ಬೆಳಗಾವಿ: ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ನೀಡಲಾಗುವ ಗೌರವಧನ ದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ಸೋಮವಾರ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು.
ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ಮರಿತಿಬ್ಬೇಗೌಡ, ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ನೀಡಲಾಗುವ ಗೌರವಧನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇತ್ತೀಚೆಗೆ ವಿವಿಗಳ ಅತಿಥಿ ಉಪನ್ಯಾಸಕರ ಗೌರವಧನ ಪರಿಷ್ಕರಿಸಲಾಗಿದ್ದು, ಅದರಂತೆ 1 ತಿಂಗಳು ಗೌರವಧನವನ್ನೂ ನೀಡಲಾಗಿದೆ. ಬಳಿಕ ಸ್ಥಗಿತಗೊಳಿ ಸಲಾಗಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥ ನಾರಾಯಣ, ವಿಶ್ವವಿದ್ಯಾನಿಲಯಗಳ ಹಣಕಾಸಿನ ಸಮಿತಿಯು ಹಣಕಾಸಿನ ಸ್ಥಿತಿಗತಿ ಸರಿ ಇಲ್ಲದ ಕಾರಣ ಪರಿಷ್ಕೃತ ಗೌರವಧನ ಸಾಧ್ಯವಿಲ್ಲ ಎಂದು ಹೇಳಿದೆ. ಹಾಗಾಗಿ ಪರಿಷ್ಕೃತ ಗೌರವಧನ ಸದ್ಯಕ್ಕೆ ಅಸಾಧ್ಯ ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮರಿತಿಬ್ಬೇಗೌಡರು, ಒಂದೊಂದು ವಿವಿಯ ಅತಿಥಿ ಉಪನ್ಯಾಸಕರಿಗೆ ಒಂದೊಂದು ರೀತಿಯ ಆದೇಶವೇ? ಒಬ್ಬೊಬ್ಬ ರಿಗೆ ಒಂದೊಂದು ಪ್ರಕಾರದ ಗೌರವಧನ ನೀಡು ತ್ತೀರಾ? ಒಂದೆಡೆ ಸಾಂದರ್ಭಿಕ ರಜೆ ನೀಡು ತ್ತಿಲ್ಲ. ಮತ್ತೊಂದೆಡೆ ಪರಿಷ್ಕೃತ ವೇತನ (ಗೌರವಧನ) ಕೊಡುವುದಿಲ್ಲ. ಉನ್ನತ ಶಿಕ್ಷಣವನ್ನು ಹಾಳು ಮಾಡುವ ಸಚಿವರು ನೀವು ಎಂದು ಆಕ್ರೋಶ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಸಚಿವರು ಮತ್ತು ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಇದಕ್ಕೆ ಕಾಂಗ್ರೆಸ್‌ನ ವಿಪಕ್ಷ ನಾಯಕರು ಸಹಿತ ಇತರ ಸದಸ್ಯರು ಜತೆಯಾದರು. ಕೂಡಲೇ ತಾರತಮ್ಯ ಬಗೆಹರಿಸಬೇಕು ಎಂದು ಪಟ್ಟುಹಿಡಿದರು. ಆಗ ಆಡಳಿತ ಪಕ್ಷದ ಸದಸ್ಯರು, ಸಚಿವರಿಂದ ಇದೇ ರೀತಿ ಉತ್ತರ ಬರಬೇಕು ಎಂದು ಬಯಸುವುದು ಹಾಗೂ ಅದಕ್ಕಾಗಿ ಪಟ್ಟುಹಿಡಿಯುವುದು ಎಷ್ಟು ಸರಿ ಎಂದು ಕೇಳಿದರು. ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಬಗೆಹರಿಸಿ ಎಂದು ತಿಳಿಗೊಳಿಸಲು ಯತ್ನಿಸಿದರು. ಇದಕ್ಕೆ ತೃಪ್ತರಾಗದ ವಿಪಕ್ಷ ಸದಸ್ಯರು ಪ್ರತಿಭಟನೆಯನ್ನು ಮುಂದುವರಿಸಿದ್ದು, ಸದನವನ್ನು ಸ್ವಲ್ಪ ಕಾಲ ಮುಂದೂಡಲಾಯಿತು.
ಮತ್ತೆ ಆರಂಭಗೊಳ್ಳುತ್ತಿದ್ದಂತೆ ತಾರತಮ್ಯ ಹೋಗಲಾಡಿಸಲು ಒತ್ತಾಯ ಕೇಳಿಬಂತು. ಆಗ ಸಚಿವರು, ಸಂಬಂಧಪಟ್ಟ ಸದಸ್ಯರು ಮತ್ತು ಅಧಿಕಾರಿಗಳನ್ನು ಕರೆಸಿ ಸಭೆ ಕರೆದು ಚರ್ಚಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆಎಳೆದರು.