ಶಿವಮೊಗ್ಗ: ನಮ್ಮ ಪೂರ್ವಜರು ಜಾರಿಗೆ ತಂದ ಯಾವುದೇ ಆಚರಣೆಗಳನ್ನು ಮೌಡ್ಯ ಎಂದು ಹೇಳಲು ಸಾಧ್ಯವೇ ಇಲ್ಲ. ಎಲ್ಲ ಆಚರಣೆಗಳ ಹಿಂದೆಯೂ ಒಂದಿಲ್ಲೊಂದು ವೈಜ್ಞಾನಿಕ ಕಾರಣಗಳು ಇದ್ದೇ ಇವೆ. ಇಂತಹ ಒಂದು ವೈಜ್ಞಾನಿಕ ಆಚರಣೆಯೇ ಹೊರಬೀಡು.
ಇಂದು ಕೊರೊನಾದಿಂದ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಹಿಂದೆಯೂ ಹಲವು ಸಾಂಕ್ರಾಮಿಕ ರೋಗದಿಂದ ಸಾವಿ ರಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದರು. ಇಂಥ ಸಾಂಕ್ರಾ ಮಿಕ ರೋಗಗಳಿಂದ ದೂರ ಇರುವ ಉದ್ದೇಶದಿಂದ ನಮ್ಮ ಪೂರ್ವಜರು ಕಂಡುಕೊಂಡ ಮಾರ್ಗವೇ ಹೊರಬೀಡು ಆಚರಣೆ.
ಶಿವಮೊಗ್ಗ ತಾಲೂಕಿನ ಮಂಡಘಟ್ಟ ಎಂಬ ಹಳ್ಳಿಯ ಜನರು ಪ್ರತಿ ಮೂರು ವರ್ಷಕ್ಕೊಮ್ಮೆ ಸೂರ್ಯ ಮೂಡುವ ಮೊದಲೇ ತಮ್ಮ ಸಾಕು ಪ್ರಾಣಿಗಳಾದ ಜಾನುವಾರು, ಕುರಿ, ಕೋಳಿ, ನಾಯಿ ಗಳೊಂದಿಗೆ ಊರನ್ನು ಖಾಲಿ ಮಾಡುತ್ತಾರೆ. ಊರಿಗೆ ಯಾರೂ ಪ್ರವೇಶಿಸ ಬಾರದು ಎಂಬ ಉದ್ದೇಶದಿಂದ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬೇಲಿ ನಿರ್ಮಿಸಿ ಇಡೀ ಊರಿಗೆ ದಿಗ್ಬಂಧನ ಹೇರಲಾಗುತ್ತದೆ. ಬಳಿಕ ಜನರು ತಮ್ಮ ಜಾನುವಾರುಗಳೊಂದಿಗೆ ತಮ್ಮ ಜಮೀನಿಗೆ ತೆರಳಿ ಅಲ್ಲಿಯೇ ಒಂದು ದಿನ ವಾಸ್ತವ್ಯ ಹೂಡುತ್ತಾರೆ.
ಹಿಂದೆ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಪ್ಲೇಗ್ ಬಂದು ಸಾವಿರಾರು ಮಂದಿ ಮೃತಪಡುತ್ತಿದ್ದರು. ಆಗ ಇಡೀ ಊರಿನ ಜನರು ತಮ್ಮ ಊರನ್ನು ತೊರೆದು ತಮ್ಮ ಜಮೀನುಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆಗ ಊರಿನಲ್ಲಿ ಯಾವ ಪ್ರಾಣಿಗಳೂ ಇಲ್ಲದಿರುವ ಕಾರಣಕ್ಕೆ ಸಾಂಕ್ರಾಮಿಕ ರೋಗಗಳು ತನ್ನಿಂತಾನೆ ತಗ್ಗುತ್ತಿತ್ತು. ಯಾರಾದರೂ ಊರಿನಲ್ಲಿ ಉಳಿದರೆ ಕಷ್ಟ ಎನ್ನುವ ಕಾರಣಕ್ಕೆ ಅಂದು ತಮ್ಮ ಜಮೀನಲ್ಲಿ ಮಾರಮ್ಮನ ಆರಾಧನೆ ಆರಂಭಿಸಿದ್ದರು. ಶತಮಾನ ಗಳ ಹಿಂದೆ ಆರಂಭಗೊಂಡ ಈ ಆಚರಣೆಯನ್ನು ಇಂದಿಗೂ ಮಂಢಘಟ್ಟದ ಜನರು ನಡೆಸಿಕೊಂಡು ಬರುತ್ತಿದ್ದಾರೆ. ಇಂದೂ ಸಹ ಜನ ಬೆಳ್ಳಂ ಬೆಳಗ್ಗೆಯೇ ತಮ್ಮ ಮನೆಗಳನ್ನು ತೊರೆದು ಊರಿನಿಂದ ಹೊರಗಿರುವ ತಮ್ಮ ಜಮೀನಿನಲ್ಲಿ ಸೇರಿದ ಜನರು ಅಲ್ಲಿಯೇ ಅಡುಗೆ ಮಾಡಿ ಊಟ ಮಾಡಿದರಲ್ಲದೆ, ಸ್ಥಳದಲ್ಲಿಯೇ ಮಾರಮ್ಮನ ಮೂರ್ತಿ ಸ್ಥಾಪಿಸಿ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾತ್ರಿಯಾದ ಮೇಲೆ ತಮ್ಮ ಮನೆಗಳಿಗೆ ತೆರಳಿ ವಿಶಿಷ್ಟ ಆಚರಣೆಗೆ ಅಂತ್ಯ ಹಾಡಿದರು.
ಇದನ್ನೂ ಓದಿ :ಕಲಾಮಂದಿರದಲ್ಲಿ ರಂಗ ತರಬೇತಿ ಶಿಬಿರಕ್ಕೆ ಚಾಲನೆ
ನಮ್ಮ ಪೂರ್ವಜರು ಆಚರಿಸಿಕೊಂಡು ಬಂದ ಆಚರಣೆಗಳನ್ನು ಮೌಡ್ಯ ಎನ್ನುವವರೇ ಹೆಚ್ಚು. ಆ ಆಚರಣೆಗಳಿಗೆ ಕಾರಣವೇನು ಎಂದು ಹುಡುಕಲು ಹೊರಟಾಗ ಮಾತ್ರ ನಮ್ಮ ಹಿಂದಿನವರ ಆಚರಣೆಗಳ ಉದ್ದೇಶ ತಿಳಿಯುತ್ತವೆ. ಹೊರಬೀಡು ಆಚರಣೆಯಂತೆಯೇ ಇತರೆ ಆಚರಣೆಗಳ ಉದ್ದೇಶವನ್ನು ತಿಳಿದುಕೊಂಡಾಗ ಮಾತ್ರ ನಮ್ಮ ಪೂರ್ವಜರ ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯನ್ನು ಅರಿಯಲು ಸಾಧ್ಯವಾಗುತ್ತದೆ ಎಂಬುದಂತೂ ನಿಜ.