Advertisement

ನಾಗಾಲ್ಯಾಂಡ್‌ನ‌ಲ್ಲಿ  ಹಾರ್ನ್ಬಿಲ್‌ ಫೆಸ್ಟಿವಲ್‌

08:15 AM Mar 11, 2018 | |

ಈಶಾನ್ಯ ಭಾರತದ “ಅಷ್ಟಭುಜ’ಗಳು ಎನಿಸುವ 8 ರಾಜ್ಯಗಳ ಪೈಕಿ ನಾಗಾಲ್ಯಾಂಡ್‌ ತನ್ನದೇ ಹಿರಿಮೆ, ವೈಶಿಷ್ಟ ತುಂಬಿದ ಸುಂದರ ನಾಡು. ಆಧುನಿಕತೆಯ ಜತೆಗೆ, ತಂತಮ್ಮ  ಪರಂಪರೆಯ ಆಡುಭಾಷೆ, ತೊಡುವ ವೈವಿಧ್ಯದ ಉಡುಗೆ, ವರ್ಣಾಲಂಕಾರ, ಸಮರತೆಯ ನೈಪುಣ್ಯ, ಬಗೆಗೆಯ ಖಾದ್ಯಗಳು, ವಾದ್ಯಗಳು, ನರ್ತನ, ಸಾಮೂಹಿಕ ಗಾಯನ, ಕುಸ್ತಿ, ಗ್ರಾಮೀಣ ಕ್ರೀಡೆಗಳು, ಮನೆ-ಗುಡಿಸಲುಗಳ ವಿನ್ಯಾಸ- ಹೀಗೆ ನಾಗಾಲ್ಯಾಂಡಿನ ಸೌಂದರ್ಯವನ್ನು ಸಮಗ್ರವಾಗಿ ಬಿಂಬಿಸುವ ಹಬ್ಬ ಅಲ್ಲಿನ “ಹಾರ್ನ್ ಬಿಲ್‌ ಫೆಸ್ಟಿವಲ್‌’.

Advertisement

ಇತ್ತೀಚೆಗೆ, ದೇಶೀಯರಷ್ಟೇ ಅಲ್ಲ ವಿದೇಶಿಯರನ್ನೂ ಕೈಬೀಸಿ ಕರೆದ ಈ ನಾಗಾ-ಉತ್ಸವ ಅಲ್ಲಿನ “ಹಬ್ಬಗಳ ಹಬ್ಬ’ (Festival of Festivals) ಎಂಬ ಸುಂದರ ನಾಮಫ‌ಲಕದೊಂದಿಗೆ ನಮ್ಮನ್ನು ಸ್ವಾಗತಿಸಿತ್ತು. ಈ ಬಾರಿ ರಾಷ್ಟ್ರಪತಿ ರಾಮನಾಥ ಕೋವಿಂದರು ಈ ಉತ್ಸವವನ್ನು ಉದ್ಘಾಟಿಸಿದ್ದರು. ಉದ್ದಕೊಕ್ಕಿನ, ಆಕರ್ಷಕ ಮೈಮಾಟದ ಪುಟ್ಟಹಕ್ಕಿ  “ಹಾರ್ನ್ಬಿಲ್‌’ ನಾಗಾಲ್ಯಾಂಡಿನ ಜನತೆಯ ಆದರದ ಹಕ್ಕಿ. ಪ್ರಕೃತಿಯ ರಮಣೀಯತೆಯನ್ನು ಹೊದ್ದು ಮಲಗಿದ  ಈ ರಾಜ್ಯದ ರಾಜಧಾನಿ ಕೊಹಿಮಾದ  ಹೊರವಲಯದ ಸುಮಾರು 10 ಕಿ.ಮೀ. ದೂರದ, ಹಸಿರು ಗುಡ್ಡದ ತಪ್ಪಲು ಪ್ರದೇಶದ ಕಿಸಾಮಾ ಗ್ರಾಮ ಈ ಉತ್ಸವದ ಮೆರುಗು ಹೊಂದಿದ, ಸೌಭಾಗ್ಯ ಹೊಂದಿದ ತಾಣ. ಅಲ್ಲಿನ ಪ್ರವೇಶದ್ವಾರ ಪ್ರವೇಶಿಸುತ್ತಿದ್ದಂತೆಯೇ, ಏರುಬೆಟ್ಟದ ಹಂತಹಂತಗಳು “ಅಬ್ಟಾ ಇದೆಂತಹ ವರ್ಣರಂಜಿತ ಲೋಕ’ ಎಂಬುದಾಗಿ ನಮ್ಮನ್ನಲ್ಲಿ ನಿಬ್ಬೆರಗಾಗಿಸುತ್ತದೆ. ಪತ್ನಿàಸಮೇತರಾಗಿ ಸಾಗಿದಾಗ ವಿಸ್ಮಯ ನಾಗಾಲೋಕ ತೆರೆದುಕೊಳ್ಳುತ್ತ ಹೋಯಿತು. ಜತೆಜತೆಗೇ, ಈ ಬುಡಕಟ್ಟು ಜನಾಂಗದ ಶೌರ್ಯ, ನೆಲದ ಮೇಲಿನ ಪ್ರೀತಿ, ಪ್ರಾಚೀನತೆ, ಸಾಂಪ್ರದಾಯಿಕತೆ ಎಲ್ಲವೂ ಅನಾವರಣಗೊಳ್ಳುತ್ತ, ಹೊಸತೊಂದು ಜಗತ್ತನ್ನೇ ಕಣ್ಣೆದುರು ಮೂಡಿಸುತ್ತಿತ್ತು. 

