ದಟ್ಟ ಕಾಡು, ಮಧ್ಯೆ ಮಧ್ಯೆ ತೂರಿ ಬರಲು ಪ್ರಯತ್ನಿಸುತ್ತಿರುವ ಎಳೆಯ ಬಿಸಿಲು ಬೆಳಿಗ್ಗೆ ಆರು ಗಂಟೆಗೆ ಕಾಡಿನಲ್ಲಿ ನಮ್ಮನ್ನು “ನೇಚರ್ ವಾಕ್’ಗೆ ಕರೆದುಕೊಂಡು ಹೊರಟಿದ್ದ ಗೈಡ್ ಹಕ್ಕಿಗಳ ಮಾಹಿತಿಯಿದ್ದ ಪುಸ್ತಕ ಕೈಯಲ್ಲಿ ಹಿಡಿದು ಅಲ್ಲಲ್ಲಿ ಹಕ್ಕಿಗಳನ್ನು ತೋರಿಸುತ್ತ ನಡೆದಿದ್ದ. ಗಿಡ-ಮರಗಳನ್ನು ಗುರುತು ಹಿಡಿದು ಹೆಸರಿಸುವ ಪ್ರಯತ್ನವನ್ನು ಗುಂಪಿನ ಎಲ್ಲರೂ ಮಾಡುತ್ತಿದ್ದರು. ದಾಂಡೇಲಿಯ ಕಾಳಿ ನದಿಯ ದಂಡೆಯಲ್ಲಿ ಉದ್ದಕ್ಕೂ ರಿಸಾರ್ಟ್‌ಗಳು. ರಿಸಾರ್ಟ್‌ಗಳಾದರೂ ಇಲ್ಲಿ ಮದ್ಯಪಾನ- ಕ್ಯಾಂಪ್‌ಫೈರ್ ನಿಷೇಧ. ಹಕ್ಕಿಗಳನ್ನು- ಪ್ರಾಣಿಗಳನ್ನು ಕಾಡುವಂತಿಲ್ಲ- ಹೊಡೆಯುವಂತಿಲ್ಲ. ಮರದ ಮೇಲಿನ ಟ್ರೀ ಹೌಸ್ ಗಳು, ಕಾಟೇಜ್‌ಗಳು. ಮೊಬೈಲ್‌ನ ಸಿಗ್ನಲ್ಲೇ ಇಲ್ಲ! ರೆಸಾರ್ಟ್‌ನಲ್ಲಿದ್ದ ಒಂದೇ ಒಂದು ಟಿ. ವಿ.ಯೂ ಕೆಟ್ಟು ಕೂತಿತ್ತು! ಪ್ರಕೃತಿ ಪಾಠಕ್ಕೆ ಹೇಳಿ ಮಾಡಿಸಿದಂತಹ ವಾತಾವರಣ.
ಪ್ರಕೃತಿ ಪಾಠ ಕೇಳುತ್ತಲೇ “ವೈಟ್ ವಾಟರ್ ರ್ಯಾrಂಗ್’ ಬಗ್ಗೆ ನಮ್ಮ ಗೈಡ್ ಹೇಳಿದ್ದ. ಕಾಳಿ ನದಿಯಲ್ಲಿ 9 ಕಿ. ಮೀ. ದೂರ ಒಟ್ಟು 9 “ರ್ಯಾಪಿಡ್’ಗಳು- ಬಲವಾದ ತಿರುವುಗಳಲ್ಲಿ ರೋಚಕವಾದ ಸಾಹಸ ಕ್ರೀಡೆ. ದೋಣಿಯಂಥದ್ದೇ “ರ್ಯಾಫ್ಟ್’ಗಳಲ್ಲಿ ಪರಿಣತರು ನಮ್ಮನ್ನೂ ಹುರಿದುಂಬಿಸುತ್ತ ತೇಲಿಸುತ್ತಾರೆ, ಕೆಲವೊಮ್ಮೆ ಮುಳುಗಿಸುತ್ತಾರೆ! ಜ್ಯಾಕೆಟ್-ಹೆಲ್ಮೆಟ್‌ಗಳಿಂದ, ಅಪಾಯವಾದೀತೆಂದು ಹೆದರುವ ಭಯವಿಲ್ಲ. ಒದ್ದೆಯಾಗಲು ಮುಜುಗರಪಡಬಾರದು ಅಷ್ಟೆ.
