ಹೊಸನಗರ: ನಗರದ ಹೋಬಳಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಸಿಬ್ಬಂದಿಗಳ ಕೊರತೆ. ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ತುರ್ತು ಸೇವೆಯೂ ಇಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನ.19ರ ಮಂಗಳವಾರ ಬೆಳಿಗ್ಗೆ ಆಸ್ಪತ್ರೆ ಮುಂದೆ ದೌಡಾಯಿಸಿದ ಕಾರ್ಯಕರ್ತರು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಗಮನಹರಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಬಿಜೆಪಿ ಸರ್ಕಾರವಿದ್ದಾಗ ನಗರದ ಹೋಬಳಿಯ 24×7 ಆಸ್ಪತ್ರೆಗೆ ಮೂವರು ವೈದ್ಯರನ್ನು ನೇಮಿಸಲಾಗಿತ್ತು. ಇಲ್ಲಿರುವ ಆಂಬ್ಯುಲೆನ್ಸ್ ಪಂಚರ್ ಆಗಿ 4 ದಿನಗಳಿಂದ ನಿಂತಿದ್ದರೂ ಪಂಚರ್ ಹಾಕುವ ಗೋಜಿಗೆ ಹೋಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ತಾಲೂಕು ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ನಿತಿನ್ ಮಾತನಾಡಿ, ನೋವಿನಿಂದ ಪ್ರತಿಭಟಿಸಲಾಗುತ್ತಿದೆ. ನಗರ ಪ್ರವಾಸೋದ್ಯಮವಾಗಿ ಬೆಳೆದಿದೆ. ಇಲ್ಲಿರುವುದು ಹೋಬಳಿ ಕೇಂದ್ರದ ಆಸ್ಪತ್ರೆಯಾಗಿದೆ. ಒಬ್ಬ ವೈದ್ಯರು ಕೂಡ ಇಲ್ಲ. ವೈದ್ಯಾಧಿಕಾರಿಗಳು ಅಸಡ್ಡೆ ಉತ್ತರಗಳನ್ನು ನೀಡುತ್ತಾರೆ ಎಂದು ಆರೋಪಿಸಿದರು.
ಇಲ್ಲಿನ ಲ್ಯಾಬ್ ಟೆಕ್ನಿಷಿಯನ್ ಗಳನ್ನು ಕಾರಣವಿಲ್ಲದೆ ಹುಂಚಾ ಹೋಬಳಿಗೆ ವರ್ಗಾಯಿಸಲಾಗಿದೆ. ಹಾಗಾದರೆ ನಗರ ಹೋಬಳಿ ಜನ ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಈ ಆಸ್ಪತ್ರೆಗೆ ಕೂಡಲೇ ಇಬ್ಬರು ವೈದ್ಯರನ್ನು ನೇಮಿಸಬೇಕು. ಲ್ಯಾಬ್ ಟೆಕ್ನಿಷಿಯನ್ ಅವರನ್ನು ನೇಮಿಸಬೇಕು. ಅಂಬ್ಯುಲೆನ್ಸ್ ಸುವ್ಯವಸ್ಥೆಯಲ್ಲಿರಬೇಕು ಎಂದು ಆಗ್ರಹಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ ಮತ್ತಿಮನೆ, ನಗರ ಹೋಬಳಿ ಬಡ ರೈತರು ಕೂಲಿಕಾರ್ಮಿಕರನ್ನು ಹೊಂದಿದೆ. ನಗರ ಹೋಬಳಿ ಕೇಂದ್ರದ ಆಸ್ಪತ್ರೆಯಿರುವ ಏಕೈಕ ಆಶಾಕಿರಣ. ಸಣ್ಣಪುಟ್ಟ ಚಿಕಿತ್ಸೆಗೂ ದೂರದ ಊರಿಗೆ ಹೋಗಬೇಕಾಗಿದೆ. ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹೆಚ್.ಜಿ. ರಮಾಕಾಂತ್ ಹೆಬ್ಬುರುಳಿ, ಗ್ರಾಪಂ ಸದಸ್ಯರಾದ ಕುಮಾರ್ ಕೆ ಬಿ, ಅರುಣ ಬೈಸೆ, ಪ್ರಮುಖರಾದ ಕೆ ವಿ ಕೃಷ್ಣಮೂರ್ತಿ, ಮಧುಕರ್ ಶೆಟ್ಟಿ, ಸುರೇಶ್, ಉಮೇಶ ಕಾಡಿಗ್ಗೇರಿ ಇತರರು ಭಾಗಿಯಾಗಿದ್ದರು.