Advertisement

ಒಮ್ಮೆ ನೋಡಿ ಸೊಬಗಿನ ಹೂಡೆ!

10:27 PM Jun 12, 2019 | mahesh |

ಸುಂದರವಾದ ಸಂಜೆಯ ವೇಳೆ ಏಕಾಂತ ಬಯಸುವ ಮನಸ್ಸುಗಳು ಕಡಲ ತಟಗಳಿಗೆ ಹೋಗುವುದು ಸಾಮಾನ್ಯ. ಆದರೆ ವಾರಾಂತ್ಯ ಅಥವಾ ರಜೆ ಬಂತೆಂದರೆ ಎಲ್ಲರೂ ಹೋಗ ಬಯಸುವುದು ಸಮುದ್ರ ತೀರಕ್ಕೆ. ಹೀಗಾಗಿ ಸಮುದ್ರ ತೀರದಲ್ಲಿ ಇಂದು ಶಾಂತತೆ ಇಲ್ಲ. ಸಾವಿರಾರು ಪ್ರವಾಸಿಗರು ಬರುವ ಕಾರಣ ಅಲ್ಲಿ ಏಕಾಂತವನ್ನು ಬಯಸುವುದ ಅಸಾಧ್ಯ. ಏಕಾಂತಕ್ಕಾಗಿ ಸಮುದ್ರ ತೀರವನ್ನು ಹುಡುಕುತ್ತಿರುವವರಿಗೆ ಉಡುಪಿಯಲ್ಲಿರುವ “ಹೂಡೆ ಬೀಚ್‌’ ಹೇಳಿ ಮಾಡಿಸಿದ ಜಾಗ. ಮಳೆಗಾಲ ಆರಂಭ ವಾಗಿದೆ. ಒಂದು ತಿಳಿ ಸಂಜೆ ಅತ್ತ ಕಡೆ ಪಯಣ ಬೆಳೆಸಿ ಏಕಾಂತವನ್ನು ಅನುಭವಿಸಿ ಬನ್ನಿ…

Advertisement

ವಾರದ ರಜೆಯಿತ್ತು. ಹುಬ್ಬಳ್ಳಿಯಿಂದ ಬಂಧುಗಳೂ ಬಂದಿದ್ದರು. ಮಧ್ಯಾಹ್ನ ಊಟ ಮಾಡುತ್ತಿರುವಾಗ ಮಕ್ಕಳ ಸೈನ್ಯ “ಸಂಜೆ ಬೀಚ್‌ಗೆ ಹೋಗೋಣ’ ಎಂಬ ಪೀಠಿಕೆ ಹಾಕಿತು. ಮಲ್ಪೆ, ಕಾಪು ಕಡಲ ತೀರಗಳು ನೆನಪಾದರೂ ವಾರಾಂತ್ಯ ಎರಡೂ ಕಡೆಗಳಲ್ಲಿ ವಿಪರೀತ ಜನಜಂಗುಳಿ ಇರುತ್ತದೆ ಎಂಬ ಕಾರಣಕ್ಕೆ ಮನಸ್ಸಾಗಲಿಲ್ಲ.

ಕಡಲ ತೀರಕ್ಕೆ ಹೋದಾಗ ಜನಸಾಗರವೇ ಕಂಡರೆ ಏನು ಫ‌ಲ? ಅಲ್ಲಿ ನಿಶ್ಚಿಂತೆಯಿಂದ ಸುತ್ತಾಡಬೇಕು. ಅವಿಶ್ರಾಂತವಾಗಿ ತೀರಕ್ಕೆ ಬಂದು ಬಡಿಯುವ ಅಲೆಗಳನ್ನು ಒಂದೆಡೆ ಕುಳಿತು ನೋಡುತ್ತಿರಬೇಕು. ನಮ್ಮ ಕಣ್ಣಿಗೂ ಸಮುದ್ರದ ಅಲೆಗಳಿಗೆ ಮಧ್ಯೆ ಯಾವ ಅಡ್ಡಿಯೂ ಇರಬಾರದು. ಅದು ನನಗೆ ಧ್ಯಾನ. ಅಂತರಂಗವನ್ನು ಶೋಧಿಸುವ ಪರಿ. ಅಲೆಗಳ ಮೆರವಣಿಗೆಯನ್ನು ನೋಡುತ್ತ, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ನೀರೇ ಕಾಣಿಸುವ ಕಡಲಿನ ಮುಂದೆ ನಾವೆಷ್ಟು ಚಿಕ್ಕವರು ಎಂಬ ಅರಿವು ಮೂಡಿಸಬೇಕು. ಜನಜಂಗುಳಿಯಿದ್ದರೆ ಕಡಲೇ ಕಿರಿದಾಗಿ ಕಾಣಿಸುತ್ತದೆ. ಜನಜಂಗುಳಿ ಹಾಗೂ ಪ್ರಾಪಂಚಿಕ ಆಕರ್ಷಣೆಗಳಿಲ್ಲದ ಹೂಡೆ ಸಮುದ್ರ ತೀರಕ್ಕೆ ಹೋಗೋಣ ಎಂದು ತೀರ್ಮಾನಿಸಿದ್ದೂ ಆಯಿತು.

