ಬೆಂಗಳೂರು: ವ್ಯಕ್ತಿಯೊಬ್ಬನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ಸ್ಥಿತಿ ತಲುಪಿದ್ದ ಖಾಸಗಿ ಶಾಲಾ ಶಿಕ್ಷಕಿ ತನುಜಾ ಅವರಿಗೆ ರಕ್ತದಾನ ಮಾಡಿದ ಗಿರಿನಗರ ಠಾಣೆ ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ ಅವರ ಕಾರ್ಯಕ್ಕೆ ಇಡೀ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.
ಶನಿವಾರ ಬೆಳಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು ತಮ್ಮ ಕಚೇರಿಗೆ ಸಿದ್ದಲಿಂಗಯ್ಯ ಅವರನ್ನು ಕರೆಸಿಕೊಂಡು 25 ಸಾವಿರ ರೂ. ಮತ್ತು ಪ್ರಸಂಶನ ಪತ್ರ ನೀಡಿ ಗೌರವಿಸಿದರು. ಮಧ್ಯಾಹ್ನದ ವೇಳೆಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಸುದ್ದಿಗೋಷ್ಠಿ ನಡೆಸಿ ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಿದರು. ಬಳಿಕ ಶಿಕ್ಷಕಿ ತನುಜಾ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ತಂಡಕ್ಕೆ 50 ಸಾವಿರ ರೂ. ಬಹುಮಾನ ನೀಡಿದರು.
ಬಳಿಕ ಮಾತನಾಡಿದ ನಗರ ಆಯುಕ್ತ ಟಿ.ಸುನೀಲ್‌ಕುಮಾರ್, ಆರೋಪಿ ಶೇಖರ್ ವೈಯಕ್ತಿಕ ವಿಚಾರಕ್ಕೆ ಶಿಕ್ಷಕಿ ತನುಜಾ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಷಯ ತಿಳಿದ ಸಿದ್ದಲಿಂಗಯ್ಯ ಮತ್ತು ಸಿಬ್ಬಂದಿ ಶಿಕ್ಷಕಿಯನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಸಮಯಕ್ಕೆ ಶಸ್ತ್ರ ಚಿಕಿತ್ಸೆ ಕೊಡಿಸಿದ್ದಾರೆ. ಆರೋಪಿ ಶೇಖರ್ ವಿರುದ್ಧ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ಕೆಲವೊಂದು ಅನಿರೀಕ್ಷಿತ ಘಟನೆಗಳು ನಡೆದಾಗ ಸಾರ್ವಜನಿಕರು ಗಾಯಾಳುಗಳ ನೆರವಿಗೆ ಧಾವಿಸಬೇಕು. ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಜೀವ ರಕ್ಷಣೆ ಮಾಡುವ ವ್ಯಕ್ತಿಯ ಹೆಸರು, ವಿಳಾಸ ಮತ್ತು ಹೇಳಿಕೆ ಪಡೆಯದಂತೆ ಕಾನೂನಿನಲ್ಲಿ ರಕ್ಷಣೆ ಕೊಡಲಾಗಿದೆ. ಹೀಗಾಗಿ ಸಾರ್ವಜನಿಕರು ಸಹಾಕರ ನೀಡಬೇಕು ಎಂದು ಮನವಿ ಮಾಡಿದರು.
ಆರೋಪಿಯ ಬಂಧನ: ಶಿಕ್ಷಕಿ ತನುಜಾ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಹೊಸಕೆರೆಹಳ್ಳಿ ನಿವಾಸಿ ಶೇಖರ್(45) ಬಂಧಿತ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಮನೆ ಬಾಡಿಗೆ ಹಾಗೂ ಭೋಗ್ಯಕ್ಕೆ ಕೊಡಿಸುವ ಮಧ್ಯವರ್ತಿ ಕೆಲಸ ಮಾಡಿಕೊಂಡಿದ್ದಾನೆ.
ತನಗೆ ಪರಿಚಯ ಇರುವ ತನುಜಾ ಇತ್ತೀಚೆಗೆ ತನ್ನೊಂದಿಗೆ ಸರಿಯಾಗಿ ಮಾತನಾಡುವುದಿಲ್ಲ ಎಂದು ಆರೋಪಿ ಶೇಖರ್ ಗುರುವಾರ ಸಂಜೆ, ಆಕೆ ಜತೆ ಜಗಳ ತೆಗೆದು, ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವಿಚಾರ ತಿಳಿದ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ ಕೂಡಲೇ ಸ್ಥಳಕ್ಕೆ ತೆರಳಿದ ತನುಜಾ ಅವರನ್ನು ಆಸ್ಪತ್ರೆ ದಾಖಲಿಸಿದಲ್ಲದೆ, ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದರು. ಇದಕ್ಕೆ ಪೊಲೀಸ್ ಇಲಾಖೆ ಜತೆಗೆ ಸಾರ್ವಜನಿಕ ವಲಯದಿಂದಲೇ ಮೆಚ್ಚುಗೆ ವ್ಯಕ್ತವಾಗಿದೆ.