Advertisement

ಇನ್ಮುಂದೆ ಹೃದಯ ತಜ್ಞರು ಮನೆಬಾಗಿಲಿಗೆ

05:17 PM Oct 13, 2018 | Team Udayavani |

ಹೊನ್ನಾವರ: ಹೃದಯಾಘಾತವಾದ ಒಂದು ಘಂಟೆಯೊಳಗೆ ಆತನಿಗೆ ಚಿಕಿತ್ಸೆ ಸಿಗಬೇಕು. ದೂರದ ಹಳ್ಳಿಗಳ ಜನಸಾಮಾನ್ಯರಿಗೆ ಚಿಕಿತ್ಸೆ ಕನಸಿನ ಮಾತು. ಇದನ್ನು ತಪ್ಪಿಸಲು ತಕ್ಷಣ ಹೆಚ್ಚಿನ ಚಿಕಿತ್ಸೆಗೆ ತಜ್ಞರಿಂದ ಸಲಹೆ ಪಡೆಯಲು ಮಂಗಳೂರಿನ ಹೃದಯವಂತ ತಜ್ಞ ಡಾ| ಪದ್ಮನಾಭ ಕಾಮತ (ಸಿಎಡಿ-ಕಾರ್ಡಿಯಾಲೊಜಿಸ್ಟ್‌ ಎಟ್‌ ಡೋರ್‌ಸ್ಟೆಪ್‌) ಹೃದಯ ತಜ್ಞರು ಮನೆಬಾಗಿಲಿಗೆ ಎಂಬ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೂ ಈ ಯೋಜನೆ ಕಾಲಿಟ್ಟಿದೆ.

Advertisement

ಗ್ರಾಮೀಣ ಆಯುರ್ವೇದ ಅಥವಾ ಅಲೋಪತಿ ವೈದ್ಯರು, ಅನುಭವಿ ದಾಯಿಗಳು ನಿರ್ವಹಿಸಬಹುದಾದ ಅಂದಾಜು 25ಸಾವಿರ ರೂ. ಬೆಲೆಯ ಇಸಿಜಿ ಯಂತ್ರವನ್ನು ಉಚಿತವಾಗಿ ಪೂರೈಸಲಾಗುತ್ತಿದೆ. ಹೃದಯ ಕಾಯಿಲೆ ಲಕ್ಷಣವುಳ್ಳವರು ಬಂದ ಕೂಡಲೇ ಈ ಉಪಕರಣವನ್ನು ಜೋಡಿಸಿದರೆ ಹೃದಯದ ಸ್ಥಿತಿಯ ವರದಿ ಮುದ್ರಣವಾಗಿ ಕೈಗೆ ಬರುತ್ತದೆ. ಅದೇ ಸಮಯದಲ್ಲಿ ಹೃದಯ ತಜ್ಞರಿಗೆ ಈ ಸಂದೇಶ ಹೋಗುತ್ತದೆ. ಅವರು ಕೂಡಲೇ ತುರ್ತು ಚಿಕಿತ್ಸೆ ಸೂಚಿಸುತ್ತಾರೆ. ಪರಿಸ್ಥಿತಿ ಗಂಭೀರವಿದ್ದರೆ ಕೂಡಲೇ ದೊಡ್ಡ ಆಸ್ಪತ್ರೆಗೆ ಸೇರಿಸಲು ಸೂಚನೆ ದೊರೆಯುತ್ತದೆ. ಎರಡನೇ ಆಘಾತಕ್ಕೂ ಮೊದಲು ಎಂಜಿಯೋಗ್ರಾಮ್‌ ಅಥವಾ ಎನ್‌ಜಿಯೋಪ್ಲಾಸ್ಟ್‌ ಮಾಡಿಸಿ ಜೀವ ಉಳಿಸಲು ಈ ಉಪಕರಣ ನೆರವಾಗುತ್ತದೆ. ಇದನ್ನು ದಾನಿಗಳ ಮತ್ತು ಕಾರ್ಪೋರೇಟ್‌ ಸಂಸ್ಥೆಗಳ ನೆರವಿನಿಂದ ಪೂರೈಸಲಾಗುತ್ತಿದೆ. 

ಈವರೆಗೆ 25ಇಸಿಜಿ ಯಂತ್ರಗಳನ್ನು ದಕ ಜಿಲ್ಲೆಯ ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ನೀಡಲಾಗಿದೆ. ಉತ್ತರಕನ್ನಡ, ಚಿಕ್ಕಮಗಳೂರು, ಕುಂದಾಪುರ, ತೀರ್ಥಹಳ್ಳಿ ಭಾಗಗಳಿಗೂ ಮಿಶನ್‌ ಒದಗಿಸಲಾಗುವುದು. ಉತ್ತರಕನ್ನಡದ ಮುರ್ಡೇಶ್ವರ, ಮಂಕಿ, ಸಂಶಿ, ಸಾಲಕೋಡು ಪ್ರಾಥಮಿಕ ಕೇಂದ್ರಗಳಿಗೆ ಇಸಿಜಿ ಮಿಶನ್‌ ನೀಡಲಾಗುವುದು. ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಇಸಿಜಿ ಪೂರೈಸುವ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಜಿಲ್ಲೆಯ ಹೊನ್ನಾವರ (2), ಗೋಕರ್ಣ (1), ಕುಮಟಾ (2) ಉಪಕರಣಗಳನ್ನು ಪೂರೈಸಿದೆ. ಒಟ್ಟಿಗೆ ಜಿಲ್ಲೆಗೆ 10ಯಂತ್ರಗಳು ಬಂದಿದ್ದು ಇನ್ನಷ್ಟು ಗ್ರಾಮೀಣ ಆಸ್ಪತ್ರೆಗಳನ್ನು ಗುರುತಿಸಲಾಗುತ್ತಿದೆ.

ದೇಶದಲ್ಲಿ 17ಲಕ್ಷ ಮಂದಿ ಪ್ರತಿವರ್ಷ ಹೃದಯ ಸಂಬಂಧಿ ಕಾಯಿಲೆಗಳಿಂದ ಮೃತಪಡುತ್ತಾರೆ. ಈ ಪೈಕಿ ಶೇ. 50ರಷ್ಟು ಮಂದಿ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಇವರಲ್ಲಿ ಶೇ. 33ರಷ್ಟು ಮಂದಿ ಆಸ್ಪತ್ರೆಗೆ ತಲುಪಲು ವಿಳಂಬದಿಂದಾಗಿ ಕೊನೆಯುಸಿ ಎಳೆಯುತ್ತಾರೆ. 11ತಾಲೂಕುಗಳುಳ್ಳ ಉತ್ತರ ಕನ್ನಡದಲ್ಲಿ ಹೃದಯಾಘಾತ ಆದ ಕೂಡಲೇ ಎಂಜಿಯೋಗ್ರಾಂ ಅಥವಾ ಎಂಜಿಯೋಪ್ಲಾಸ್ಟ್‌ ಮಾಡಿಸಲು ವ್ಯವಸ್ಥೆ ಇಲ್ಲ. ಇದನ್ನು ಮಾಡಬಲ್ಲ ವೈದ್ಯರೂ ಇಲ್ಲ. ಆದ್ದರಿಂದ ಈ ಉಪಕರಣ ಜಿಲ್ಲೆಗೆ ಉಪಕಾರಿಯಾಗಿದೆ.

ವಾಟ್ಸ್‌ ಆ್ಯಪ್‌ ಗ್ರುಪ್‌ ರಚನೆ
ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರಿನ 29ವರ್ಷದ ಆಟೋ ಚಾಲಕ ಹೃದಯಾಘಾತಕ್ಕೆ ಈಡಾಗಿ ಸಕಾಲಕ್ಕೆ ದೊಡ್ಡ ಆಸ್ಪತ್ರೆ ಸೇರುವಷ್ಟರಲ್ಲಿ ವೈದ್ಯರೆದುರೇ ಪ್ರಾಣಬಿಟ್ಟಿದ್ದ. ಆತನ ಕುಟುಂಬದ ಹೆಂಡತಿ ಮತ್ತು 2ಮಕ್ಕಳು ಗೋಳಾಡುವುದನ್ನು ಕಂಡು ನಾನೂ ಅತ್ತಿದ್ದೆ. ವಿಳಂಬದಿಂದಾಗುವ ಇಂತಹ ಸಾವು ತಪ್ಪಿಸಲು ಹೃದಯ ತಜ್ಞನಾದ ನಾನು ತಕ್ಷಣ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕೆಂದು ಇತರ ಸಮಾನ ಮನಸ್ಕರೊಂದಿಗೆ ಚರ್ಚಿಸಿ, ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿ ಈ ಯೋಜನೆ ಆರಂಭಿಸಿದೆ ಎಂದು ಡಾ| ಪದ್ಮನಾಭ ಕಾಮತ್‌ ಹೇಳುತ್ತಾರೆ. ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥರಾಗಿರುವ ಅವರು, ವಿದ್ಯಾರ್ಥಿ ಜೀವನದಿಂದಲೇ ಮಾನವೀಯ ಕಳಕಳಿ, ಯಕ್ಷಗಾನದ ಪ್ರೀತಿ ಬೆಳೆಸಿಕೊಂಡವರು. ಮಣಿಪಾಲ ಮತ್ತು ಮಂಗಳೂರಿನ ಕೆಎಂಸಿಯ ಹೃದಯ ವಿಭಾಗದಲ್ಲಿ ದುಡಿದಿರುವ ಇವರು ಹಲವು ಅಮೂಲ್ಯ ಲೇಖನಗಳನ್ನು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಹೃದಯಕ್ಕೆ ಸಂಬಂಧಿಸಿ ಬರೆದಿದ್ದಾರೆ. ಒಂದು ನಿಮಿಷ ಬಿಡುವಿಲ್ಲದ ಇವರು ಈ ಯೋಜನೆ ಆರಂಭವಾದ ಮೇಲೆ ಹಲವು ಜೀವಗಳನ್ನು ಉಳಿಸಲು ಸಾಧ್ಯವಾಗಿರುವುದರಿಂದ ಇದನ್ನು ನೆರೆಜಿಲ್ಲೆಗೂ ವಿಸ್ತರಿಸಿದ್ದಾರೆ.

Advertisement

ಜೀಯು, ಹೊನ್ನಾವರ 

Advertisement

Udayavani is now on Telegram. Click here to join our channel and stay updated with the latest news.

Next