ಹುವಾವೇ ಆನರ್ ಕಂಪೆನಿ ಜನವರಿ 29ರಂದು ಆನರ್ ವ್ಯೂ 20 ಎಂಬ ಹೊಸ ಫ್ಲಾಗ್‌ಶಿಪ್ ಫೋನ್ ಬಿಡುಗಡೆ ಮಾಡುತ್ತಿದೆ. ಜಗತ್ತಿನ ಮೊದಲ 48 ಮೆಗಾಪಿಕ್ಸಲ್ ಸೋನಿ ಕ್ಯಾಮರಾ ಮತ್ತು 3ಡಿ ಕ್ಯಾಮರಾ ಹೊಂದಿರುವ ಎರಡು ಲೆನ್ಸಿನ ಹಿಂಬದಿ ಕ್ಯಾಮರಾ ಇದರ ಹೆಗ್ಗಳಿಕೆ. ಜೊತೆಗೆ ಸೆಲ್ಫಿà ಕ್ಯಾಮರಾವನ್ನು ಪರದೆಯ ಮೇಲೆಯೇ ಅಳವಡಿಸಿರುವ ಮೊದಲ ಫೋನ್ ಎಂಬುದು ಸಹ ಇದರ ವಿಶೇಷಣ. ಇದರ ಜೊತೆಗೆ ಅನೇಕ ಪ್ರಥಮಗಳು ಇದರಲ್ಲಿವೆ..
ಜಗತ್ತಿನಲ್ಲಿ ಮೊಬೈಲ್ ಫೋನ್ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಹುವಾವೇ-ಆನರ್ ಭಾರತದ ಮಾರುಕಟ್ಟೆಯನ್ನು ಈಗಂತೂ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಈ ಕಂಪನಿ, 2018ರಲ್ಲಿ ವಿವಿಧ ಸೆಗ್‌ಮೆಂಟ್‌ಗಳಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡಿತ್ತು. 2019ರಲ್ಲಿ ಇನ್ನೂ ಅಗ್ರೆಸಿವ್ ಆಗಿ ಫೋನ್‌ಗಳನ್ನು ಬಿಡುಗಡೆ ಮಾಡುವ ಮುನ್ಸೂಚನೆ ನೀಡಿದೆ. ಅದಕ್ಕೆ ನಿದರ್ಶನವೆಂಬಂತೆ ಜನವರಿ ತಿಂಗಳಲ್ಲಿ ಮೂರು ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅವುಗಳೆಂದರೆ, ಆನರ್ ವ್ಯೂ 20, ಆನರ್ 10 ಲೈಟ್ ಮತ್ತು ಹುವಾವೇ ವೈ 9.
ಈ ಪೈಕಿ ಆನರ್ ವ್ಯೂ 20 ಮೊಬೈಲ್ ಬಗ್ಗೆ ಈ ವಾರ ನೋಡೋಣ. ಆನರ್ ವ್ಯೂ 20 ಕಂಪೆನಿಯ ಫ್ಲಾಗ್‌ಶಿಪ್ ಫೋನ್ ಆಗಿದೆ. ಅಂದರೆ ಅತ್ಯುನ್ನತ ದರ್ಜೆಯ ಫೋನ್. ಆನರ್ ವ್ಯೂ 20, ಅನೇಕ ತಂತ್ರಜ್ಞಾನಗಳನ್ನು ಮೊದಲು ಅಳವಡಿಸಿಕೊಂಡಿರುವ ಫೋನ್ ಆಗಿದೆ. ಪರದೆಯ ಮೇಲೆಯೇ 25 ಮೆಗಾಪಿಕ್ಸಲ್ ಸೆಲ್ಫಿà ಕ್ಯಾಮರಾ ಹೊಂದಿದ ಮೊದಲ ಫೋನ್, 48 ಮೆಗಾಪಿಕ್ಸಲ್ ಮತ್ತು 3ಡಿ ಕ್ಯಾಮರಾ ಹೊಂದಿರುವ ಜಗತ್ತಿನ ಮೊದಲ ಫೋನ್, 7ನ್ಯಾನೋ ಮೀಟರ್‌ನ ಪ್ರಥಮ ಚಿಪ್‌ಸೆಟ್, (ಕಿರಿನ್ 980 ಎರಡು ಎನ್‌ಪಿಯು), ಕಾರ್ಟೆಕ್ಸ್ ಎ76 ಆಧಾರಿತ ಸಿಪಿಯು ಹೊಂದಿದ ಮೊದಲ ಫೋನ್, ಮಲಿ ಜಿ76 ಜಿಪಿಯು (ಗೇಮಿಂಗ್‌ಗಾಗಿ) ಹೊಂದಿದ ಮೊದಲ ಫೋನ್, 1.4 ಜಿಬಿಪಿಎಸ್ ಕ್ಯಾಟ್ 21 ಮೋಡೆಮ್ ಹೊಂದಿದ ವಿಶ್ವದ ಮೊದಲ ಫೋನ್, (ಅಪ್‌ಲೋಡಿಂಗ್, ಡೌನ್‌ಲೋಡ್ ವೇಗಕ್ಕಾಗಿ), 2133 ಮೆಗಾಹಟ್ಜ್ ಎಲ್‌ಪಿಡಿಡಿಆರ್ 4ಎಕ್ಸ್ ರ್ಯಾಮ್ ಹೊಂದಿರುವ ಮೊದಲ ಫೋನ್ ಎಂಬ ಹೆಗ್ಗಳಿಕೆಗಳನ್ನು ಈ ಫೋನ್ ಒಳಗೊಂಡಿದೆ.
ಈ ಮೊದಲುಗಳಲ್ಲಿ ಹೆಚ್ಚು ಆದ್ಯತೆ ಪಡೆದಿರುವ ವಿಶೇಷಣ ಎಂದರೆ 48 ಮೆಗಾಪಿಕ್ಸಲ್ ಹೈ ಡೆಫಿನೇಷನ್ ಕ್ಯಾಮರಾ, ಇದು ಸೋನಿ ಐಎಂಎಕ್ 586 ಕ್ಯಾಮರಾ ಆಗಿದ್ದು, ಅರ್ಧ ಇಂಚಿನ ಸಿಮೋಸ್ ಸೆನ್ಸರ್ ಹೊಂದಿದೆ. ಮತ್ತು ಇದರ ಜೋಡಿ ಟಿಓಎಫ್ 3ಡಿ ಕ್ಯಾಮರಾ ಸಹ ಇದೆ. ಅತ್ಯಂತ ಸ್ಪಷ್ಟ ಫೋಟೋಗಳನ್ನು ಮೂಡಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. 4ಕೆ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಸಹ ಇದೆ.
ಇಷ್ಟಲ್ಲದೇ 25 ಮೆಗಾಪಿಕ್ಸಲ್ ಸೆಲ್ಪಿà ಕ್ಯಾಮರಾ ಇದೆ. ಸೆಲ್ಫಿà ಕ್ಯಾಮರಾವನ್ನು ಮೊಬೈಲ್ ಪರದೆಯ ಮೇಲೆ ಇರಿಸುವ ಸಲುವಾಗಿ ನಾಚ್ ಡಿಸೈನ್, ವಾಟರ್‌ಡ್ರಾಪ್ ನಾಚ್ ವಿನ್ಯಾಸಗಳನ್ನು ಕಂಪೆನಿಗಳು ಕಂಡುಕೊಂಡವು. ಪರದೆ ಪೂರ್ತಿ ಇರಲಿ, ಅಲ್ಲಿ ಸೆಲ್ಫಿà ಕ್ಯಾಮರಾವೇ ಬೇಡ ಎಂದು ಫೋನಿನ ಹಿಂಭಾಗದಿಂದ ಕ್ಯಾಮರಾ ಮೇಲೆ ಬರುವ ಸ್ಲೆ„ಡಿಂಗ್ ವಿನ್ಯಾಸವನ್ನೂ ವಿವೋ ಮತ್ತು ಇದೇ ಆನರ್ ಮ್ಯಾಜಿಕ್ ಮೊಬೈಲ್ ನಲ್ಲಿ ಮಾಡಲಾಯಿತು. ಆದರೆ ಗ್ರಾಹಕರಿಗೆ ಸ್ಲೆ„ಡಿಂಗ್ ಎಂದರೆ ಕಿರಿಕಿರಿ. ಇದನ್ನರಿತು ಆನರ್ ಕಂಪೆನಿ ಈಗ ಪರದೆಯ ಮೇಲೆಯೇ ಫೋನಿನ ಮೇಲ್ಭಾಗದ ಎಡ ಮೂಲೆಯಲ್ಲಿ ಸೆಲ್ಫಿà ಕ್ಯಾಮರಾ ಇರಿಸಿದೆ.
