Advertisement

ರಾಜ್ಯ ಸರ್ಕಾರದ ಸಾಧನೆಗೆ ಗೌರ್ನರ್‌ ಶ್ಲಾಘನೆ

06:05 AM Jan 27, 2018 | |

ಬೆಂಗಳೂರು : ಕೃಷಿಕರ ಹಾಗೂ ನೇಕಾರರ ಸಾಲಮನ್ನಾ, ಇಂದಿರಾ ಕ್ಯಾಂಟೀನ್‌ ಸೇರಿದಂತೆ ರಾಜ್ಯ ಸರ್ಕಾರದ ಹಲವು ಯೋಜನೆಗಳನ್ನು ರಾಜ್ಯಪಾಲ ವಜೂಭಾಯಿ ವಾಲಾ ಅವರು ಕೊಂಡಾಡಿದ್ದಾರೆ.

Advertisement

ಶುಕ್ರವಾರ ನಗರದ ಫೀಲ್ಡ್‌ ಮಾರ್ಷಲ್‌ ಮಾಣಿಕ್‌ಷಾ ಪೆರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು, ರಾಜ್ಯ ಸರ್ಕಾರವು ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಸಾಂಪ್ರದಾಯಿಕವಾಗಿ ಶೇ.49ರಷ್ಟು ಕೊಡುಗೆಯನ್ನು ರಾಷ್ಟ್ರಕ್ಕೆ ನೀಡುತ್ತಿದೆ. ಗೋಡಂಬಿ, ತೆಂಗು ಮತ್ತು ಮಾವಿನ ಬೆಳೆಯ ಉತ್ಪಾದನೆಯನ್ನು ವೈಜ್ಞಾನಿಕವಾಗಿ ಹೆಚ್ಚಿಸಲು ಕ್ರಮ ತೆಗೆದುಕೊಂಡಿದೆ. ರಾಜ್ಯದ 22.35 ಲಕ್ಷ ಕೃಷಿಕರ 8165 ಕೋಟಿ ರೂ.ಗಳ ಕೃಷಿ ಸಾಲ, 19,410 ನೇಕಾರರ 53.64 ಕೋಟಿ ರೂ.ಗಳ ಸಾಲಮನ್ನಾ ಮಾಡಿದ ತೀರ್ಮಾನವನ್ನು ಶ್ಲಾ ಸಿದರು.

ಅನ್ಯಭಾಗ್ಯ ಯೋಜನೆಯ ಅಕ್ಕಿಯನ್ನು 5 ಕೆ.ಜಿ.ಯಿಂದ 7 ಕೆ.ಜಿ.ಗೆ  ಹೆಚ್ಚಿಸಿದೆ. ಶೇ.50ರಷ್ಟು ದರದಲ್ಲಿ 1ಕೆ.ಜಿ. ತೊಗರೆಬೆಳೆಯನ್ನು ಪೂರೈಕೆ ಮಾಡಲಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿಯಲ್ಲಿ 8.70 ಲಕ್ಷ ಗರ್ಭಿಣಿಯರಿಗೆ ಪೌಷ್ಠಿಕಾಂಶಯುಕ್ತ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುತ್ತಿದೆ. ಬೆಂಗಳೂರಿನ 198 ವಾರ್ಡ್‌ನಲ್ಲಿ ಇಂದಿರಾ ಕ್ಯಾಂಟೀನ್‌ ಮೂಲಕ ರಿಯಾಯ್ತಿ ದರದಲ್ಲಿ ಊಟ ಹಾಗೂ ಉಪಹಾರ ಪೂರೈಕೆ ಮಾಡಲಾಗುತ್ತಿದೆ. ಇದನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಕ್ಕೂ ವಿಸ್ತರಿಸುವ ತೀರ್ಮಾನ ತೆಗೆದುಕೊಂಡಿದ್ದು, ಹಸಿವು ಮುಕ್ತ ಕರ್ನಾಟಕದ ಗುರಿಯತ್ತ ರಾಜ್ಯ ಸರ್ಕಾರ ಸಾಗುತ್ತಿದೆ ಎಂದು ಸರ್ಕಾರದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಶೈಕ್ಷಣಿಕ ಕೇಂದ್ರ :
28 ರಾಜ್ಯ ವಿವಿ, 23 ಖಾಸಗಿ ಹಾಗೂ 15 ಡೀಮ್ಡ್ ವಿವಿ ಹೊಂದಿರುವ ಕರ್ನಾಟಕ ಶೈಕ್ಷಣಿಕ ಕೇಂದ್ರವಾಗಿದೆ. ಗ್ರಾಮೀಣ ಅಧ್ಯಯನಕ್ಕಾಗಿ ಪ್ರತ್ಯೇಕ ವಿವಿಯನ್ನು ಆರಂಭಿಸಿರುವ ದೇಶದ ಮೊದಲ ರಾಜ್ಯ. ವೃತ್ತಿ ತರಬೇತಿ ಮತ್ತು ಕೌಶಲಾಭಿವೃದ್ಧಿ ನಿಗಮದ ಮೂಲಕ ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ 2,147 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 4,014 ಕಿ.ಮೀ.  ವಿವಿಧ ಜಿಲ್ಲೆಗಳ ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂಬ ಮಾಹಿತಿ ನೀಡಿದರು.

ಸಬಲಗೊಂಡ ಐಟಿ ಉದ್ದಿಮೆ :
ಮಹಿಳೆಯರ ಸಬಲೀಕರಣ ಮತ್ತು ಘನತೆಯನ್ನು ರಕ್ಷಿಸಲು ರಾಜ್ಯ ಸರ್ಕಾರ ಹಲವು ಕ್ರಮ ತೆಗೆದುಕೊಂಡಿದೆ. ಸರ್ಕಾರದ ದಾಖಲೆಗಳನ್ನು ರಕ್ಷಿಸಿಡಲು ರಾಜ್ಯ ದತ್ತಾಂಶ(ಡೇಟಾ)ಕೇಂದ್ರವನ್ನು ಸ್ಥಾಪಿಸಲಾಗಿದೆ. ಐಟಿ, ಬಿಟಿ ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ನಮ್ಮ ಸರ್ಕಾರದ ಪ್ರಯತ್ನದ ಮೂಲಕ ಐಟಿ ಉದ್ದಿಮೆ ದಕ್ಷತೆಯಿಂದಾಗಿ 2017ರಲ್ಲಿ ಐಟಿ ರಫ್ತು ಮೂಲಕ ರಾಜ್ಯವು ಮೂರು ಲಕ್ಷ ಕೋಟಿ ರೂ.ಗಳನ್ನು ಕೊಡುಗೆಯಾಗಿ ನೀಡಿದೆ. ಭಾರತದ ಜೈವಿಕ ತಂತ್ರಜ್ಞಾನದ ಉದ್ದಿಮೆಯ ಆದಾಯಕ್ಕೆ ಶೇ.35ರಷ್ಟು ಕೊಡುಗೆ ನೀಡಿದೆ ಎಂದು  ರಾಜ್ಯ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.

Advertisement

ವನ್ಯಜೀವಿಗಳ ಸಂರಕ್ಷಣೆ:
ಸರ್ಕಾರ ಡಿಜಿಟಲ್‌ ಆಡಳಿತ ಮತ್ತು ಸಂಪರ್ಕವನ್ನು ವಿಸ್ತರಿಸಲು ಒತ್ತು ನೀಡುತ್ತಿದೆ. ಈಗಾಗಲೇ 5353 ಗ್ರಾಮ ಪಂಚಾಯ್ತಿಗಳು ವೈ-ಫೈ ಸೇವೆಗಳೊಂದಿಗೆ ರಾಜ್ಯ ವೈಡ್‌ ಏರಿಯಾ ನೆಟ್‌ವರ್ಕ್‌ ಸಂಪರ್ಕ ಹೊಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಯೋಜನೆ ರೂಪಿಸಿದೆ. ಆನೆ ಮತ್ತು ಹುಲಿಗಳ ಸಂಖ್ಯೆ ಹೆಚ್ಚಿಸುವ ಮೂಲಕ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಮಹತ್ತರ ಸಾಧನೆ ಮಾಡಿದೆ ಎಂದರು.

ಬೆಂಗಳೂರು ಜಗತ್ತಿನಲ್ಲೇ ಹೆಚ್ಚು ಕ್ರಿಯಾತ್ಮಕ ಮತ್ತು ತ್ವರಿತ ಬೆಳವಣಿಗೆಯ ನಗರ ಹಾಗೂ ಅತ್ಯುನ್ನತ ಐದು ನಾವಿನ್ಯತಾ ಕೇಂದ್ರಗಳಲ್ಲಿ ಇದು ಒಂದಾಗಿದೆ. ನಗರದ ಜನಸಂಖ್ಯಾ ಬೆಳವಣಿಗೆಗೆ ಅನುಗುಣವಾಗಿ ಸೇವೆ ಒದಗಿಸಲು ಮೆಟ್ರೊ 2ನೇ ಹಂತದ 72 ಕಿ.ಮೀಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಐಕ್ಯತೆ ಅಗತ್ಯ:
ಮಾನವೀಯತೆಯ ಯುಗಯುಗಗಳಿಂದ ಅಸ್ಥಿತ್ವದಲ್ಲಿರುವ ದೇಶ ಭಾರತ. ವಿವಿಧ ಧರ್ಮ, ಸಮಾಜ, ಸಂಸ್ಕೃತಿ ಹಾಗೂ ಭಾಷೆಗಳನ್ನು ಸಾಮರಸ್ಯದಿಂದ ಕೂಡಿಕೊಂಡಿರುವ ಪುಣ್ಯಭೂಮಿ. ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಜಗತ್ತಿಗೆ ಸಾರುವ ಮೂಲಕ ನಾವು ಎಲ್ಲರಲ್ಲಿಯೂ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಬೇಕಿದೆ. ನಮ್ಮ ರಾಷ್ಟ್ರೀಯ ಐಕ್ಯತೆಗಾಗಿ ಒಟ್ಟಾಗಿ ಶ್ರಮಿಸ‌ಬೇಕು. ಪ್ರತಿಯೊಬ್ಬರು ದೇಶಪ್ರೇಮದ ಶಕ್ತಿಯ ಮೂಲಕ ಬಲಿಷ್ಠ ಹಾಗೂ ಆಧುನಿಕ ಭಾರತ ನಿರ್ಮಾಣಕ್ಕಾಗಿ ಕಾರ್ಯಪ್ರವೃತ್ತರಾಗೋಣ. ಒಂದು ಭಾರತ ಶ್ರೇಷ್ಠ ಭಾರತ ಎಂದು ರಾಜ್ಯಪಾಲ ವಿ.ಆರ್‌.ವಾಲಾ ಕರೆ ನೀಡಿದರು.

ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರುತ್ತಿದೆ. ಜಗತ್ತಿನ ಹಲವು ರಾಷ್ಟ್ರಗಳು ನಮ್ಮ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಎದುರು ನೋಡುತ್ತಿವೆ. ನಮ್ಮ ಜ್ಞಾನ, ಕೌಶಲ್ಯ ಹಾಗೂ ಮಾನವ ಶಕ್ತಿಗೆ ಭಾರೀ ಬೇಡಿಕೆ ಇದೆ. ಅದಾಗ್ಯೂ ನಾವು ಸಾಧಿಸಬೇಕಿರುವುದು ಸಾಕಷ್ಟಿದೆ. ಎಲ್ಲ ಕ್ಷೇತ್ರದ ಸ್ವಾವಲಂಬನೆಗಾಗಿ ಒಗ್ಗಟ್ಟಿನ ಪ್ರಯತ್ನ ಅಗತ್ಯ.
– ವಜೂಭಾಯಿ ವಾಲಾ, ರಾಜ್ಯಪಾಲ.

Advertisement

Udayavani is now on Telegram. Click here to join our channel and stay updated with the latest news.

Next