Advertisement

ಅಪಾರ್ಟ್‌ಮೆಂಟ್‌ನಲ್ಲಿ ಹಾಪ್‌ಕಾಮ್ಸ್‌ ಮಳಿಗೆ

06:23 AM Feb 17, 2019 | |

ಬೆಂಗಳೂರು: ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿರುವ ತೋಟದ ಬೆಳಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್‌ಕಾಮ್ಸ್‌), ಇದೀಗ ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಹಾಪ್‌ಕಾಮ್ಸ್‌ ಮಾರಾಟ ಮಳಿಗೆ ತೆರೆಯಲು ಮುಂದಾಗಿದೆ.

Advertisement

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹಲವಾರು ವಸತಿ ಸಮುತ್ಛಯಗಳಿದ್ದು, ಅಲ್ಲಿ ಹಾಪ್‌ಕಾಮ್ಸ್‌ ಮಳಿಗೆ ತೆರೆಯುವುದರಿಂದ ವ್ಯಾಪಾರ ವಹಿವಾಟು ಹೆಚ್ಚಿಸಿಕೊಳ್ಳಬಹುದು ಎಂಬ ನಿರೀಕ್ಷೆ ಹಾಪ್‌ಕಾಮ್ಸ್‌ನದಾಗಿದೆ. ಈ ಸಂಬಂಧ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ವರ್ಷದಿಂದ ವರ್ಷಕ್ಕೆ ನಗರ ಬೆಳೆಯುತ್ತಲೇ ಇದೆ. ಇದಕ್ಕೆ ಅನುಗುಣವಾಗಿ ವಹಿವಾಟು ವಿಸ್ತರಣೆ ಹಾಗೂ ಸಾರ್ವಜನಿಕರ ಮನೆ ಬಾಗಿಲಿಗೆ ತಾಜಾ ಹಣ್ಣು ತರಕಾರಿ ತಲುಪಿಸಲು ವಸತಿ ಸಮುತ್ಛಯಗಳಲ್ಲಿ  ಹಾಪ್‌ಕಾಮ್ಸ್‌ ಮಾರಾಟ ಮಳಿಗೆಗಳನ್ನು ಆರಂಭಿಸಬೇಕು ಎಂಬುದು ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ ಉದ್ದೇಶವಾಗಿದೆ.

ಈ ಹಿಂದೆ ಸ್ಪೀಕರ್‌ ರಮೇಶ್‌ ಕುಮಾರ್‌ ಆರೋಗ್ಯ ಸಚಿವರಾಗಿದ್ದಾಗ ಹಾಪ್‌ಕಾಮ್ಸ್‌ ಹಿರಿಯ ಅಧಿಕಾರಿಗಳು ಆಸ್ಪತ್ರೆಗಳಲ್ಲಿ ಮಳಿಗೆ ತೆರೆಯಲು ಅವಕಾಶ ನೀಡುವಂತೆ ಕೋರಿದ್ದರು. ಸರ್ಕಾರದ ಅನುಮತಿ ಪಡೆದ ನಂತರ ಹಲವು ಆಸ್ಪತ್ರೆಗಳಲ್ಲಿ ಮಳಿಗೆ ತೆರೆಯಲಾಗಿದ್ದು, ವ್ಯಾಪಾರ ಕೂಡ ಉತ್ತಮವಾಗಿ ನಡೆಯುತ್ತಿದೆ. ಅದೇ ಪರಿಕಲ್ಪನೆಯಂತೆ ಈಗ ಅಪಾರ್ಟ್‌ಮೆಂಟ್‌ಗಳಲ್ಲೂ ಮಳಿಗೆ ತೆರೆಯಲು ಉದ್ದೇಶಿಸಲಾಗಿದೆ ಎಂದು ಹಾಪ್‌ಕಾಮ್ಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊಬೈಲ್‌ ಮಾರಾಟ ವಾಹನ: ಏಕಮುಖ ರಸ್ತೆ (ಒನ್‌ ವೇ), ಮೆಟ್ರೋ ನಿಲ್ದಾಣ ಮತ್ತು ಮೇಲ್ಸೇತುವೆ ನಿರ್ಮಾಣದಿಂದಾಗಿ ಬಿಟಿಎಂ ಲೇಔಟ್‌, ವಿಜಯನಗರ, ಮಾಗಡಿ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿರುವ ಹಾಪ್‌ಕಾಮ್ಸ್‌ ಮಾರಾಟ ಮಳಿಗೆಗಳಲ್ಲಿ ಅಷ್ಟೊಂದು ವ್ಯಾಪಾರ ನಡೆಯುತ್ತಿಲ್ಲ. ಆ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ಮಾರಾಟ ಮಳಿಗೆಗಳಿಗೆ ಬೀಗ ಹಾಕಬೇಕಾಗಿದೆ.

