ಕನ್ನಡ ಚಿತ್ರರಂಗದಲ್ಲಿ ಹಿರಿತನಕ್ಕೆ ಗೌರವ ಕೊಡಲ್ಲ. ಸೀನಿಯರ್‌ಗಳನ್ನು ಕಡೆಗಣಿಸುತ್ತಾರೆ, ಮರ್ಯಾದೆ ಕೊಡಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಅದರಲ್ಲೂ ಹೊಸಬರಿಗೆ ಸೀನಿಯರ್‌ಗಳ ಬಗ್ಗೆ ಗೌರವವಿಲ್ಲ ಎಂಬುದು ಸ್ವಲ್ಪ ಹೆಚ್ಚು ಓಡಾಡುತ್ತಿರುವ ಮಾತು. ಇತ್ತೀಚೆಗೆ ನಡೆದ “ಕಿನಾರೆ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಗೀತಸಾಹಿತಿ ವಿ.ನಾಗೇಂದ್ರ ಪ್ರಸಾದ್, “ಸೀನಿಯರಿಟಿಗೆ ಗೌರವ ಕೊಡಿ’ ಎಂದು ಚಿತ್ರತಂಡಕ್ಕೆ ಕಿವಿಮಾತು ಹೇಳುವ ಪ್ರಸಂಗ ಬಂತು.
ಅದಕ್ಕೆ ಕಾರಣವಾಗಿರೋದು ಚಿತ್ರಕ್ಕೆ ಹಾಡು ಬರೆದವರ ಹೆಸರು. “ಕಿನಾರೆ’ ಚಿತ್ರಕ್ಕೆ ಕೆ.ಕಲ್ಯಾಣ್, ನಾಗೇಂದ್ರಪ್ರಸಾದ್, ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಹಾಡು ಬರೆದಿದ್ದಾರೆ. ಆದರೆ, ಚಿತ್ರತಂಡ ಹಾಡು ಬರೆದವರ ಹೆಸರನ್ನು – ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಎಂದು ನಮೂದಿಸಲಾಗಿತ್ತು.
ಚಿತ್ರದ ಬಗ್ಗೆ ಮಾತನಾಡಲು ವೇದಿಕೆ ಹತ್ತಿದ ವಿ.ನಾಗೇಂದ್ರ ಪ್ರಸಾದ್, “ಹಾಡು ಬರೆದವರ ಹೆಸರಲ್ಲಿ ಮೊದಲಿಗೆ ಕೆ.ಕಲ್ಯಾಣ್, ವಿ.ನಾಗೆಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಎಂದು ಹಾಕಿ. ಯಾರು ಚಿತ್ರರಂಗಕ್ಕೆ ಮೊದಲು ಬಂದಿದ್ದಾರೋ ಅವರ ಸೀನಿಯರಿಟಿಗೆ ಗೌರವ ಕೊಡಿ. ಚಿತ್ರರಂಗಕ್ಕೆ ಬರುವ ಹೊಸಬರು ಇದನ್ನು ತಿಳಿದುಕೊಳ್ಳಬೇಕು.
ಹಾಗಾಗಿ, ಹೇಳಿದೆ’ ಎನ್ನುತ್ತಾ ಮುಂದಿನ ಸಾರಿ ಪೋಸ್ಟರ್ ಬಿಡುವಾಗ ಈ ಬದಲಾವಣೆ ಮಾಡಿಕೊಳ್ಳಿ ಎಂದು ಸಲಹೆ ಕೊಟ್ಟರು. ನಾಗೇಂದ್ರ ಪ್ರಸಾದ್ ಮಾತಿನಿಂದ ಒಂದು ಕ್ಷಣ ತಬ್ಬಿಬ್ಟಾದ ಚಿತ್ರತಂಡ ಸಾವರಿಸಿಕೊಂಡು, “ಓಕೆ’ ಎಂದು ತಲೆಯಾಡಿಸಿತು. ಅಂದಹಾಗೆ, “ಕಿನಾರೆ’ ಚಿತ್ರ ಸಂಪೂರ್ಣ ಹೊಸಬರೇ ಸೇರಿ ಮಾಡಿದ್ದಾರೆ. ದೇವರಾಜ್ ಪೂಜಾರಿ ಈ ಚಿತ್ರದ ನಿರ್ದೇಶಕರು. ಕರಾವಳಿ ಸುತ್ತಮುತ್ತ ಚಿತ್ರದ ಚಿತ್ರೀಕರಣವಾಗಿದೆ.