಂಧಪಟ್ಟವರು ಅಪಾಯ ಸಂಭವಿಸುವ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಳೆ ಬಿಟ್ಟರೆ ಕೆಲಸ
ಸಂಪರ್ಕ ರಸ್ತೆಗೆ ಬೇಕಾದ ಭೂಮಿಯ ಸ್ವಾಧೀನ ಪ್ರಕ್ರಿಯೆ ತಡವಾದುದರಿಂದ ಕಾಮಗಾರಿಗೆ ತಡೆಯುಂಟಾಗಿತ್ತು. ಬಳಿಕ ಕಾಮಗಾರಿಗೆ ವೇಗ ದೊರೆಯುತ್ತಿದ್ದಂತೆಯೇ ಅವಧಿಗೆ ಮೊದಲೇ ಬಿರುಸಾಗಿ ಮಳೆ ಆರಂಭವಾದುದರಿಂದ ಕಾಮಗಾರಿ ಸ್ಥಗಿತವಾಗಿದೆ. ಒಂದು ವಾರ ಮಳೆ ಬಿಟ್ಟರೆ ತಾತ್ಕಾಲಿಕ ನೆಲೆಯಲ್ಲಿ ಹೊಸ ಸೇತುವೆಯ ಮೇಲೆ ವಾಹನ ಸಂಚರಿಸುವಂತೆ ವ್ಯವಸ್ಥೆ ಮಾಡಿಕೊಡುತ್ತೇವೆ.
– ಪುಟ್ಟಸ್ವಾಮಿ, AEE, KRDCL, ಹಾಸನ

Advertisement

— ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next