ಮುಂಬಯಿ: ಕಿಡ್ನಿ ತೊಂದರೆಯಿಂದಾಗಿ ಬಾಂದ್ರಾದ ಲೀಲಾವತಿ ಆಸ್ಪತ್ರೆಯ ಐಸಿಯುಗೆ ದಾಖಲಾಗಿರುವ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರು ಹಿತೈಷಿಗಳು ಮತ್ತು ಅಭಿಮಾನಿಗಳ ಪ್ರಾರ್ಥನೆಯ ಬಲದಲ್ಲಿ ಬೇಗನೆ ಗುಣಮುಖರಾಗುವರು ಎಂದು ಅವರ ಪತ್ನಿ, ಮಾಜಿ ನಟಿ ಸಾಯಿರಾ ಬಾನು ಹೇಳಿದ್ದಾರೆ.
92ರ ಹರೆಯದ ದಿಲೀಪ್ ಕುಮಾರ್ ಅವರ ದೇಹಾರೋಗ್ಯ ಇಂದು ಶುಕ್ರವಾರ ಕೂಡ ಕಳವಳಕಾರಿಯಾಗಿಯೇ ಮುಂದುವರಿದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕೆಲವು ವರದಿಗಳ ಪ್ರಕಾರ ದಿಲೀಪ್ ಕುಮಾರ್ ಅವರ ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಜಲೀಲ್ ಪಾರ್ಕರ್ ಅವರು ಮಾಧ್ಯಮದ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.
ಬಾಲಿವುಡ್‌ನ ಟ್ರ್ಯಾಜಿಡಿ ಕಿಂಗ್ ಎಂದೇ ಖ್ಯಾತರಾಗಿದ್ದ ನಟ ದಿಲೀಪ್ ಕುಮಾರ್ ಅವರು ಅಂದಾಜ್, ಆನ್, ಮಧುಮತಿ, ದೇವದಾಸ್, ಮುಘಲ್ ಎ ಆಜಮ್, ಗಂಗಾ ಜಮುನಾ, ಕ್ರಾಂತಿ, ಕರ್ಮಾ ಮುಂತಾಗಿ ಹಲವಾರು ಸ್ಮರಣೀಯ ಚಿತ್ರಗಳನ್ನು ನೀಡಿದ್ದಾರೆ.
1994ರಲ್ಲಿ ದಿಲೀಪ್ ಕುಮಾರ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ; 1994ರಲ್ಲಿ ಮದ್ಮ ವಿಭೂಷಣ ಪುರಸ್ಕಾರ ಸಂದಿದೆ.