ಪಟ್ನಾ : ಬಿಹಾರದ ರೋಹಟಾಸ್ ಜಿಲ್ಲೆಯಲ್ಲಿ ವಿಷ ಮದ್ಯ ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ. ಈ ದುರಂತವನ್ನು ಅನುಸರಿಸಿ ಎಂಟು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಳೆದ ವರ್ಷ ಎಪ್ರಿಲ್‌ನಲ್ಲಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರ ರಾಜ್ಯದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು.
ವಿಷ ಮದ್ಯ ಸೇವಿಸಿ ನಾಲ್ವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕಚ್‌ವಾ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲ ಕಾನ್‌ಸ್ಟೆಬಲ್‌ಗಳನ್ನು ವರ್ಗ ಮಾಡಲಾಗಿದೆ.
ನಿನ್ನೆ ರಾತ್ರಿ ದಾನ್ವಾರ್ ಗ್ರಾಮದಲ್ಲಿ ವಿಷ ಮದ್ಯ ಸೇವಿಸಿ ನಾಲ್ವರು ಮೃತಪಟ್ಟಿದ್ದರು. ಈ ವಿಷ ಮದ್ಯವನ್ನು ಗ್ರಾಮದೊಳಕ್ಕೆ ತಂದ ಮೂವರು ಶಂಕಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಈ ಶಂಕಿತರನ್ನು ಶೀಘ್ರವೇ ಬಂಧಿಸಲಾಗುವುದು ಎಂಧು ಡಿಐಜಿ ಮೊಹಮ್ಮದ್ ರೆಹಮಾನ್ ತಿಳಿಸಿದ್ದಾರೆ.
ಅಕ್ರಮ ಮದ್ಯ ವಹಿವಾಟುದಾರರು ಮತ್ತು ಆಡಳಿತೆಯಲ್ಲಿನ ಅಧಿಕಾರಿಗಳು ಪ್ರತೀ ತಿಂಗಳು ಸಾವಿರಾರು ಕೋಟಿ ರೂ.ಗಳನ್ನು ಕಿಸೆಗಿಳಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಅಕ್ರಮ ಮದ್ಯ ಲಾಬಿಗೆ ಶರಣಾಗಿರುವಂತಿದೆ ಎಂದು ಆರ್‌ಜೆಡಿ ವಕ್ತಾರ ಮತ್ತು ಶಾಸಕ ಶಕ್ತಿ ಯಾದವ್ ಆರೋಪಿಸಿದ್ದಾರೆ.