ಕವಿ ನಿಸಾರ್‌ ಅಹಮ್ಮದ್‌ ಅವರ ಕವಿತೆಯ “ಸಂಜೆ ಐದರ ಹೊತ್ತು’ ಇಳಿ ಬಿಸಿಲು ಮನೋಹರವಾಗಿತ್ತು. ಎಲ್ಲರನ್ನೂ ಕರೆದುಕೊಂಡು ಅಂಬಾಗಿಲು, ಸಂತೆಕಟ್ಟೆ ಹಾಗೂ ಕೆಮ್ಮಣ್ಣು ಮೂಲಕ ಹೂಡೆ ಕಡಲ ತೀರಕ್ಕೆ ಬಂದಾಯಿತು. ಕಿರಿದಾಗಿದ್ದರೂ ರಸ್ತೆ ಚೆನ್ನಾಗಿದೆ. ಗೊತ್ತಿಲ್ಲದವರೂ ದಾರಿ ತಪ್ಪುವ ಪ್ರಮೇಯವಿಲ್ಲ. ರಸ್ತೆ ಬದಿ ಕಾರು ನಿಲ್ಲಿಸಿದೊಡನೆಯೇ ವಿಶಾಲವಾದ ಸಮುದ್ರವೇ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

ಬಿಸಿಲು ಇನ್ನೂ ಪೂರ್ಣ ಇಳಿದಿಲ್ಲವಾದ ಕಾರಣ ಏಳೆಂಟು ಜನರಷ್ಟೇ ನೀರಿನಲ್ಲಿ ಆಟವಾಡುತ್ತಿದ್ದರು. ಕೆಲವರು ದಡದಲ್ಲಿರುವ ತೆಂಗಿನ ಮರಗಳ ಕೆಳಗೆ ಆರಾಮವಾಗಿ ಕುಳಿತು ಹರಟುತ್ತಿದ್ದರು. ಮಕ್ಕಳು ಇಳಿದೊಡನೆಯೇ ಹೋ ಎಂದು ಕಿರುಚುತ್ತಾ ಓಡಿ ನೀರಿಗಿಳಿದರು. ಇನ್ನು ಅವರನ್ನು ಹಿಡಿಯುವುದೇ ಕಷ್ಟ. ಆದರೆ, ಅಂಥ ಅಪಾಯಕಾರಿ ಅಲೆಗಳೇನೂ ಇಲ್ಲದ ಕಾರಣ ಆಡಿಕೊಳ್ಳಲಿ ಎಂದು ಅವರೊಡನೆ ನಾವೂ ಹೆಜ್ಜೆ ಹಾಕಿದೆವು. ಹೇಳಿಕೊಳ್ಳುವಂಥ ಜನಜಂಗುಳಿಯೇ ಇಲ್ಲದ ಕಡಲ ತೀರವನ್ನು ಕಂಡು ಎಲ್ಲರಿಗೂ ಸಂಭ್ರಮಾಶ್ಚರ್ಯವಾಯಿತು. ಹೂಡೆ ಹಾಗೂ ಡೆಲ್ಟಾ ಬೀಚ್‌ಗಳು ಬೇರೆ ಕಡೆಗಳಿಗೆ ಹೋಲಿಸಿದರೆ ಸ್ವತ್ಛವಾಗಿವೆ. ಆದರೆ, ಈ ಬಾರಿ ಅಲೆಗಳೊಂದಿಗೆ ಟಾರ್‌ನ ಉಂಡೆಗಳು ತೇಲಿ ಬಂದಿದ್ದರಿಂದ ತೀರವೆಲ್ಲ ಕಪ್ಪಾಗಿತ್ತು. ನಡೆದಾಡುವವರ ಕಾಲಿಗೂ ಅಂಟುತ್ತಿತ್ತು.

