ವಿದ್ವಾನ್ ಕುಕ್ಕಿಲ ಶಂಕರ ಭಟ್ಟರು ಬಾಲ್ಯದಲ್ಲೇ ಸಂಗೀತದ ಕಡೆಗೆ ಅಪಾರ ಒಲವನ್ನು ಹೊಂದಿದ್ದರು. ಮಂಗಳೂರಿನ ಕಲಾನಿಕೇತನದ ಸುಂದರ ಆಚಾರ್ಯರಲ್ಲಿ ಮೃದಂಗವಾದನ ಮತ್ತು ಶ್ರೀನಿವಾಸ ಉಡುಪರಲ್ಲಿ ಪಿಟೀಲು ವಾದನ ಅಭ್ಯಾಸ ಮಾಡಿದರು. ಅನಂತರ ಮೈಸೂರಿನ
ವಿ| ಕೆ. ಹರಿಶ್ಚಂದ್ರನ್ ಅವರಲ್ಲಿ ಎಂಟು ವರ್ಷ ಮೃದಂಗ ವಾದನದ ಪ್ರೌಢ ಶಿಕ್ಷಣ ಪಡೆದು ವಿದ್ವತ್ ಪದವಿ ಪಡೆದರು.ಜೊತೆಯಲ್ಲಿ ಪಿಟೀಲು ವಿದ್ವಾಂಸರಾದ ಮಹಾದೇವಪ್ಪನವರಲ್ಲಿ ಮೂರು ವರ್ಷಗಳ ಕಾಲ ಪಿಟೀಲುವಾದನವನ್ನೂ ಅಭ್ಯಾಸ ಮಾಡಿದರು. ಮೈಸೂರಿನ ಪ್ರಸಿದ್ಧ ಕಲಾವಿದರಿಗೆ ಸ್ವತಂತ್ರವಾಗಿ ಮತ್ತು ತಮ್ಮ ಗುರುಗಳ ಜೊತೆಗೆ ಪಕ್ಕವಾದ್ಯ ನೀಡಿದ ಹೆಗ್ಗಳಿಕೆ ಇವರದು.
ಊರಿನಲ್ಲಿ ಬಂದು ನೆಲೆಸಿದ ಬಳಿಕ 1975ರಿಂದ ಪುತ್ತೂರಿನಲ್ಲಿ ಕಾಂಚನ ನಾರಾಯಣ ಭಟ್ಟರು ನಡೆಸುತ್ತಿದ್ದ ಉಮಾಮಹೇಶ್ವರ ಸಂಗೀತ ಕಲಾಶಾಲೆಯಲ್ಲಿ ಮೃದಂಗ ವಾದನ ತರಬೇತಿ ನೀಡುತ್ತಾ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಮೃದಂಗ ವಾದನ ತರಬೇತಿ ನೀಡಿದ್ದಾರೆ.
ಜ್ಯೇಷ್ಠ ಪುತ್ರ ಮುರಳೀಕೃಷ್ಣ ಕುಕ್ಕಿಲ ಅವರನ್ನು ಮೃದಂಗ ಕಲಾವಿದರನ್ನಾಗಿ ರೂಪಿಸಿದ್ದಲ್ಲದೆ, ರವಿ ಭಟ್, ಬಾಲಕೃಷ್ಣ ಹೊಸಮನೆ ಮತ್ತು ನಿಕ್ಷಿತ್ ಪುತ್ತೂರು ಅವರಂಥ ಕಲಾವಿದರುಗಳನ್ನು ನಾಡಿನ ಪ್ರತಿಷ್ಠಿತ ಸಭಾಗಳಲ್ಲಿ ಕಾರ್ಯಕ್ರಮ ನೀಡುವ ಮಟ್ಟಕ್ಕೆ ಬೆಳೆಸಿದ್ದಾರೆ. ಇವರ ಅದಮ್ಯ ಸಂಗೀತ ಸೇವೆಯನ್ನು ಪರಿಗಣಿಸಿ ಸಂಗೀತ ಪರಿಷತ್ ಮಂಗಳೂರು(ರಿ.), ತನ್ನ ರಜತ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾ.24ರಂದು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಗೌರವಿಸಲಿದೆ.
ಕೃಷ್ಣಮೂರ್ತಿ