ಹುಬ್ಬಳ್ಳಿ: “ಪಶ್ಚಿಮ ಬಂಗಾಳದಲ್ಲಿ 40 ಶಾಸಕರು ನಮ್ಮೊಂದಿಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ರಾಜ್ಯದಲ್ಲಿ 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಯಡಿಯೂರಪ್ಪ ಹೇಳುತ್ತಿದ್ದು, ಬಿಜೆಪಿ ದೇಶದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವ ಆಪರೇಷನ್ ಕಮಲದ ವಿರುದ್ಧ ದೇಶದ ಜನರು ಅಸಮಾಧಾನಗೊಂಡಿದ್ದು, ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಕುಂದಗೋಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಯುವಕರಿಗೆ ಉದ್ಯೋಗ ಕೊಡಿಸಲು ಮೋದಿ ಅವರಿಗೆ ಸಾಧ್ಯವಾಗಿಲ್ಲ. ಮೋದಿ ಹಾಗೂ ಯಡಿಯೂರಪ್ಪ ಅವರಿಗೆ ಯಾವುದೇ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಆಡಳಿತವೇ ಮುಖ್ಯವಾಗಿದ್ದು, ವಾಮ ಮಾರ್ಗದಿಂದಾದರೂ ಆಡಳಿತ ನಡೆಸಬೇಕೆಂದು ಹಾತೊರೆಯುತ್ತಿದ್ದಾರೆ.
ದೇಶದಲ್ಲಿ ದೊಡ್ಡ ಬದಲಾವಣೆಯಾಗಲಿದ್ದು, ಜನರು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಅಧಿಕಾರಕ್ಕಾಗಿ ಮುಂದಿನ ನಾಲ್ಕು ವರ್ಷವೂ ಕನಸು ಕಾಣಲಿದ್ದಾರೆ. ಅವರು ಕನಸು ಕಾಣುವುದನ್ನು ತಡೆಯಲು ಸಾಧ್ಯವಿಲ್ಲ’ ಎಂದರು.
ಸಿ.ಎಸ್. ಶಿವಳ್ಳಿ ಪಕ್ಷದ ನಿಷ್ಠಾವಂತ ನಾಯಕರಾಗಿದ್ದರು. ಗ್ರಾಮೀಣ ಜನರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದರು. ಕ್ಷೇತ್ರದ ಜನರ ಸಣ್ಣ ಪುಟ್ಟ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದರು. ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂಬುದು ಇಲ್ಲಿನ ಜನರಿಗೆ ಗೊತ್ತಿದೆ. ಇದನ್ನು ನೋಡಿ ಜನ ಮತ ಹಾಕುತ್ತಾರೆ. ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಗೆಲುವು ನಿಶ್ಚಿತ ಎಂದರು.
ವೇಣು ನೇತೃತ್ವದಲ್ಲಿ ಸಭೆ: ಕುಂದಗೋಳದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಭೆ ನಡೆಸಿ ಕ್ಷೇತ್ರದ ವಾಸ್ತವ ಚಿತ್ರಣದ ಮಾಹಿತಿ ಪಡೆದುಕೊಂಡರು.
ಕೆಪಿಸಿಸಿ ಸದಸ್ಯ ಅರವಿಂದ ಕಟಗಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಆರ್.ವಿ. ದೇಶಪಾಂಡೆ, ಆರ್.ಬಿ. ತಿಮ್ಮಾಪುರ, ಶಿವಶಂಕರ ರೆಡ್ಡಿ, ಜಮೀರ್‌ಅಹ್ಮದ್ ಖಾನ್, ಯು.ಟಿ. ಖಾದರ್, ಸತೀಶ ಜಾರಕಿಹೊಳಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ, ಶಾಸಕರಾದ ಪ್ರಸಾದ ಅಬ್ಬಯ್ಯ, ಅಂಜಲಿ ನಿಂಬಾಳಕರ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇನ್ನಿತರರು ಪಾಲ್ಗೊಂಡಿದ್ದರು ಎನ್ನಲಾಗಿದೆ.