ರ್ಯಾಫ್ಟಿಂಗ್‌ನಲ್ಲಿ ಮೂರುವರೆ ಗಂಟೆ ತೇಲಿ-ಮುಳುಗಿ-ಕೂಗಿ ಎದ್ದ ಮೇಲೆ ಮರಳುವಷ್ಟರಲ್ಲಿ “5 ಗಂಟೆಗೆ ಹಾರ್ನಿಬಿಲ್ ಮಡ್‌ಬಾತ್ ತೋರಿಸುತ್ತಾರೆ’ ಎಂಬ ಮಾತು ಕೇಳಿ ಬಂದಿತ್ತು.
ಏನಿದು ಹಾರ್ನಿಬಿಲ್ ಮಡ್‌ಬಾತ್?
ದಾಂಡೇಲಿಯ ಅರಣ್ಯದ ಸುತ್ತಮುತ್ತ ಕಾಳಿಯ ದಂಡೆಯಲ್ಲಿ ಹಾರ್ನಿಬಿಲ್ ಎಂಬ ಪಕ್ಷಿಗಳು ಇರುತ್ತವೆ. ಉದ್ದ ಕೊಕ್ಕಿನ ಚಂದದ ಹಕ್ಕಿಗಳಿವು. ಪ್ರಾಣಿ-ಪಕ್ಷಿಗಳ ವಂಶಾಭಿವೃದ್ಧಿಯ ವಿಶಿಷ್ಟ ರೀತಿಗಳನ್ನು ಇವುಗಳಲ್ಲಿಯೂ ಕಾಣಬಹುದು. ಹೆಣ್ಣು ಮೊಟ್ಟೆ ಇಡುವಾಗ ಒಂದು ಪೊಟರೆ ಯೊಳಕ್ಕೆ ಹೊಕ್ಕು ಅಲ್ಲಿ ಗಂಡು ಹಕ್ಕಿಯೊಡಗೂಡುತ್ತದೆ. ಗಂಡು ಹಕ್ಕಿ ಹೊರಬಂದು ಇಡೀ ಪೊಟರೆಯನ್ನು “ಸೀಲ್’ ಮಾಡಿಬಿಡುತ್ತದೆ.
ಗಂಡು ಹಕ್ಕಿ ಹೆಣ್ಣು ಹಕ್ಕಿಗೆ ಒಂದು ಸಣ್ಣ ತೂತಿನ ಮೂಲಕ ಹಣ್ಣು-ಹಂಪಲುಗಳನ್ನು ಉಣಿಸುತ್ತದೆ. ಆಕಸ್ಮಾತ್ ಈ ಸಮಯದಲ್ಲಿ ಗಂಡಿಗೆ ಏನಾದರೂ ಆಯಿತೆಂದರೆ ಇಡೀ ಕುಟುಂಬ ಸಾಯುತ್ತದೆ. ಅಂದರೆ ಇಡೀ ಕುಟುಂಬಕ್ಕೆ ಗಂಡೇ ದಿಕ್ಕು! 60 ದಿನಗಳ ಈ ಸಂಸಾರ ಚಕ್ರದಲ್ಲಿ ಸುಮಾರು 30 ಬಗೆಯ ಹಣ್ಣುಗಳನ್ನು ಹೆಣ್ಣಿಗೆ ಕಷ್ಟಪಟ್ಟು ತಂದು ನೀಡುತ್ತದೆ ಗಂಡು ಹಕ್ಕಿ. ಹಾರ್ನಿಬಿಲ್ ಹಕ್ಕಿಗಳ ಮತ್ತೂಂದು ಕುತೂಹಲಕಾರಿಯಾದ ನಡವಳಿಕೆ ಅವುಗಳು ಪ್ರತಿದಿನ ಸಂಜೆ ಮಾಡುವ “ಮಡ್‌ಬಾತ್’.
ಮಣ್ಣಿನಲ್ಲಿ ಹೊರಳಾಡಿ, ಧೂಳೆಬ್ಬಿಸಿ ಅವು ಆನಂದ ಪಡುತ್ತವೆ. ಕಾಳಿ ನದಿಯ ದಂಡೆಯಲ್ಲಿ ಕುರುಚಲು ಗಿಡಗಳ ಪ್ರದೇಶವಿದೆ. ಸುತ್ತ ದೊಡ್ಡ ಬಯಲು. ಅಲ್ಲಿ ಸದ್ದು ಮಾಡದೆ ಕಾಯುವ ಸಹನೆ ನಮಗೆ ಬೇಕು. ನಮ್ಮೊಡನೆ ಇನ್ನಿಬ್ಬರು ಹೆಸರು ಮಾಡಿದ “ಹವ್ಯಾಸಿ’ ಎಂದು ಹೇಳಿಕೊಳ್ಳುವ ಆದರೆ ಪರಿಣಿತರೇ ಆದ ಛಾಯಾಗ್ರಾಹಕರು, ಉಮೇಶ್ ಮತ್ತು ಡಾ. ಶ್ಯಾನ್‌ಭಾಗ್ ಅಪರೂಪದ ಫೋಟೋಗಳಿಗಾಗಿ ತಮ್ಮ ಉದ್ದದ ಕ್ಯಾಮರಾ, ವಿವಿಧ ಬಗೆಯ ಲೆನ್ಸ್‌ಗಳನ್ನು ಹಿಡಿದು ಕಾಯುತ್ತಿದ್ದರು.
ನಮ್ಮದೇ ಉಸಿರಾಟದ ಸದ್ದು ಬಿಟ್ಟರೆ, ನೀರವ ಮೌನ. ಕಾಡಿನ ಶಬ್ದ. ಕಾಯುತ್ತ ಕಾಯುತ್ತ ಯಾವುದೋ ಮುಖ್ಯವಾದ ಘಟನೆಯನ್ನು ನಿರೀಕ್ಷಿಸುವ ಅನುಭವ. ಇದ್ದಕ್ಕಿದ್ದಂತೆ ಒಂದು ಹಾರ್ನಿಬಿಲ್ ಬಂದು ಮಣ್ಣಿನಲ್ಲಿ ಕುಳಿತು ಆಕಡೆ ಈಕಡೆ ನೋಡತೊಡಗಿತು. ನಂತರ ಇನ್ನೊಂದು, ನೋಡು ನೋಡುತ್ತಿದ್ದಂತೆ 30-40 ಹಾರ್ನಿಬಿಲ್ ಗಳು ಬಂದು ಧೂಳೆಬ್ಬಿಸಿ, ಮಣ್ಣಿನಲ್ಲಿ ಹೊರಳಲಾರಂಭಿಸಿದವು. ಸುಮಾರು 5 ರಿಂದ 10 ನಿಮಿಷ ಈ ಅದ್ಭುತ ದೃಶ್ಯ ನಮ್ಮ ಮುಂದೆಯೇ ನಡೆಯಿತು. ಒಂದು ಹಾರಿತು, ಪ್ರದರ್ಶನ ಮುಗಿಯಿತು ಎಂಬ ಸೂಚನೆ ಅದು ಕೊಟ್ಟಿತೇನೋ ಎನ್ನುವಂತೆ ಎಲ್ಲವೂ ಒಂದಾದ ಮೇಲೆ ಒಂದು ಹಾರಿ ನದಿಯ ಆ ದಂಡೆಗೆ ಹೊರಟೇಬಿಟ್ಟವು. ಕೆಲವೇ ನಿಮಿಷಗಳಲ್ಲಿ ಹಾರ್ನಿಬಿಲ್ ಗಳು ಕೆದರಿದ್ದ ಮಣ್ಣಷ್ಟೇ ಅಲ್ಲಿ ಉಳಿಯಿತು.