Advertisement

ಈ ಹಿಂದೆ ಬಿಬಿಎಂಪಿ ಮತ್ತು ಬಿಡಿಎ ನಗರದ ಜನವಸತಿ ಪ್ರದೇಶಗಳಲ್ಲಿ ಹಣ್ಣು-ತರಕಾರಿ ಮಾರಾಟ ಮಾಡಲು ಹಾಪ್‌ಕಾಮ್ಸ್‌ಗೆ ಜಾಗ ನೀಡಿದ್ದವು. ಆದರೆ ಆ ಸ್ಥಳಗಳಲ್ಲಿ ಈಗ ಏಕಮುಖ ಸಂಚಾರದ ಜತಗೆ ಕೆಲವು ಕಡೆ ಫ್ಲೇಓವರ್‌ಗಳು ನಿರ್ಮಾಣವಾಗಿದ್ದು, ಹೇಳಿಕೊಳ್ಳುವಷ್ಟು ವ್ಯಾಪಾರ ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಸಂಚಾರಿ ಮಾರಾಟ ವಾಹನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಈ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ಹಾಪ್‌ಕಾಮ್ಸ್‌ ಅಧ್ಯಕ್ಷ ಬಿ.ಎಸ್‌.ಚಂದ್ರೇಗೌಡ, ನಗರದಲ್ಲಿ 280 ಹಾಪ್‌ಕಾಮ್ಸ್‌ ಮಾರಾಟ ಮಳಿಗೆಗಳಿವೆ. ಅದರಲ್ಲಿ 45 ಮಳಿಗೆಗಳಲ್ಲಿ ಮಾರಾಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಆ ಹಿನ್ನೆಲೆಯಲ್ಲಿ 20 ಮೊಬೈಲ್‌ ಮಾರಾಟ ವಾಹನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಡ್ಡಿರಹಿತ ಸಾಲ ನೀಡಲು ಮನವಿ: ತೋಟದ ಬೆಳಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘವು ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ಹಾಗೂ ಆಸ್ಪತ್ರೆಗಳಿಗೆ ಹಣ್ಣು ಮತ್ತು ತರಕಾರಿಗಳನ್ನು ಪೂರೈಕೆ ಮಾಡುತ್ತಿದ್ದು, ಹಣ ಪಾವತಿಗೆ ಒಂದು ತಿಂಗಳಿಂದ ಮೂರು ತಿಂಗಳವರೆಗೆ ಕಾಲಾವಕಾಶ ನೀಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ 2 ಕೋಟಿ ರೂ.ವರೆಗೆ ಬಡ್ಡಿರಹಿತ ಸಾಲ ನೀಡಬೇಕು ಎಂದು ಹಾಪ್‌ಕಾಮ್ಸ್‌ ಪ್ರಸ್ತಾವನೆ ಸಲ್ಲಿಸಿದೆ.

ವ್ಯಾಪಾರ ವಿಸ್ತರಣೆಗಾಗಿ ಹಾಪ್‌ಕಾಮ್ಸ್‌ ಹಲವು ಯೋಜನೆ ರೂಪಿಸಿದೆ. ಅದರಂತೆ ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಡಾ.ಬಿ.ಎನ್‌.ಪ್ರಸಾದ್‌, ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next