ಹೊಸದುರ್ಗ: ತಾಲೂಕಿನಲ್ಲಿ ಮಳೆ ಹಾನಿ ಉಂಟಾದ ಪ್ರದೇಶಗಳಲ್ಲಿ ಬೆಳೆ ನಷ್ಟ ಸಮೀಕ್ಷೆ ಮಾಡಿ ಪರಿಹಾರ ಕೊಡಿಸುವಲ್ಲಿ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಮಳೆಯಿಂದ ಒಡೆದಿರುವ ತಾಲೂಕಿನ ನೀರಗುಂದ ಕೆರೆ ಏರಿ ಪರಿಶೀಲನೆ ಮಾಡಿದ ಬಳಿಕ ಅವರು ಮಾತನಾಡಿದರು. ತಾಲೂಕಿನ 548 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ವರದಿಯಾಗಿದೆ. ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವ ಸಾಧ್ಯತೆ ಇದೆ. ಆದ್ದರಿಂದ ಸಮೀಕ್ಷೆ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದರು.
ತಾಲೂಕಿನಲ್ಲಿ ಉತ್ತರ ಕರ್ನಾಟಕ ಮಾದರಿಯಲ್ಲಿಯೇ ಬೆಳೆ ನಷ್ಟ ಪರಿಹಾರವನ್ನು ಎನ್ ಡಿಆರ್‌ಎಫ್ ನಿಯಮದಂತೆ ನೀಡಲಾಗುವುದು. ಜಿಲ್ಲೆಯ ಚಳ್ಳಕೆರೆಯಲ್ಲಿ 9, ಹಿರಿಯೂರಿನಲ್ಲಿ 56, ಹೊಸದುರ್ಗದಲ್ಲಿ 350, ಹೊಳಲ್ಕೆರೆಯಲ್ಲಿ 265ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಕುಸಿದ ಮನೆಗಳಿಗೆ 5 ಲಕ್ಷ ರೂ., ಭಾಗಶಃ ಹಾನಿಯಾದ ಮನೆಗೆ 1 ಲಕ್ಷ ರೂ., ಮೃತಪಟ್ಟವರ ಕುಟುಂಬದವರಿಗೆ 5 ಲಕ್ಷ ರೂ. ಹಾಗೂ ಜಾನುವಾರು ಸಾವನ್ನಪ್ಪಿದರೆ ಮಾಲೀಕರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ನೀರಗುಂದ ಕೆರೆ ಸೋಮವಾರವೇ ಒಡೆದು ಹೋಗಿದೆ. ನಾಲ್ಕು ದಿನಗಳಾದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರಿಂದ ಬಹಳಷ್ಟು ನೀರು ಹೋಗಿದೆ. ತಕ್ಷಣ ಕ್ರಮ ಕೈಗೊಂಡಿದ್ದರೆ ಸಾಕಷ್ಟು ನೀರು ಉಳಿಸಬಹುದಿತ್ತು. ಈ ಬಗ್ಗೆ ಸಂಬಂಧಿಸಿದ ಸಚಿವರಿಗೆ ವರದಿ ನೀಡಲಾಗುವುದು ಎಂದರು.
ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯಾಗಿರುವುದು ಸಂತಸದ ವಿಷಯ. ಆದರೆ ಕೆಲವೆಡೆ ಕೆರೆ ಏರಿಗಳು ಒಡೆದಿರುವುದು ದುರಂತ. ಹೊಸದುರ್ಗ ತಾಲೂಕಿನ ಕೆರೆಕಟ್ಟೆಗಳಿಗೆ ಸಾಕಷ್ಟು ಹಾನಿಯುಂಟಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಬೆಳೆ ನಷ್ಟ ಪರಿಹಾರ, ಮನೆ ಹಾನಿ, ಪ್ರಾಣ ಹಾನಿ ವರದಿ ತರಿಸಿಕೊಂಡು ತಕ್ಷಣಣ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೊಸದುರ್ಗ ಸರ್ಕಾರಿ ಆಸ್ಪತ್ರೆಯನ್ನು ನೂರು ಹಾಸಿಗೆಗಗಳ ಆಸ್ಪತ್ರೆ ಎಂದು ಘೋಷಿಸಲಾಗಿದೆ. ಆದರೆ ಅದಕ್ಕನುಗುಣವಾದ ಸೌಲಭ್ಯ ಒದಗಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮೊಳಕಾಲ್ಮೂರಲ್ಲೂ ಇದೇ ರೀತಿ ಆಗಿದೆ. ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್, ತಾಲೂಕು ಬಿಜೆಪಿ ಮುಖಂಡರಾದ ನಾಗಭೂಷಣ, ಕಲ್ಮಠ್ , ತುಂಬಿನಕೆರೆ ಬಸವರಾಜ್ ಹಾಗೂ ತಾಲೂಕು ಮಟ್ಟದ ಅಧಿ ಕಾರಿಗಳು ಇದ್ದರು.