ಕಳೆದ ವರ್ಷ ಹಾರರ್ ಚಿತ್ರಗಳಿಗೇನೂ ಬರವಿರಲಿಲ್ಲ. ಹಾಗೆಯೇ ಈ ವರ್ಷದ ಆರಂಭದಲ್ಲೂ ಕೂಡ ಹಾರರ್ ಚಿತ್ರಗಳು ಸೆಟ್ಟೇರಿದ್ದಾಗಿದೆ. ಈಗ ಹೊಸ ವಿಷಯ ಅಂದರೆ, ವರ್ಷದ ಆರಂಭದಲ್ಲಿ ಹಾರರ್ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ. ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಪ್ರೇಕ್ಷಕರ ಮುಂದೆ ಬರಲು ತಯಾರಾಗಿರುವ ಚಿತ್ರದ ಹೆಸರು “ಕಡೆಮನೆ’.
ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಪಕ್ಕಾ ದೆವ್ವದ ಚಿತ್ರ. ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರಕ್ಕೆ ವಿನಯ್ ನಿರ್ದೇಶಕರು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ವಿನಯ್‌ಗೆ ಇದು ಮೊದಲ ಚಿತ್ರ. ಕೀರ್ತನಾ ಕ್ರಿಯೇಷನ್ಸ್ ಬ್ಯಾನರ್‌ನಡಿ ತುಮಕೂರಿನ ಎಸ್.ನಂದನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರಿಗೂ ಇದು ಮೊದಲ ಅನುಭವ.
ಈ ಹಿಂದೆ ಗಾಯಕರಾಗಿದ್ದ ನಂದನ್ ಅವರಿಗೆ ಸಿನಿಮಾ ಮಾಡುವ ಆಸೆ ಹೆಚ್ಚಾಗಿ, ಒಂದೊಳ್ಳೆಯ ಕಥೆ ಮತ್ತು ಸಂದೇಶ ಇರುವ ಚಿತ್ರ ಮಾಡಬೇಕೆಂದೆನಿಸಿ, “ಕಡೆಮನೆ’ ಕಡೆಗೆ ವಾಲಿದ್ದಾರೆ. ಸಾಮಾನ್ಯವಾಗಿ ಹಾರರ್ ಚಿತ್ರ ಅಂದರೆ, ದೆವ್ವ, ದೇವರು, ಭಯ, ಭಕ್ತಿ ಇದ್ದೇ ಇರುತ್ತೆ. ಇಲ್ಲಿ ತರಲೆ ಮಾಡಿಕೊಂಡಿರುವ ಹುಡುಗರಿಗೆ ಕೆಲಸ ಘಟನೆಗಳು ಎದುರಾಗಿ ಎಂತಹ ಇಕ್ಕಟ್ಟಿಗೆ ಸಿಲುಕುತ್ತಾರೆ.
ಆಮೇಲೆ ಆ ಘಟನೆಯಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಇಲ್ಲಿ ಭಯಾನಕವಾಗಿಯೇ ತೋರಿಸಿದ್ದಾರಂತೆ ನಿರ್ದೇಶಕರು. ಹೊಸತಂಡವಿದ್ದರೂ, ತಾಂತ್ರಿಕತೆಯಲ್ಲಿ ಅನುಭವ ಪಡೆದು ಹಾರರ್ ಚಿತ್ರಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಇಟ್ಟುಕೊಂಡು ಬೆಚ್ಚಿಬೀಳಿಸುವ ಪ್ರಯತ್ನ ಮಾಡಿರುವುದಾಗಿ ಹೇಳುತ್ತಾರೆ ನಿರ್ದೇಶಕರು. ಮೈಸೂರು, ತುಮಕೂರು, ಶ್ರೀರಂಗಪಟ್ಟಣ, ಪಾಂಡವಪುರ ಸೇರಿದಂತೆ ಇತರೆಡೆ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಇಲ್ಲಿ ಕಥೆಯೇ ಹೀರೋ ಆಗಿದ್ದು, ಚಿತ್ರದಲ್ಲಿ ಯುವರಾಜ್, ಬಲರಾಜವಾಡಿ, ಕಲ್ಪನಾ, ಆಷಿಷಾ, ಕುರಿರಂಗ, ಬ್ಯಾಂಕ್ ಜನಾರ್ದನ್, ಉಮೇಶ್, ಶ್ರೀನಿವಾಸ್ ಗೌಡ್ರು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಗೌತಮ್ ಶ್ರೀವತ್ಸ ಅವರ ಸಂಗೀತವಿದೆ. ರಘುನಾಥ್ ಅವರು ಸಂಕಲನ ಮಾಡಿದರೆ, ಮಧುಸೂದನ್ ಮತ್ತು ಶ್ಯಾಮ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸದ್ಯಕ್ಕೆ “ಕಡೆಮನೆ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನಡೆಯುತ್ತಿದ್ದು, ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ನಲ್ಲಿ ಪ್ರೇಕ್ಷಕರ ಮುಂದೆ ತರಲು ಅಣಿಯಾಗಿದ್ದಾರೆ ನಿರ್ಮಾಪಕರು.