ಹೊಸಪೇಟೆ: ನಗರದಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿಮಳೆ ನೀರು ಕಾಲುವೆಯಂತೆ ಹರಿದ ಪರಿಣಾಮ ಸಾರ್ವಜನಿಕರು ಪರದಾಡಿದರು.
ಸುಮಾರು 3.45 ಗಂಟೆಗೆ ಆರಂಭವಾದ ಮಳೆ ಒಂದು ಗಂಟೆ ಕಾಲ ಎಡಬಿಡದೆ ಸುರಿದಿದ್ದು, ನಗರದ ಆರ್‌ಟಿಒ ಕಚೇರಿ, ಭಗತ್‌ಸಿಂಗ್ ನಗರ, ಸಾಯಿ ಬಾಬಾ ರಸ್ತೆ, ಪಿಡಿಐಟಿ ಕಾಲೇಜು ಸೇರಿದಂತೆ ಹಲವು
ಕಡೆ ರಸ್ತೆಯಲ್ಲಿ ನೀರು ಸಂಗ್ರಹವಾಗಿದೆ. ದಿಢೀರ್ ಬಂದ ಮಳೆಗೆ ಜನರು ಪರದಾಡುವಂತಾಯಿತು.
ರಾಯರ ಕೆರೆ, ಹೊಸೂರು ಗ್ರಾಮ, ಏರಿ ಬೈಲು, ಕರೆಕಲ್ಲು, ನೀಲಮ್ಮ ಗುಡಿ, ಅಣೆಕಲ್ಲು, ನರಸಾಪುರ, ಕಾಳ ಘಟ್ಟ ಇತರೆ ಕಡೆ ಮಳೆ ಜೋರಾಗಿ ಬಂದಿದೆ. ಇದರಿಂದಾಗಿ ಹೊಲ -ಗದ್ದೆಗಳಲ್ಲಿ ನೀರು ಸಂಗ್ರಹವಾಗಿದೆ.
ಆರ್‌ಟಿಒ ಕಚೇರಿ ಆವರಣ ಜಲಾವೃತವಾಗಿದ್ದು, ಆವರಣದ ನೀರಿನಲ್ಲಿ ವಾಹನಗಳನ್ನು ಸಾಗಿಸಲು ಸಾರ್ವಜನಿಕರು ಪರದಾಡಿದರು. ಆರ್‌ಟಿಒ ಕಚೇರಿಗೆ ಸಂಪರ್ಕ ರಸ್ತೆ ಸಂಪೂರ್ಣವಾಗಿ ಹಾಳಾಗಿರುವ ಹಿನ್ನೆಲೆಯಲ್ಲಿ ಆವರಣದಲ್ಲಿ ನೀರು ಹೊಕ್ಕಿದೆ.
ಮಳೆ ಬಂದಾಗೆಲ್ಲ ಆವರಣದಲ್ಲಿ ನೀರು ಸಂಗ್ರಹವಾಗುತ್ತಿದ್ದರು. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.