ಇಲ್ಲಿನ ಪ್ರತಿಯೊಂದು ಜಿಲ್ಲೆಯೂ ತನ್ನದೇ ಬುಡಕಟ್ಟು , ವೇಷಭೂಷಣ, ಆಹಾರ ಪದ್ಧತಿ, ಆಡುಭಾಷೆ, ಗ್ರಾಮೀಣ ಹಾಡು, ದೇಸೀ ಆಟಗಳು, ಬೇಟೆಯ ವಿಧಾನ, ಬಿದಿರಿನ ಮನೆಗಳ ವಿನ್ಯಾಸ, ಸಾಧನ ಸಲಕರಣೆಗಳು- ಹೀಗೆ ಎಲ್ಲವನ್ನೂ ಹೊಂದಿದೆ. ಅವೆಲ್ಲದರ ಅಚ್ಚುಕಟ್ಟಿನ ಪ್ರದರ್ಶನ, ಅನುಭವವೇದ್ಯವಾಗುವಂತೆ ಜೋಡಿಸಿಟ್ಟ, ವ್ಯವಸ್ಥೆಗೊಳಿಸಿದ ನಾಗಾಲ್ಯಾಂಡಿನ ಪ್ರವಾಸೋದ್ಯಮ ಇಲಾಖೆಯ ಪ್ರಯಾಸ ಶ್ಲಾಘನೀಯ. ಅಲ್ಲಿನ ಸಾಲು ಸಾಲು ವಿಹಾರ, ಪಾನೀಯದ ಅಂಗಡಿಗಳಲ್ಲಿ ವಿದೇಶಿಯರೇ ಬಹುಸಂಖ್ಯೆಯಲ್ಲಿ  ಆಹ್ಲಾದದಿಂದ ತಿಂಡಿತಿನಿಸುಗಳನ್ನು  ಸವಿಯುತ್ತಿದ್ದರು. ಅಲ್ಲಲ್ಲಿ  ತಂತಮ್ಮ ಬುಡಕಟ್ಟಿನ ವೇಷಭೂಷಣದ ಯುವಕ-ಯುವತಿಯರ  ಮಧ್ಯೆ ತಾವೂ ಸಾಂಪ್ರದಾಯಿಕ ಉಡುಪು ತೊಟ್ಟು  ಭಾವಚಿತ್ರ ಕ್ಲಿಕ್ಕಿಸುತ್ತಿದ್ದರು. ಅಲ್ಲಿನ ಸ್ಟೇಡಿಯಂನಲ್ಲಿ ಒಂದರ ಬಳಿಕ ಇನ್ನೊಂದು ಜಾನಪದ ಸಾಮೂಹಿಕ ನೃತ್ಯ, ಸಮರಕಲೆಯ ಪ್ರದರ್ಶನ, ಜನಪದ ಗಾಯನ, ಸಾಹಸಕ್ರೀಡೆ ಜರಗುತ್ತಲೇ ಇತ್ತು. ಅದೇ ರೀತಿ ನಾಗಾಲ್ಯಾಂಡಿನ ವೈವಿಧ್ಯಮಯ ಪುಷ್ಪಗಳ, ಹಣ್ಣುಗಳ ಗಿಡಗಳ ಪ್ರದರ್ಶನ ಮತ್ತು ಮಾರಾಟದ ಭರಾಟೆಯೂ ಚಿತ್ತ ಸೆಳೆಯುವಂತಿತ್ತು. ಪ್ರತಿನಿತ್ಯ ಸುಮಾರು 80 ಸಾವಿರಕ್ಕಿಂತಲೂ ಮಿಕ್ಕಿದ ಪ್ರವಾಸಿಗಳನ್ನು ಅತ್ಯಂತ ಮುದಗೊಳಿಸಿ, ಮರಳಿ ಕಳುಹಿಸುವ ಈ ಹಾರ್ನ್ಬಿಲ್‌ ಉತ್ಸವ ನಿಜಕ್ಕೂ ಪ್ರವಾಸಿಗರ ಕಣ್ಣು, ಮನಸ್ಸನ್ನು ತಣಿಸುವ ಅತ್ಯಾಕರ್ಷಕ ಪಾರಂಪರಿಕ ಹಬ್ಬ. ಮೇಲಾಗಿ, ಇಂತಹ  ಶ್ರೀಮಂತ ಸಾಂಸ್ಕೃತಿಕ ಸೆಲೆ ಹೊಂದಿದ್ದ ನಾಗಾಲ್ಯಾಂಡ್‌ ವಿಶಾಲ ಭಾರತದ ಅವಿಭಾಜ್ಯ ಅಂಗ ಎನ್ನುವ ಹೆಮ್ಮೆ , ಸಂತಸವೂ ನಮ್ಮ  ಹೃದಯವನ್ನು  ಆವರಿಸುತ್ತದೆ.

ಪಿ. ಅನಂತಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next