Advertisement

ಮಹಿಳಾ ಗ್ರಾಮಸಭೆಯಲ್ಲಿ ಶರಾವತಿ ಉಳಿಸಿ ಕೂಗು!

11:33 AM Jun 30, 2019 | Naveen |

ಕುಮುದಾ ಬಿದನೂರು
ಹೊಸನಗರ:
ಮುಳುಗಡೆಯಿಂದ ತತ್ತರಿಸಿ ಬದುಕಲು ಆಗದ ನಮ್ಮನ್ನು ಮನುಷ್ಯರೆಂದುಕೊಂಡಿದ್ದೇರೋ ಇಲ್ಲಾ ಮೃಗಗಳೆಂದು ಕೊಂಡಿದ್ದೀರೋ.. ನೀರು ಕಳಿಸಬೇಕಂತೆ.. ನೀರು. ಮೊದಲು ನಮ್ಮ ಸಮಸ್ಯೆಗಳನ್ನು ಬಗೆ ಹರಿಸಿ. ಆಮೇಲೆ ಬೆಂಗಳೂರಿಗೆ ನೀರು ನೀಡುವ ಬಗ್ಗೆ ಯೋಚಿಸೋಣ..

Advertisement

ಈ ಆಕ್ರೋಶದ ನುಡಿಗಳು ಕೇಳಿಬಂದಿದ್ದು ಶರಾವತಿ ಉಳಿಸಿ ಹೋರಾಟದ ಒಕ್ಕೂಟದ ಸಭೆಯಲ್ಲಲ್ಲ ಅಥವಾ ಈಗಾಗಲೇ ಬೆಂಬಲ ನೀಡಿರುವ ಸಂಘಟನೆಯ ಮಾತಲ್ಲ. ಅದು ಮಹಿಳಾ ಗ್ರಾಮಸಭೆಯಿಂದ ಹೊರಬಂದ ಆಕ್ರೋಶದ ಧ್ವನಿ. ನೂರಾರು ಮಹಿಳೆಯರು ಹೇಳಿದ್ದು ಒಂದೇ ಸ್ಲೋಗನ್‌.. ಉಳಿಸಿ ಉಳಿಸಿ ಶರಾವತಿ ಉಳಿಸಿ..

ತಾಲೂಕಿನ ಕರಿಮನೆ ಗ್ರಾಪಂನಲ್ಲಿ ಶನಿವಾರ ಮಹಿಳಾ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮಸಭೆ ಆರಂಭವಾಗುತ್ತಿದ್ದಂತೆ ಸಮಸ್ಯೆಗಳ ಅಹವಾಲು ನೀಡಲು ಕೋರಲಾಯಿತು. ಆದರೆ ಅಲ್ಲಿ ಸೇರಿದ್ದ ಮಹಿಳೆಯರು ತಮ್ಮ ಯಾವುದೇ ಸ್ವಂತ ಸಮಸ್ಯೆಯ ಬಗ್ಗೆ ತುಟಿ ಬಿಚ್ಚಲಿಲ್ಲ.. ನಮಗೆ ಕುಡಿಯಲು ನೀರಿಲ್ಲ.. ಮಳೆಯೂ ಬರುತ್ತಿಲ್ಲ.. ಶರಾವತಿ ನದಿ ನೀರನ್ನು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ನೀಡಬಾರದು ಎಂದು ಆಗ್ರಹಿಸಿದರು.

ಉದ್ಯೋಗವೂ ಇಲ್ಲ.. ಪುನರ್ವಸತಿಯೂ ಇಲ್ಲ: ನಗರ ಹೋಬಳಿಯ ಬಹುತೇಕ ಭಾಗ ಮುಳುಗಡೆಗೆ ಆಹುತಿಯಾಗಿದೆ. ಅಂದು ಕೊಟ್ಟಿದ್ದ, ಕುಟುಂಬಕ್ಕೊಂದು ಉದ್ಯೋಗ, ಪುನರ್ವಸತಿ, ಸೂಕ್ತ ಪರಿಹಾರ ಯಾವುದೂ ಇದುವರೆಗೆ ಸಮರ್ಪಕವಾಗಿ ದೊರಕಿಲ್ಲ. ಅದನ್ನು ಬಗೆಹರಿಸುವಂತೆ ಸಾಕಷ್ಟು ವರ್ಷಗಳಿಂದ ಮನವಿ, ಪ್ರತಿಭಟನೆ, ಹೋರಾಟ ಮಾಡುತ್ತಾ ಬಂದಿದ್ದರೂ ಕೂಡ ಬಂದ ಯಾವುದೇ ಸರ್ಕಾರಗಳು ಗಮನ ಹರಿಸಿಲ್ಲ. ಈಗ ಬೆಂಗಳೂರಿಗೆ ನೀರು ಬೇಕು ಎಂದು ಶರಾವತಿ ಒಡಲಿಗೆ ಕೈ ಹಾಕಲು ಹೊರಟಿದೆ. ಯಾವುದೇ ಕಾರಣಕ್ಕ್ಕೂ ಇದನ್ನು ನಾವು ಸಹಿಸಲ್ಲ.. ನಮ್ಮ ಸಮಸ್ಯೆಯನ್ನು ಮೊದಲು ಬಗೆ ಹರಿಸಿ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸಭೆ ನಿರ್ಣಯ: ಗ್ರಾಮಸಭೆಯಲ್ಲಿ ಬೇರೇ ಯಾವುದೇ ವಿಚಾರಕ್ಕೆ ಆಸ್ಪದ ಕೊಡದೆ ಲಿಂಗನಮಕ್ಕಿಯಿಂದ ನೀರು ಹರಿಸುವಂತಿಲ್ಲ ಎಂದು ಒಂದೇ ಸಾಲಿನ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲು ತೀರ್ಮಾನಿಸಲಾಯಿತು.

Advertisement

ಒಟ್ಟಾರೆ ಶರಾವತಿ ಕೂಗು ಕೇವಲ ಪುರುಷರು, ಇಲ್ಲ ಸಂಘಟನೆಗಳನ್ನು ಮಾತ್ರ ತಲುಪಿಲ್ಲ. ಗ್ರಾಮೀಣ ಪ್ರದೇಶದ ಮಹಿಳೆಯರು ಕೂಡ ಆಕ್ರೋಶಗೊಂಡಿರುವುದಕ್ಕೆ ಕರಿಮನೆ ಗ್ರಾಪಂನಲ್ಲಿ ನಡೆದ ಮಹಿಳಾ ಗ್ರಾಮಸಭೆ ಸಾಕ್ಷಿಯಾಗಿದೆ. ಇಡೀ ಶರಾವತಿ ಹಿನ್ನೀರ ಪ್ರದೇಶದ ಜನರು ಶರಾವತಿಗಾಗಿ ಸಂಘಟಿತವಾಗುತ್ತಿದ್ದು ಹೋರಾಟ ಯಾವ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಲಿಂಗನಮಕ್ಕಿ ನೀರು ಬೆಂಗಳೂರಿಗೆ ಹರಿಸುವ ಸಂಬಂಧ ಎಲ್ಲಡೆ ವಿರೋಧ ವ್ಯಕ್ತವಾಗಿದೆ. ಕರಿಮನೆ ಗ್ರಾಪಂ ವ್ಯಾಪ್ತಿಯ ಮಹಿಳೆಯರು ತಮಗಾಗಿ ನಡೆದ ಗ್ರಾಮಸಭೆಯಲ್ಲಿ ತಮ್ಮ ವೈಯಕ್ತಿಕ ಸಮಸ್ಯೆಗೆ ಒತ್ತು ನೀಡದೆ ಶರಾವತಿ ನೀರಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದು ಮಾದರಿ. ಹಳ್ಳಿಹಳ್ಳಿಗಳಲ್ಲೂ ಈ ಹೋರಾಟದ ಧ್ವನಿ ಕೇಳಿ ಬರುತ್ತಿದ್ದು ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
ಸುಮಾ ಸುಬ್ರಹ್ಮಣ್ಯ,
ಸಂಜೀವನಿ ಮಹಿಳಾ ಒಕ್ಕೂಟದ ಅಧ್ಯಕ್ಷರು.

ಇಂದು ನಡೆದ ಮಹಿಳಾ ಗ್ರಾಮಸಭೆ ಮಾದರಿ ಎಂದೇ ಹೇಳಬೇಕು. ನೂರಾರು ಸಂಖ್ಯೆಯಲ್ಲಿ ಸೇರಿದ ಮಹಿಳೆಯರು ಸಂಘಟಿತರಾಗಿದ್ದರು. ಅವರ ಕೂಗು ನಮ್ಮ ಜೀವನದಿ ಶರಾವತಿ ಕಡೆ ಮಾತ್ರ ಇತ್ತು. ಅವರೇ ಕೈಗೊಂಡ ಶರಾವತಿ ಕೂಗಿನ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು.
ಎಚ್.ಟಿ. ರಮೇಶ್‌,
ಅಧ್ಯಕ್ಷರು ಕರಿಮನೆ ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next