ಈ ಹೊಸ ಫೋನ್‌ನಲ್ಲಿ 4000 ಎಂಎಎಚ್ ಬ್ಯಾಟರಿ ಇದ್ದು, ಇದಕ್ಕೆ 5ವಿ 4ಎ ಸೂಪರ್ ಫಾಸ್ಟ್ ಚಾರ್ಜರ್ ಸೌಲಭ್ಯ ಸಹ ನೀಡಿದೆ. ಇದರಲ್ಲಿ ಶೇ. 50ರಷ್ಟು ಬ್ಯಾಟರಿ ಕೇವಲ ಅರ್ಧಗಂಟೆಯಲ್ಲಿ ಚಾರ್ಜ್ ಆಗುತ್ತದೆ. ಈ ಮೊಬೈಲ್ ಪರದೆ 6.4 ಇಂಚು ಅಗಲ ಇದ್ದು ಮೊಬೈಲ್‌ನ ಪೂರ್ತಿ ಪರದೆ ಇದೆ. ಅಂಚು ರಹಿತವಾಗಿದೆ. 8 ಜಿಬಿ + 256 ಜಿಬಿ ಹಾಗೂ 6ಜಿಬಿ+128 ಜಿಬಿ ಎರಡು ಆವೃತ್ತಿಗಳಿವೆ. ಎರಡು ಸಿಮ್ ಹಾಕಬಹುದು. 3.5 ಎಂಎಂ ಆಡಿಯೋ ಜಾಕ್ ಹಾಕಿಕೊಳ್ಳಬಹುದು. ಕಡು ನೀಲಿ, ತೆಳು ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ದೊರಕಲಿದೆ. ಅಮೆಜಾನ್.ಇನ್ ನಲ್ಲಿ ಜನವರಿ 15 ರಿಂದ ಮುಂಗಡ ಬುಕಿಂಗ್ ಇದೆ. ಹೀಗೆ ಮುಂಗಡ ಬುಕಿಂಗ್ ಮಾಡಿದವರಿಗೆ 3000 ರೂ. ಬೆಲೆಯ ಆನರ್ ನ್ಪೋರ್ಟ್ ಎಎಂ 61, ಬಿಟಿ ಬ್ಲೂಟೂತ್ ಇಯರ್ ಫೋನ್ ಉಚಿತವಾಗಿ ದೊರಕಲಿದೆ. ಈ ಫೋನ್ ಜನವರಿ 29ರಂದು ಬಿಡುಗಡೆಯಾಗಲಿದೆ. ಇದೆಲ್ಲಾ ಸರಿ ಇದರ ದರ ಎಷ್ಟು? ಎಂಬ ಪ್ರಶ್ನೆ ಬಂದೇ ಬರುತ್ತದೆ. ಇದುವರೆಗೂ ಆನರ್ ಇದರ ದರ ಎಷ್ಟೆಂದು ತಿಳಿಸಿಲ್ಲ. ಅಂದಾಜು 30 ಸಾವಿರ ರೂ.ಗಳಿಂದ 35 ಸಾವಿರ ದೊಳಗೆ ಇದರ ದರ ಇರುವ ಸಾಧ್ಯತೆಯಿದೆ.
– ಕೆ.ಎಸ್. ಬನಶಂಕರ ಆರಾಧ್ಯ