ಅವು ಹೀಗೆ “ಮಡ್‌ಬಾತ್’ ಏಕೆ ಮಾಡುತ್ತವೆ ಎಂಬ ಕುತೂಹಲ. ಛಾಯಾಗ್ರಹಣದೊಂದಿಗೇ, ಪಕ್ಷಿಗಳ ಜ್ಞಾನವನ್ನೂ ಸಾಕಷ್ಟು ಹೊಂದಿರುವ ಉಮೇಶ್ ಅವರು ವಿವರಿಸಿದರು. ಹಾರ್ನ್ ಬಿಲ್ ಹಕ್ಕಿಗಳು ತಾವು ತಿಂದ ಹಣ್ಣು – ಕೀಟಗಳಲ್ಲಿನ ವಿಷಯುಕ್ತ ವಸ್ತುಗಳನ್ನು ((toxins) ತೆಗೆದುಹಾಕಲು ಮೈಮೇಲಿನ ಚಿಕ್ಕಪುಟ್ಟ ಗಾಯಗಳನ್ನು ಮಾಯಿಸಲು, ಮೈಮೇಲೆ ಅಂಟಿಕೊಂಡಿರುವ ಹುಳಗಳನ್ನು ತೆಗೆಯಲು “ಮಡ್‌ಬಾತ್’ ಮಾಡುತ್ತವೆಯಂತೆ. ನನ್ನ ಮನೋವೈದ್ಯಕೀಯ ಬುದ್ಧಿಗೆ, ಇದು ಒಂದು ರೀತಿಯಲ್ಲಿ ಅವುಗಳ ಸಮೂಹವಾಗಿ ತೋರುವ ಸಂತೋಷದ “ಪಾರ್ಟಿ’ಯೂ ಇರಬಹುದು ಎನಿಸಿತು. ಹೆಣ್ಣು ಹಕ್ಕಿ ಪೂರ್ತಿಯಾಗಿ ಗಂಡನ್ನು ನಂಬುವುದು, ಗಂಡು ಹಕ್ಕಿ ಮೋಸ ಮಾಡದೆ ಏಕಪತ್ನಿವ್ರತಸ್ಥನಾಗಿ ನಂಬಿಕೆ ಉಳಿಸಿಕೊಳ್ಳುವುದು ಅಚ್ಚರಿಯೆನಿಸಿತು!
ಹಾರ್ನಿಬಿಲ್ ಗಳ “ಮಡ್‌ಬಾತ್’ ಆದಮೇಲೆ ಮನುಷ್ಯರಿಗೆ ಜಾಕುಝೀ ಮಜಾ. ಸ್ವಲ್ಪ ದೂರ ದೋಣಿಯಲ್ಲಿ ಸಾಗಿ, ಕಾಡೊಳಕ್ಕೆ ನಡೆದು ಹೋದರೆ ಕಾಳಿ ನದಿಯ ಬಂಡೆಗಳು ಸಹಜವಾಗಿ ಅಲ್ಲಲ್ಲಿ ಮೆಟ್ಟಿಲುಗಳಾಗಿ ಒಡೆದಿವೆ. ಅವುಗಳ ಮೇಲೆ ಬೇರೆ ಬೇರೆ ಎತ್ತರದಿಂದ ಭಿನ್ನ ರಭಸದ ತೀವ್ರತೆಯ ಹಲವು ಝರಿಗಳು. ನೀವು ಅಲುಗಾಡದೆ ಕುಳಿತರೆ ಬೆನ್ನು – ಕೈ – ಕಾಲುಗಳಿಗೆ ರಭಸದಿಂದ ನೀರು ಬಂದೆರಗುತ್ತದೆ. ಇದೇ “ನ್ಯಾಚುರಲ್ ಜಾಕುಝೀ” Natural Jacuzzi” ಮೈಕೈ ಕಾಲುಗಳಿಗೆ ಒಳ್ಳೆಯ “ಮಸಾಜ್’.
ಕೆ. ಎಸ್. ಪವಿತ್ರಾ
(2017ರ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಲೇಖನ)