ಶಿವಾನಿ (ಶ್ವೇತಾ ಶ್ರೀವಾತ್ಸವ್) ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ. ಸರ್ಕಾರಿ ಅಧಿಕಾರಿಗಳನ್ನು ಎರಡು ವರ್ಷಕ್ಕೂ ಮುನ್ನ ವರ್ಗಾವಣೆ ಮಾಡಬಾರದು ಎಂಬ ಸರ್ಕಾರದ ಮಾರ್ಗಸೂಚಿಯಿದ್ದರೂ, ಕೆಲವೊಂದು ಪಟ್ಟಭದ್ರ ಹಿತಾಸಕ್ತಿ ಮತ್ತು ರಾಜಕೀಯ ಪ್ರಭಾವದಿಂದಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ಎಂಟೇ ತಿಂಗಳಲ್ಲಿ ಶಿವಾನಿ ವರ್ಗಾವಣೆಯಾಗಬೇಕಾಗುತ್ತದೆ. ಸರ್ಕಾರಿ ನೌಕರಳಾಗಿ ತನ್ನ ಹಕ್ಕುಗಳನ್ನು ಪ್ರತಿಪಾದಿಸುವ ಶಿವಾನಿ, ಸರ್ಕಾರದ ಈ ವರ್ಗಾವಣೆ ಆದೇಶದ ವಿರುದ್ದ ಕೆಎಟಿ (ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ) ಮೊರೆ ಹೋಗುತ್ತಾಳೆ. ಅಲ್ಲೂ ಆಕೆಗೆ ನ್ಯಾಯ ಸಿಗದಿದ್ದಾಗ ಹೈಕೋರ್ಟ್, ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾಳೆ. ಹೀಗೆ ವರ್ಷಗಳ ಕಾಲ ತನ್ನ ಹಕ್ಕಿಗಾಗಿ ಹೋರಾಡುವ ಶಿವಾನಿ ಈ ಹೋರಾಟದಲ್ಲಿ ಗೆಲುವು ಸಾಧಿಸುತ್ತಾಳಾ? ಶಿವಾನಿ ಕಾನೂನು ಹೋರಾಟ ಹೇಗಿರುತ್ತದೆ ಅನ್ನೋದೆ “ಹೋಪ್’ ಸಿನಿಮಾದ ಕಥಾಹಂದರ.
ಅವಧಿಗೂ ಮುನ್ನ ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ಅದರ ವಿರುದ್ಧ ಕಾನೂನಾತ್ಮಕ ಹೋರಾಟ ಇಂಥ ವಿಷಯಗಳ ಬಗ್ಗೆ ಆಗಾಗ್ಗೆ ಮಾಧ್ಯಮಗಳಲ್ಲಿ ಕೇಳಿರುತ್ತೀರಿ. ಆದರೆ ಇಂಥ ವರ್ಗಾವಣೆಯಿಂದ ಆಡಳಿತಾತ್ಮಕ ವ್ಯವಸ್ಥೆಯ ಮೇಲಾಗುವ ಪರಿಣಾಮಗಳು, ಯಾವಾಗಲೂ ವರ್ಗಾವಣೆಯಾಗುತ್ತಿರುವ ಅಧಿಕಾರಿಗಳ ಮನಸ್ಥಿತಿ, ಅವರ ಹೋರಾಟಗಳ ಮೇಲೆ ಬೆಳಕು ಚೆಲ್ಲಿರುವ ಸಿನಿಮಾ “ಹೋಪ್’. ಇಡೀ ಸಿನಿಮಾ ಕೋರ್ಟ್ ರೂಮ್ ಡ್ರಾಮಾವಾಗಿ ಪೊಲಿಟಿಕಲ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ಜನ ಸಾಮಾನ್ಯರ ಅರಿವಿಗೆ ಬಾರದಂತಿರುವ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ರೀತಿ, ಅದರ ಹಿಂದಿನ ರಾಜಕೀಯ, ಆಡಳಿತದ ಮೇಲಾಗುವ ಪ್ರತಿಕೂಲ ಪರಿಣಾಮ, ನ್ಯಾಯಾಂಗ ಪ್ರಕ್ರಿಯೆ ವಿಧಾನ ಎಲ್ಲವನ್ನೂ “ಹೋಪ್’ ಸಿನಿಮಾದಲ್ಲಿ ತೆರೆಮೇಲೆ ಕಟ್ಟಿಕೊಡಲಾಗಿದೆ.
ಇಂಥದ್ದೊಂದು ವಿಷಯವನ್ನು ಸಿನಿಮಾವಾಗಿ ಆಯ್ಕೆ ಮಾಡಿಕೊಂಡಿರುವ ಚಿತ್ರತಂಡದ ಪ್ರಯತ್ನ ಮೊದಲಿಗೆ ಮೆಚ್ಚುವಂತಿದೆ. ಆದರೆ, ನಿರ್ದೇಶಕರು ಚಿತ್ರಕಥೆ ಮತ್ತು ನಿರೂಪಣೆ ಕಡೆಗೆ ಇನ್ನಷ್ಟು ಗಮನ ನೀಡಿದ್ದರೆ, “ಹೋಪ್’ ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಮೇಲೆ ಬರುವ ಸಾಧ್ಯತೆಯಿತ್ತು.
ಇನ್ನು “ಹೋಪ್’ ಸಿನಿಮಾದ ಸಂಪೂರ್ಣ ಕಥೆ ಶ್ವೇತಾ ಶ್ರೀವಾತ್ಸವ್ ನಿರ್ವಹಿಸಿರುವ ಶಿವಾನಿ ಪಾತ್ರದ ಸುತ್ತ ನಡೆಯುತ್ತದೆ. ಮೊದಲ ಬಾರಿಗೆ ಕೆಎಎಸ್ ಅಧಿಕಾರಿಯಾಗಿ ಶ್ವೇತಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರಾಮಾಣಿಕ ಅಧಿಕಾರಿಯಾಗಿ, ವ್ಯವಸ್ಥೆಯ ಲೋಪಗಳ ವಿರುದ್ದ ಹೋರಾಡುವ ಮಹಿಳೆಯಾಗಿ ಶ್ವೇತಾ ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಪ್ರಮೋದ್ ಶೆಟ್ಟಿ, ಅಶ್ವಿನ್ ಹಾಸನ್ ತಮ್ಮ ಪಾತ್ರಗಳಲ್ಲಿ ನೋಡುಗರಿಗೆ ಇಷ್ಟವಾಗುತ್ತಾರೆ.
ಚಿತ್ರದ ಛಾಯಾಗ್ರಹಣ, ಸಂಕಲನ, ಒಂದೆರಡು ಹಾಡುಗಳು ಗಮನ ಸೆಳೆಯುವಂತಿದೆ. ಮಾಮೂಲಿ ಹೊಡಿ-ಬಡಿ ಸಿನಿಮಾಗಳೆಂದರೆ ಮೂಗು ಮುರಿಯುವ, ಹೊಸಥರದ ಪ್ರಯತ್ನ ಬಯಸುವ ಪ್ರೇಕ್ಷಕರು ಒಮ್ಮೆ “ಹೋಪ್’ ನೋಡಿ ಬರಬಹುದು.
ಜಿ.ಎಸ್.ಕೆ