ದಾವಣಗೆರೆ: ಎಂಬಿಎ ಕಾಲೇಜು ಮೈದಾನದಲ್ಲಿ ಗುರುವಾರ ವಿಶಿಷ್ಟ ಕ್ರೀಡಾ ಪ್ರದರ್ಶನ ನೋಡುಗರ ಗಮನ ಸಳೆಯಿತು. ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಕಾಣ ಸಿಗುತ್ತಿದ್ದ ಕುದುರೆಗಳ ರೇಸ್, ಗತ್ತಿನ ಸವಾರಿ, ಪ್ರದರ್ಶನ ನಮ್ಮ ನಗರದಲ್ಲಿ ಇದೇ ಮೊದಲ ಬಾರಿಗೆ ನಡೆಯಿತು.
ಆಸ್ಟೇಲಿಯಾದ ದೈತ್ಯ, ಅಮೇರಿಕಾದ ಪುಟ್ಟ ಕುದುರೆಯಿಂದ ಹಿಡಿದು ನಮ್ಮ ದೇಶೀಯ ತಳಿಯ ಕುದುರೆಗಳು ಅಲ್ಲಿ ಜಮಾಯಿಸಿ, ತಮ್ಮ ನೈಪುಣ್ಯತೆ ಪ್ರದರ್ಶಿಸಿದವು. ಇನ್ನು ಸವಾರರು ಸಹ ತಮ್ಮ ಸಾಹಸ ಕಲೆ ಅನಾವರಣಗೊಳಿಸಿದರು.
ಬಂಬೂ ಬಜಾರ್‌ನ ಹಾರ್ಸ್ ರೈಡಿಂಗ್ ತರಬೇತಿ ಕೇಂದ್ರ ಆಯೋಜಿಸಿದ್ದ ಈ ಅಶ್ವ ಪ್ರದರ್ಶನ ಮತ್ತು ಕಲೆಯ ಅನಾವರಣ ನೆರೆದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಹೊಸ ಅನುಭವದ ಖುಷಿ ಕೊಟ್ಟಿತು.
ಅತಿ ಶಿಸ್ತುಬದ್ಧ ಉಡುಪು ಧರಿಸಿ, ಠೀವಿಯಿಂದ ಕುದುರೆ ಏರಿದ ಸವಾರರು ತಾವು ಇತರರಿಗಿಂತ ಭಿನ್ನ ಎಂಬಂತಹ ಮುಖಭಾವದೊಂದಿಗೆ ಕುದುರೆಯ ಲಗಾಮು ಹಿಡಿದು ಸವಾರಿ ಮಾಡಿದಾಗ ನೆರೆದಿದ್ದವರು ರೋಮಾಂಚನಗೊಂಡು ಚಪ್ಪಾಳೆ ತಟ್ಟಿದರು.
ಲವು ವಿದ್ಯಾರ್ಥಿಗಳು ಸಣ್ಣ ಕುದುರೆ ಮೇಲೇರಿ ನಿಧಾನವಾಗಿ ಸವಾರಿ ನಡೆಸಿ, ಖುಷಿ ಅನುಭವಿಸಿದರು. ತಲೆ ಮೇಲೆ ಬಿಗುವಾದ ಹೆಲ್ಮೆಟ್, ಕಾಲಿಗೆ ಉದ್ದದ ಬೂಟು, ಕೈಯಲ್ಲಿ ಕಪ್ಪನೆಯ ಕುದುರೆಯ ಲಗಾಮು ಕುದುರೆ ಸವಾರಿಯ ಗಂಭೀರತೆಯನ್ನು ಸೂಚಿಸುವಂತಿದ್ದವು.
ಒಟ್ಟಿನಲ್ಲಿ ಒಂದಿಷ್ಟು ಕಾಲ ನಡೆದ ಕುದುರೆ ಮೋಜು ವಿದ್ಯಾರ್ಥಿಗಳಿಗೆ ಖುಷಿಯನ್ನುಂಟು ಮಾಡಿತು. ತರಬೇತಿ ಕೇಂದ್ರದ ರಾಜೇಶ್ ಸಿಂಗ್, ಸುಮಿತ್ ಶಿಂಧೆ, ಕುಶಾಲ್ ಇಜಾರೆ ಪ್ರದರ್ಶನದ ಉಸ್ತುವಾರಿ ನೋಡಿಕೊಂಡರು.