Advertisement

ತೆಂಗಿನ ಮರಗಳ ಸಾಲು
ಹೂಡೆಯಲ್ಲಿ ಕಡಲ್ಕೊರೆತ ತಡೆಯುವ ಸಲುವಾಗಿ ತಡಿಯಲ್ಲಿ ದೊಡ್ಡ ಗಾತ್ರದ ಕಲ್ಲುಗಳನ್ನು ಜೋಡಿಸಿದ್ದಾರೆ. ಇದು ಈ ಕಡಲಿನ ತೀರಕ್ಕೆ ಒಂದು ವಿಶೇಷವಾದ ಆಕರ್ಷಣೆ ಒದಗಿಸಿದೆ. ಅವುಗಳ ಮೇಲೆ ಅಥವಾ ಪಕ್ಕದಲ್ಲೇ ಇರುವ ವಿಶಾಲವಾದ ತೆಂಗಿನ ತೋಟಗಳಲ್ಲಿ ಆರಾಮವಾಗಿ ವಿಹರಿಸಬಹುದು. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣುವ ತೆಂಗಿನ ಮರಗಳು ಶಾಂತವಾದ ಕಡಲ ತೀರಕ್ಕೆ ಅಪೂರ್ವ ಶೋಭೆಯನ್ನು ನೀಡುತ್ತವೆ. ಇಲ್ಲಿ ನಿಂತರೆ ಕುದ್ರುಗಳು ಸಮುದ್ರದ ಮಧ್ಯೆ ಇರುವ ದ್ವೀಪಗಳಂತೆ ಕಣ್ಮನ ಸೆಳೆಯುತ್ತವೆ.

ಸಂಜೆಯಾಯಿತೆಂದರೆ ಇಲ್ಲಿ ಬಾನು ರಂಗೇರುತ್ತದೆ. ಸೂರ್ಯಾಸ್ತದ ಸಮಯ ಮೋಡಗಳು ಅದ್ಭುತ ಚಿತ್ತಾರಗಳನ್ನು ಬಿಡಿಸುತ್ತವೆ. ಆಡುತ್ತಿದ್ದ ಚಿಣ್ಣರು ಸೂರ್ಯ ಮುಳುಗಿದ ಮೇಲೂ ಹೊರಡಲು ಸಿದ್ಧರಿಲ್ಲ. ಕತ್ತಲಾದರೂ ಅಲೆಗಳ ಸದ್ದು ಕೇಳುತ್ತ ನಾವೂ ಸಾಕಷ್ಟು ಹೊತ್ತು ಕುಳಿತಿದ್ದೆವು.

ದಾರಿ ಯಾವುದಯ್ನಾ?
ಉಡುಪಿಯಿಂದ ಕೇವಲ 9 ಕಿ.ಮೀ. ದೂರ. ಸಿಟಿ ಬಸ್‌ ನಿಲ್ದಾಣದಿಂದ ಹೂಡೆ, ಕೋಡಿ – ಬೆಂಗ್ರೆಗೆ ಬಸ್‌ಗಳಿವೆ. ಅಂಬಾಗಿಲು, ಸಂತೆಕಟ್ಟೆ, ಕೆಮ್ಮಣ್ಣು ಮಾರ್ಗವಾಗಿ ಹೂಡೆ ಹಾಗೂ ಡೆಲ್ಟಾ ಬೀಚ್‌ ತಲುಪಬಹುದು. ಸಣ್ಣ ಅಂಗಡಿಗಳು, ಹೊಟೇಲ್‌ಗ‌ಳು ಸಿಗುತ್ತವೆ. ಮತö ಖಾದ್ಯಗಳನ್ನು ಇಷ್ಟಪಡುವವರಿಗೆ ಯಾವುದೇ ಸಮಸ್ಯೆಯಾಗದು. ಸರ್ಫಿಂಗ್‌ ಹಾಗೂ ದೋಣಿ ಮನೆ ಇತ್ತೀಚೆಗೆ ಆರಂಭವಾಗಿದ್ದು, ಪ್ರವಾಸಿಗರ ಹೊಸ ಆಕರ್ಷಣೆಗಳೆನಿಸಿವೆ. ವಾಸ್ತವ್ಯಕ್ಕೆ ಮಾತ್ರ ಉಡುಪಿಯನ್ನೆ ನೆಚ್ಚಿಕೊಳ್ಳುವುದು ಸೂಕ್ತ.

