ಮುಂಬಯಿ : ಉತ್ತರ ಪ್ರದೇಶದಲ್ಲಿ ಪ್ರಚಂಡ ವಿಜಯ ಸಾಧಿಸಿರುವ ಬಿಜೆಪಿಯನ್ನು ಶಿವಸೇನೆ ಅಭಿನಂದಿಸಿದೆ. ಅಯೋಧ್ಯೆಯಲ್ಲಿ ಈಗಿನ್ನು ಬೇಗನೆ ರಾಮ ಮಂದಿರ ನಿರ್ಮಾಣವಾಗುವುದೆಂಬ ಆಶಯವನ್ನು ಅದು ವ್ಯಕ್ತಪಡಿಸಿದೆ.
“ರಾಮನ ಅಜ್ಞಾತವಾಸದ ಅವಧಿ ಇದೀಗ ಮುಗಿದಿದೆ. ಈಗಿನ್ನು ಅಯೋಧ್ಯೆಯಲ್ಲಿ ಬೇಗನೆ ರಾಮ ಮಂದಿರ ನಿರ್ಮಾಣವಾಗುವುದೆಂದು ನಾವು ಆಶಿಸುತ್ತೇವೆ’ ಎಂದು ಶಿವಸೇನೆಯ ಸಂಸದ ಸಂಜಯ ರಾವುತ್ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇದೀಗ ಹೊರಬಿದ್ದಿದೆ. ಈ ಚುನಾವಣೆಗಳಲ್ಲಿ ವಿಜಯ ಸಾಧಿಸಿರುವ ಬಿಜೆಪಿಯನ್ನು ನಾವು ಅಭಿನಂದಿಸುತ್ತೇವೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಅಭಿನಂದಿಸುತ್ತೇವೆ’ ಎಂದು ರಾವುತ್ ಹೇಳಿದರು.
ಪಂಜಾಬ್‌ನಲ್ಲಿ ಜನರು ಬದಲಾವಣೆಯನ್ನು ಬಯಸಿದರು. ಹಾಗಾಗಿ ಅವರು ಆಡಳಿತರೂಢ ಪಕ್ಷಕ್ಕೆ ಪರ್ಯಾಯವಾಗಿರುವ ಪಕ್ಷಕ್ಕೆ ಮತ ಹಾಕಿ ಅಧಿಕಾರಕ್ಕೇರಿಸಿದ್ದಾರೆ ಎಂದು ರಾವುತ್ ಪ್ರತಿಕ್ರಿಯಿಸಿದರು.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಆಗಿರುವ ಹೀನಾಯ ಸೋಲಿಗೆ ಪ್ರತಿಕ್ರಿಯಿಸಿದ ರಾವುತ್, ಮೋದಿ ಅಲೆ ಮುಂಬಯಿ ಪ್ರವೇಶಿಸುವುದನ್ನು ತಡೆದ ಶಿವಸೇನೆಯಿಂದ ಈಗಿನ್ನು ಇತರ ಪಕ್ಷಗಳು ಪಾಠ ಕಲಿಯಬೇಕಾಗಿದೆ ಎಂದು ಹೇಳಿದರು.