Advertisement

ಭ್ರಷ್ಟರ ವಿರುದ್ಧದ ಸಮರ ವೀರರಿಗೆ ಸನ್ಮಾನ

12:05 PM Dec 10, 2018 | |

ಬೆಂಗಳೂರು: ಇವರೆಲ್ಲ ಭ್ರಷ್ಟಾಚಾರವನ್ನು ಪ್ರಶ್ನಿಸಿದವರು. ಅಲ್ಲದೆ, ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರಕ್ಕೆ ನಿಂತವರು. ಇಂತಹ “ವೀರ’ರನ್ನು ಇದೇ ಮೊದಲ ಬಾರಿಗೆ ಭಷ್ಟಾಚಾರ ನಿಗ್ರಹ ದಳ (ಎಸಿಬಿ) ಸನ್ಮಾನಿಸಿ, ಇತರರಿಗೂ ಪ್ರೇರಣೆ ತುಂಬುವ ಕೆಲಸ ಮಾಡಿತು. ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ ಪ್ರಯುಕ್ತ ಭಾನುವಾರ ನಗರದ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಇಂತಹ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

Advertisement

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮಟಗಿ ಗ್ರಾಮದ ಮುರಳೀಧರ್‌, ಬೆಳಗಾವಿಯ ಆರ್‌ಪಿಡಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಕಾಶೀನಾಥ್‌, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಲ್ಯಾ ಗ್ರಾಮದ ಹರೀಶ್‌ ಕುಮಾರ್‌, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಟಿ. ನರಸಿಂಹ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ವೀರಣ್ಣ ಶಿವಕುಮಾರಪ್ಪ ಸಿಂಧೂರ, ಹಾವೇರಿ ಜಿಲ್ಲೆಯ ಸಾ.ಕುರಬಗೊಂಡದ ಶಿವಪ್ಪ ಬಸವಣ್ಣೆಪ್ಪ ಮಾಳಗಿ ಹಾಗೂ ಮೈಸೂರು ಜಿಲ್ಲೆಯ ಬೆಲವತ್ತ ಗ್ರಾಮದ ಶೀಲಾವತಿ ಅವರನ್ನು ಎಸಿಬಿ ಅಧಿಕಾರಿಗಳು, ಗಣ್ಯರು ಸನ್ಮಾನಿಸಿ, ಗೌರವಿಸಿದರು.

ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕರ್ನಾಟಕದ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಅವರು, ಚುನಾವಣೆ ಸಂದರ್ಭದಲ್ಲೇ ಹೆಚ್ಚು ಭ್ರಷ್ಟಾಚಾರ ನಡೆಯುತ್ತದೆ. ಪ್ರತಿಯೊಬ್ಬ ಅಭ್ಯರ್ಥಿ ಕೂಡ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ ಎಂಬ ಮಾತಿದೆ. ಉದಾಹರಣೆಗೆ ಕಾರ್ಪೂರೇಷನ್‌ ಚುನಾವಣೆ ವೇಳೆ ಪ್ರತಿ ಅಭ್ಯರ್ಥಿ 4-5 ಕೋಟಿ ರೂ. ಖರ್ಚು ಮಾಡಿದರೆ, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು 10-15 ಕೋಟಿ ರೂ. ಖರ್ಚು ಮಾಡುತ್ತಾರೆ. 

ಚುನಾವಣೆಯಲ್ಲಿ ಗೆದ್ದವರು ನಾನಾ ಮಾರ್ಗಗಳ ಮೂಲಕ ಹಣ ವಾಪಸ್‌ ಪಡೆದುಕೊಳ್ಳುತ್ತಾರೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿಯೇ ಭ್ರಷ್ಟಾಚಾರದ ಕುರಿತು ಪ್ರಶ್ನಿಸಿದರೆ, ಸಾಧ್ಯವಾದಷ್ಟು ಭ್ರಷ್ಟಾಚಾರ ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರಗಳು ಬಡವರಿಗಾಗಿಯೇ ನಾನಾ ಯೋಜನೆ ಗಳನ್ನು ಜಾರಿ ತಂದಿವೆ. ಆದರೆ, ಅವುಗಳು ನಿಜವಾದ ಬಡವರ ಕೈ ಸೇರುತ್ತಿಲ್ಲ. ಅದನ್ನು ಭ್ರಷ್ಟ ಅಧಿಕಾರಿಗಳೇ ತಿನ್ನುತ್ತಿದ್ದಾರೆ. ಭ್ರಷ್ಟಾಚಾರ ಕಡಿಮೆಯಾದರೆ, ಅಭಿವೃದ್ಧಿ ಹೆಚ್ಚಾಗುತ್ತದೆ ಎಂದರು.

Advertisement

ಪ್ರತಿಜ್ಞೆ ಮಾಡಿ: ಭ್ರಷ್ಟಾಚಾರದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ. ಪ್ರಮುಖವಾಗಿ ಯುವ ಸಮೂಹ ಭ್ರಷ್ಟಾಚಾರದ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಂದಿನಿಂದಲೇ ವಿದ್ಯಾರ್ಥಿಗಳು, ಯುವ ಸಮೂಹ, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಲಂಚ ತೆಗೆದುಕೊಳ್ಳುವುದಿಲ್ಲ. ಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಉದಯ್‌ ಹೊಳ್ಳ ಸಲಹೆ ನೀಡಿದರು.

ಅರಿವು ಅಗತ್ಯ: ಕರ್ನಾಟಕ ಆಡಳಿತ ನ್ಯಾಯಾಧೀಕರಣದ ಸದಸ್ಯರಾದ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ಅವರು ಮಾತನಾಡಿ, ಭ್ರಷ್ಟಾಚಾರ ನಿಯಂತ್ರಣ ಕುರಿತು ಕಠಿಣ ಕಾನೂನುಗಳನ್ನು ತರುವುದರ ಜತೆಗೆ ಅರಿವು ಮೂಡಿಸಬೇಕು. ಆಯಾ ಜಿಲ್ಲೆಯ ಎಸಿಬಿ ಅಧಿಕಾರಿಗಳು ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಹಾಗೆಯೇ ಪೋಷಕರು ಸಹ ಮನೆಯಲ್ಲೇ ಮಕ್ಕಳಿಗೆ ಭ್ರಷ್ಟಾಚಾರದ ಬಗ್ಗೆ ತಿಳಿ ಹೇಳಬೇಕು ಎಂದು ಮನವಿ ಮಾಡಿದರು. 

ಸಮಿತಿ ರಚಿಸಿ: ಅಕ್ರಮ ಆಸ್ತಿಗಳಿಕೆ ಆರೋಪ ಪ್ರಕರಣಗಳ ಬಗ್ಗೆ ಎಸಿಬಿಯಲ್ಲೇ ಸಮಿತಿಯೊಂದನ್ನು ರಚಿಸಿ, ಸಂಪೂರ್ಣವಾಗಿ ಅಧ್ಯಯನ ನಡೆಸಬೇಕು. ಪ್ರಕರಣಗಳು ಕಡಿಮೆಯಾದರೂ ಸರಿಯಾದ ರೀತಿಯ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಎಸಿಬಿ ಅಧಿಕಾರಿಗಳಿಗೆ ಉದಯ್‌ ಹೊಳ್ಳ ಸಲಹೆ ನೀಡಿದರು.

ಇದೇ ವೇಳೆ ಎಸಿಬಿ ಕಾರ್ಯವೈಖರಿ ಕುರಿತು ಏಳು ಮಂದಿ ಸನ್ಮಾನಿತರ ಅಭಿಪ್ರಾಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಭ್ರಷ್ಟಾಚಾರ ನಿಯಂತ್ರಣ ಕುರಿತು ಸ್ಥಳದಲ್ಲೇ ಚಿತ್ರ ಬರೆದ 8 ಮಂದಿ ವಿವಿಧ ಶಾಲೆಯ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿ ಚಂದ್ರಶೇಖರ್‌, ರಾಮ್‌ನಿವಾಸ್‌ ಸೆಪಟ್‌, ಸಂಜೀವ್‌ ಎಂ. ಪಾಟೀಲ್‌ ಹಾಗೂ ಇತರೆ ಅಧಿಕಾರಿಗಳು ಇದ್ದರು.

ರಾಜಕೀಯ ಸಂಧಾನಕ್ಕೂ ಒಪ್ಪಲಿಲ್ಲ
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತ ಹಾವೇರಿ ಕಚೇರಿಯಲ್ಲಿ ವಾಹನ ಖರೀದಿಗಾಗಿ ಸರ್ಕಾರಿ ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸಿದ್ದೆ. ಆದರೆ, ಅರ್ಜಿ ವಿಲೇವಾರಿಗೆ ಇಲಾಖೆಯ ಅಧಿಕಾರಿಗಳು 60 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮುಗಂಡ 30 ಸಾವಿರ ರೂ. ಕೊಟ್ಟಿದ್ದೆ. ಕೊನೆಗೆ ಹಿರಿಯರ ಸಲಹೆ ಪಡೆದು ಎಸಿಬಿಗೆ ದೂರು ನೀಡಿದಾಗ, ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿ ಭ್ರಷ್ಟ ಅಧಿಕಾರಿಯ ಮೇಲೆ ದಾಳಿ ನಡೆಸಿದರು. ನಂತರ ಸ್ಥಳೀಯ ಪ್ರಭಾವಿ ರಾಜಕೀಯ ವ್ಯಕ್ತಿಗಳು ರಾಜಿಸಂಧಾನ ಮಾಡಿಕೊಳ್ಳುವಂತೆ ಕೇಳಿಕೊಂಡರು, ಆದರೆ, ನಾನು ಒಪ್ಪಲಿಲ್ಲ. ಪರಿಣಾಮ ನನ್ನಂತೆಯೇ ಅರ್ಜಿ ಸಲ್ಲಿಸಿದ್ದ ಇತರೆ 19 ಫ‌ಲಾನುಭವಿಗಳಿಗೆ ಕೇವಲ 15 ದಿನಗಳಲ್ಲೇ ಸಹಾಯ ಧನ(ಸಬ್ಸಿಡಿ) ಬಿಡುಗಡೆಯಾಗಿದೆ. ಈ ತೃಪ್ತಿ ನನಗೆ ಇದೆ ಎಂದು ಹಾವೇರಿ ಜಿಲ್ಲೆಯ ಸಾ.ಕುರಬಗಂಡದ ಶಿವಪ್ಪ ಬಸವಣ್ಣೆಪ್ಪ ಮಾಳಗಿ “ಉದಯವಾಣಿ’ಗೆ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next