ಸರಕಾರಿ ಆಸ್ಪತ್ರೆಗಳಿಗೆ ಉಚಿತ ECGಯಂತ್ರಗಳನ್ನು ಒದಗಿಸುವ ಮೂಲಕ ಸುದ್ದಿಯಲ್ಲಿರುವ ಕೆ.ಎಂ.ಸಿ.ಆಸ್ಪತ್ರೆಯ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತರಿಗೆ ಯಕ್ಷಕಾಶಿ ಕುಂದಾಪುರದ ಯಕ್ಷರಾತ್ರಿ ವತಿಯಿಂದ ನ.16 ರಂದು ಕುಂದಾಪುರದಲ್ಲಿ ಹೃದಯವಂತ ಬಿರುದಿನೊಂದಿಗೆ ಯಕ್ಷರಾತ್ರಿ ಸಾಧಕ ಪುರಸ್ಕಾರ ಪ್ರದಾನವಾಗಲಿದೆ . ಯಕ್ಷರಾತ್ರಿಯ “ಶತಮಾನಂ ಭವತಿ’ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಡಾ| ಕಾಮತರನ್ನು ಮತ್ತು ಥಂಡಿಮನೆ ಶ್ರೀಪಾದ ಭಟ್ಟರನ್ನು ಸಮ್ಮಾನಿಸಲಾಗುವುದು. ಡಾ| ಪದ್ಮನಾಭ ಕಾಮತರು ಯಕ್ಷಗಾನ ಅಭಿಮಾನಿ, ಪೋಷಕರಾಗಿಯೂ ಪ್ರಸಿದ್ಧರು. ಬಾಲ್ಯದಿಂದಲೇ ಬಣ್ಣದ ವೇಷಗಳ ಸೆಳೆತಕ್ಕೆ ಒಳಗಾದವರು . ಲಕ್ಷಾಂತರ ಜನರ ಹೃದಯ ಮಿಡಿತ ಪರೀಕ್ಷಿಸಿರುವ ಡಾ| ಕಾಮತರ ಹೃದಯ ಮಿಡಿಯುತ್ತಿರುವುದು ಯಕ್ಷಗಾನಕ್ಕೆ. ಡಾ| ಕಾಮತರು ಕ್ಲಿಕ್ಕಿಸಿದ ಯಕ್ಷಗಾನದ ಛಾಯಾಚಿತ್ರಗಳು ಹತ್ತು ಸಾವಿರ ದಾಟಿದೆ. ಯಕ್ಷಮಿತ್ರರು ನಮ್ಮ ವೇದಿಕೆ ಎಂಬ ಯಕ್ಷಗಾನ ವಾಟ್ಸಪ್ ಗುಂಪಿನ ಮೂಲಕ ಯಕ್ಷಗಾನೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ .