Advertisement

ಪಕ್ಷ ಒಡೆಯುವ ವ್ಯವಾಹರದಲ್ಲಿ ಕಾಂಗ್ರೆಸ್ ನಿಪುಣ, ಕುದುರೆ ವ್ಯಾಪಾರ ಹುಟ್ಟಿದ್ದೇ ಅವರಿಂದ: HDK

05:56 PM Jul 28, 2020 | keerthan |

ಬೆಂಗಳೂರು: ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ “ಪ್ರಜಾಪ್ರಭುತ್ವ ಉಳಿಸಿ” ಎಂದು ಹೋರಾಟ ನಡೆಸುತ್ತಿದೆ. ಇದೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಏನು ಮಾಡಿದೆ? ಸರ್ಕಾರ ರಚಿಸಲು ಬೆಂಬಲ ನೀಡಿದ ಬಿಎಸ್ ಪಿಯ ಎಲ್ಲ ಶಾಸಕರನ್ನೂ ಕಾಂಗ್ರೆಸ್ ಸೆಳೆದಿಲ್ಲವೇ? ಇದು ಖರೀದಿಯಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

Advertisement

ಶಾಸಕರ ಖರೀದಿ ವಿಚಾರವಾಗಿ ದೊಡ್ಡ ಗಂಟಲು ಮಾಡುತ್ತಿರುವ ಕಾಂಗ್ರೆಸ್ ಹಿಂದೆ ಜೆಡಿಎಸ್ ಅನ್ನು ಒಡೆದಿಲ್ಲವೇ? ಒಡೆಯಲು ಪ್ರಯತ್ನಗಳನ್ನು ಮಾಡಲಿಲ್ಲವೇ? ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಟು ಮಂದಿಯನ್ನು ಕೇವಲ ರಾಜ್ಯಸಭೆ ಚುನಾವಣೆಗಾಗಿ ಖರೀದಿಸಲಿಲ್ಲವೇ? ಇದು ಪ್ರಜಾಸತ್ತಾತ್ಮಕವೇ? ಖರೀದಿ ವಿಚಾರದಲ್ಲಿ ಎರಡೂ ಪಕ್ಷಗಳೂ ‘ಅಪರಾಧಿ’ಗಳೇ ಎಂದು ಕಿಡಿಕಾರಿದ್ದಾರೆ.

ಎಸ್.ಎಂ ಕೃಷ್ಣ ಅವರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಮ್ಮ ಶಾಸಕರನ್ನು ಖರೀದಿ ಮಾಡಿರಲಿಲ್ಲವೇ? 2018ರ ವಿಧಾನಸಭೆ ಚುನಾವಣೆ ನಂತರ ನಮ್ಮ ಶಾಸಕರನ್ನು ಖರೀದಿಸಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಹೊಂಚು ಹಾಕಿರಲಿಲ್ಲವೇ? ಕಾಂಗ್ರೆಸ್ ಬಳಿ ಈ ಪ್ರಶ್ನೆಗಳಿಗೆ ಉತ್ತರಿಸಲು ನೈತಿಕತೆ ಇದೆಯೇ ಎಂದು ಎಚ್ ಡಿಕೆ ತಮ್ಮ ಪ್ರತಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದರು.

2004ರ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಇದೇ ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಇದನ್ನು ಮನಗಂಡೇ ನಾನು ಕ್ಷಿಪ್ರ ರಾಜಕೀಯ ಕ್ರಾಂತಿ ಮಾಡಬೇಕಾಯಿತು. ಪಕ್ಷಗಳನ್ನು ಒಡೆಯುವ, ಶಾಸಕರನ್ನು ಖರೀದಿಸುವ ವ್ಯವಾಹರದಲ್ಲಿ ಕಾಂಗ್ರೆಸ್ ನಿಪುಣ. ‘ಕುದುರೆ ವ್ಯಾಪಾರ’ ಎಂಬ ಭಾಷೆ ಹುಟ್ಟಿದ್ದೇ ಕಾಂಗ್ರೆಸ್ಸಿನಿಂದ ಎಂದು ಕಿಡಿಕಾರಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿಲ್ಲ.‌ ಆದ್ದರಿಂದಲೇ ಈ ಪ್ರಜಾಪ್ರಭುತ್ವ ವಿರೋಧಿ ಪ್ರಹಸನಗಳು ನಡೆಯುತ್ತಿವೆ. ಹಾಗಾಗಿ ಪಕ್ಷಾಂತರ ಮಾಡಿದ ವ್ಯಕ್ತಿ, ಆತನ ಕುಟುಂಬಕ್ಕೆ ಎರಡು ಅವಧಿಗೆ ಚುನಾವಣೆ ನಿರ್ಬಂಧಿಸುವ ಮತ್ತು ಈ ಅವಧಿಯಲ್ಲಿ ಯಾವುದೇ ಅಧಿಕಾರ ಹೊಂದದಂತೆ ಮಾಡುವುದು ಸೂಕ್ತ. ಇದರತ್ತ ಚರ್ಚೆಗಳಾದರೂ ನಡೆಯಲಿ. ಪ್ರಜಾಪ್ರಭುತ್ವ ಉಳಿಯಲಿ ಎಂದರು.

Advertisement

ಪ್ರಜಾಪ್ರಭುತ್ವ ಉಳಿಸಲು ಪ್ರಾಣ ನೀಡುವುದಾಗಿ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಹೇಳುತ್ತಿದ್ದರು. ಸ್ವಾಮಿ, ಜೀವ ಅಮೂಲ್ಯ. ನೀವು ಪ್ರಾಣ ಕೊಡುವುದು ಬೇಡ. ಕಾಂಗ್ರೆಸ್‌ ನಡೆದು ಬಂದ ದಾರಿಯನ್ನು ಒಂದು ಬಾರಿ ನೆನಪಿಸಿಕೊಳ್ಳಿ. ನಂತರ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸದೃಢಗೊಳಿಸುವತ್ತ ಚಿಂತನೆ ಮಾಡಿ. ಪ್ರಜಾಪ್ರಭುತ್ವ ತನ್ನಿಂದತಾನೇ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next