ಡೆಲ್ಟಾ ಬೀಚ್‌
ಪಕ್ಕದಲ್ಲೇ ಇರುವ ಕೋಡಿ ಬೆಂಗ್ರೆಯಲ್ಲಿ ಸ್ವರ್ಣಾ ನದಿ ಸಮುದ್ರವನ್ನು ಸೇರುತ್ತಿದ್ದು (ಡೆಲ್ಟಾ), ಕೆಲವು ಆಕರ್ಷಕ ಕುದ್ರುಗಳನ್ನು (ಪಡುಕುದ್ರು, ತಿಮ್ಮನಕುದ್ರು, ಬಳಿಗಾರ ಕುದ್ರು, ಹೊನ್ನಪ್ಪನ ಕುದ್ರು ಇತ್ಯಾದಿಗಳು) ನಿರ್ಮಿಸಿದೆ. ಇವುಗಳು ಸಣ್ಣ ಸಣ್ಣ ದ್ವೀಪಗಳಂತೆ ರಮಣೀಯವಾಗಿ ಗೋಚರಿಸುತ್ತವೆ. ನದಿ ಹಾಗೂ ಸಮುದ್ರದ ಮಧ್ಯೆ ರಸ್ತೆಯಲ್ಲಿ ವಾಹನ ಚಲಾಯಿಸುತ್ತಾ ಸಾಗುವ ಮಜವೇ ಬೇರೆ. ಕುದ್ರುಗಳ ಪೈಕಿ ಪಡುಕುದ್ರುಗೆ ಮಾತ್ರ ಸೇತುವೆ ಸಂಪರ್ಕವಿದೆ. ಬ್ರಿಟಿಷ್‌ ಕಾಲದ ತೂಗುಸೇತುವೆಯೂ ಇಲ್ಲಿದೆ. ಬೆಂಗ್ರೆಯಲ್ಲಿ ಒಂದು ಸಣ್ಣ ಮೀನುಗಾರಿಕಾ ಬಂದರೂ ಇದೆ. ಇಲ್ಲಿಂದ ದೋಣಿಯ ಮೂಲಕ ನದಿಯ ಮತ್ತೂಂದು ಬದಿಯಲ್ಲಿರುವ ಹಂಗಾರಕಟ್ಟೆಗೂ ತೆರಳಬಹುದು. ಇದೂ ಸೊಗಸಾದ ಅನುಭವವನ್ನು ನೀಡುತ್ತದೆ.

ರೂಟ್‌ ಮ್ಯಾಪ್‌
·  ಮಂಗಳೂರಿನಿಂದ ಉಡುಪಿಗೆ 55.9 ಕಿಲೋ ಮೀಟರ್‌
·  ಉಡುಪಿಯಿಂದ ಹೂಡೆಗೆ 9 ಕಿಲೋಮೀಟರ್‌ (ಎನ್‌ಎಚ್‌ 66 ಮತ್ತು ಕೆಮ್ಮಣ್ಣು ರಸ್ತೆ)
·  ಉಡುಪಿಯಿಂದ ಸಿಟಿ ಬಸ್‌ ಸೌಲಭ್ಯವಿದೆ.

 ಅನಂತ ಹುದೆಂಗಜೆ

Advertisement

Udayavani is now on Telegram. Click here to join our channel and stay updated with the latest news.

Next