Advertisement

ಹೊರಟ್ಟಿ ನಿಜವಾದ ಶಿಕ್ಷಕರ ಪ್ರತಿನಿಧಿ

09:28 AM Jun 12, 2022 | Team Udayavani |

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿಯವರು ಛಲ ಮತ್ತು ಸಕಾರಾತ್ಮಕ ಚಿಂತನೆವುಳ್ಳವರಾಗಿದ್ದು, ಅವರು ನಿಜವಾದ ಶಿಕ್ಷಕರ ಪ್ರತಿನಿಧಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ವಿದ್ಯಾನಗರ ಬಿವಿಬಿ ಕ್ಯಾಂಪಸ್‌ನ ಕೆಎಲ್‌ಇ ಬಯೋಟೆಕ್‌ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಧಾನ ಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರವಾಗಿ ಶಿಕ್ಷಕ ಮತದಾರರನ್ನುದ್ದೇಶಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಕಳೆದ 42 ವರ್ಷಗಳಿಂದ ಅಪಾರ ಸಾಧನೆ ಮಾಡಿದ್ದಾರೆ. ಶಿಕ್ಷಕರ ಹಲವಾರು ಕ್ಲಿಷ್ಟಕರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಅವರ ಹೋರಾಟಗಳ ಫಲವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕಾನೂನು ಬದಲಾವಣೆ ಆಗಿದೆ. ಶಿಕ್ಷಕರು ಹಾಗೂ ಬಸವರಾಜ ಹೊರಟ್ಟಿ ಅವರದ್ದು ತಾಯಿ-ಮಕ್ಕಳ ಸಂಬಂಧ. ಹೊರಟ್ಟಿ ಅವರು ಈ ಎತ್ತರಕ್ಕೆ ಏರಲು ಅವರ ಕಠಿಣ ಪರಿಶ್ರಮ ಕಾರಣ. ಶಿಕ್ಷಣ ಕ್ಷೇತ್ರದ ಜೊತೆ ನಾಡಿನ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ. ನಮಗೆ ಅವರನ್ನು ಸೋಲಿಸಲಾಗದೆ ಬೇಸರವಾಗಿತ್ತು. ಅವರಿಗೆ ಪಕ್ಷದ ಬಲವಿಲ್ಲದೆ ಬೇಸರವಾಗಿತ್ತು. ಈಗ ಗೆಲ್ಲುವ ಕುದುರೆ ಹಾಗೂ ಗೆಲ್ಲಿಸುವ ಪಕ್ಷ ಒಂದಾಗಿದೆ. ಎರಡು ಶಕ್ತಿಗಳು ಸೇರಿದಾಗ ಸಮಾಜಕ್ಕೆ, ಶಿಕ್ಷಣಕ್ಕೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗಬೇಕು. ಅದು ಆಗಲಿದೆ ಎನ್ನುವ ನಂಬಿಕೆ ಇದೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಮೊದಲು ಬಿಜೆಪಿ ವಿರುದ್ಧ ಹೊರಟ್ಟಿ ಎಂಬುದಾಗಿತ್ತು. ಈಗ ಬಿಜೆಪಿ ಪ್ಲಸ್‌ ಹೊರಟ್ಟಿ ಆಗಿದೆ. ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡುವ ಮೂಲಕ ಪ್ರಧಾನಿ ಮೋದಿ ಕೈ ಬಲಪಡಿಸಿ. ಶಿಕ್ಷಕರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳನ್ನು ಪಡೆಯುವ ವಿಶ್ವಾಸವಿದೆ. ಶಿಕ್ಷಕರ ವಿಶ್ವಾಸ-ನಂಬಿಕೆ ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.

Advertisement

ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಡಾ| ಪ್ರಭಾಕರ ಕೋರೆ ಪ್ರಾಸ್ತಾವಿಕ ಮಾತನಾಡಿ, ಕೆಎಲ್‌ಇಯ ಈ ಕೇಂದ್ರದಲ್ಲಿ 3200 ಶಿಕ್ಷಕರು ಇದ್ದಾರೆ. ಅವರೆಲ್ಲ ಹೊರಟ್ಟಿಯವರಿಗೆ ಪ್ರಥಮ ಪ್ರಾಶಸ್ತ್ಯ ಮತಕೊಟ್ಟು ಬಹುಮತದಿಂದ ಆರಿಸಿ ತರಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಶಾಸಕ ಅರವಿಂದ ಬೆಲ್ಲದ, ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ, ಮಹೇಶ ಟೆಂಗಿನಕಾಯಿ, ಮಹಾಂತೇಶ ಕವಟಗಿಮಠ ಮೊದಲಾದವರಿದ್ದರು. ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಸ್ವಾಗತಿಸಿದರು. ಮಹೇಂದ್ರ ಕೌತಾಳ ನಿರೂಪಿಸಿದರು.

ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸರಕಾರ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಯುವಕರಿಗೆ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಇನ್ನು 5 ವರ್ಷಗಳಲ್ಲಿ ಏಳು ಸರಕಾರಿ ಎಂಜಿನಿಯರಿಂಗ್‌ ಕಾಲೇಜ್‌ ಗಳನ್ನು ಐಐಟಿಗೆ ಮೇಲ್ದರ್ಜೆಗೇರಿಸಲಾಗುವುದು. ನವಕರ್ನಾಟಕದಿಂದ ನವಭಾರತ ನಿರ್ಮಾಣಕ್ಕಾಗಿ ಬಸವರಾಜ ಹೊರಟ್ಟಿಯವರಿಗೆ ತಮ್ಮ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು. -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಹೊರಟ್ಟಿಯವರಿಗೆ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರ ಸಮಸ್ಯೆಗಳು ಗೊತ್ತು. ಅವರ ಅನುಭವ ನಮಗೆ ಅಗತ್ಯವಿದೆ. ಅವರನ್ನು ಆರಿಸಿ ತಂದರೆ ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು, ಅಧಿವೇಶನದಲ್ಲಿ ಶಿಕ್ಷಕರ ಪರವಾದ ಸಾಕಷ್ಟು ಉತ್ತಮ ವಿಷಯಗಳು ಚರ್ಚೆಗೆ ಬರಲಿವೆ. -ಪ್ರಹ್ಲಾದ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next