ಜೀಯು, ಹೊನ್ನಾವರ
ಹೊನ್ನಾವರ: ಮಾವು ಅಂದಕೂಡಲೇ ಆಪೂಸ್, ಪಾಯರಿ, ಮಲ್ಲಿಕಾ, ಜಿಲ್ಲೆಯ ಕರಿ ಇಷಾಡ ಮಾತ್ರ ಗೊತ್ತು. ಇವುಗಳ ಹೆಸರು ಹೇಳಿದರೆ ರುಚಿಯೂ ನೆನಪಿಗೆ ಬರುತ್ತದೆ. ಪೇಟೆಯಲ್ಲಿ ಇವುಗಳದೇ ದರ್ಬಾರು.
ಆದರೆ ಹೊನ್ನಾವರದ ಕರ್ಕಿ ಮತ್ತು ಕರಾವಳಿಯ ಕೆಲವು ಊರುಗಳಲ್ಲಿ ಇನ್ನೆಲ್ಲೂ ಸಿಗದ ವಿಶಿಷ್ಟ ರುಚಿ, ಗಾತ್ರ, ಬಣ್ಣದ ಹತ್ತಾರು ತಳಿಗಳಿವೆ. ಅನಿರ್ವಚನೀಯ ರುಚಿಯ ಈ ಹಣ್ಣುಗಳ ತಳಿಯನ್ನು ಅತ್ಯಂತ ಕಷ್ಟಕಾಲದಲ್ಲಿ ಹಿರಿಯರು ತಂದು ಬೆಳೆಸಿ, ಉಳಿಸಿದ್ದರು. ಕಳೆದೆರಡು ದಶಕದಿಂದ ಈ ತಳಿಗಳು ಮಾಯವಾಗುತ್ತಾ ಬಂದಿದೆ. ಜಿಲ್ಲೆಯ ತೋಟಗಾರಿಕಾ ವಿದ್ಯಾಲಯ, ಇಲಾಖೆ ಈ ತಳಿಯನ್ನು ಉಳಿಸಿದರೆ ಮುಂದಿನ ಪೀಳಿಗೆಗೆ ಉಪಕಾರವಾಗುತ್ತದೆ.
ಮುಸ್ರಾ, ರಾಮಕಪಿ, ಮಾಣಿಬಟ್ಟ, ಗಿಡುಗ, ಮಲಗೋವಾ, ಬುಳ್ಳಹೆಗ್ಡೆ ಮತ್ತು ಭಟ್ಕಳದ ಸರಾಸರಿ 2ಕೆಜಿ ತೂಕದ ಖುದಾ ದಾದಾ ತಳಿ ಎಷ್ಟು ಜನಕ್ಕೆ ಗೊತ್ತು ? ಶ್ರೀಪಾದ ಎಂಬ ಗುತ್ತಿಗೆದಾರರು ಈ ಎಲ್ಲ ತಳಿಗಳನ್ನು ಹುಡುಕಿ, ಕಾಯಿ ಸಂಗ್ರಹಿಸಿ, ಜಿಲ್ಲೆಯ ಹೊರಗೆ ಕಳಿಸುತ್ತಾರೆ.
ಬೆಂಗಳೂರು, ಮುಂಬೈಯವರಿಗೆ ಗೊತ್ತಿರುವ ಈ ಜಾತಿಯ ಮಾವಿನ ಸವಿ ಜಿಲ್ಲೆಯವರಿಗೆ ಗೊತ್ತಿಲ್ಲ. ದೇಶೀ ಮತ್ತು ವಿದೇಶಿ ಆಕಳ ಹಾಲು, ನಾಟಿ ಮತ್ತು ಫಾರ್ಮ್ ಕೋಳಿ ಮೊಟ್ಟೆಯ ರುಚಿಯಲ್ಲಿರುವ ಭಿನ್ನತೆ ಮತು ಆರೋಗ್ಯಕರ ರುಚಿಯಂತೆ ಸ್ಥಳೀಯ ಮಾವಿಗೆ ವಿಶಿಷ್ಟ ರುಚಿಯಿದೆ. ಕರ್ಕಿ, ಹಳದೀಪುರ ಭಾಗದ ಸಮುದ್ರ ತೀರದ ಹೊಯ್ಗೆ ಚಿಟ್ಟೆಯಲ್ಲಿ ಹುಲುಸಾಗಿ ಬೆಳೆಯುವ ಈ ಜಾತಿಯ ಮಾವಿನ ಗಿಡಗಳು ಕಡಿಮೆ ಹಣ್ಣು ಕೊಟ್ಟರು ಪ್ರತಿಯೊಂದು ತನ್ನದಾದ ಸುವಾಸನೆ, ರುಚಿ, ಬಣ್ಣ ಹೊಂದಿದೆ.
ವೇದವೇದಾಂತ ಪಾರಂಗತರಾಗಿ ವೈದಿಕ ಕಾರ್ಯಗಳಿಗೆ ದೇಶ ಸುತ್ತಿತ್ತಿದ್ದ ಕರ್ಕಿ ಪಂಡಿತರು ಮರಳಿ ಊರಿಗೆ ಬರುವಾಗ ಈ ಜಾತಿಯ ಮಾವಿನ ಗೊರಟೆ ತಂದು ನೆಟ್ಟು ಬೆಳೆಸಿದ್ದರು. ಕಷ್ಟಕಾಲಕ್ಕೆ ಮಾವಿನ ಆದಾಯ ನೆರವಾಗುತ್ತಿತ್ತು. ಈಗ ಆ ತಲೆಮಾರು ಇಲ್ಲ. ಹೊಸ ತಲೆಮಾರು ಜೀವನೋಪಾಯಕ್ಕೆ ಶಹರ ಸೇರಿಕೊಂಡಿದೆ. ಪೂರ್ವಜರ ಮನೆ, ಒಂದೆರಡು ಮರಗಳು ಮಾತ್ರ ಉಳಿದುಕೊಂಡಿದೆ. ಈ ತಳಿ ಉಳಿಸುವ ಆಸಕ್ತಿ, ಬಿಡುವು ಅವರಿಗೆ ಇಲ್ಲವಾದರೂ ದೇಶದಲ್ಲಿರುವ ನೂರಾರು ಮಾವಿನ ತಳಿಗಳನ್ನು ಉಳಿಸಿಕೊಂಡಂತೆ ಜಿಲ್ಲೆಯ ಈ ತಳಿಯನ್ನು ಉಳಿಸಬೇಕಾದ ಅಗತ್ಯವಿದೆ. ಬುಳ್ಳಹೆಗ್ಡೆ ಇಷಾಡಿನಲ್ಲಿ ಗಟ್ಟಿ, ಮೃದು ಜಾತಿ ಇದೆ. ಜೀರಿಗೆಯ ಸುವಾಸನೆ ಇದೆ. ಗಿಡಗದ ಹಣ್ಣಿನ ರಸವನ್ನು ತಾಟಿನಲ್ಲಿ ಹಾಕಿ ನಾಲ್ಕು ದಿನ ಬಿಸಿಲಲ್ಲಿ ಇಟ್ಟರೆ ಸುಮಧುರ ವಾಸನೆಯ ಹಪ್ಪಳ ತಯಾರಾಗುತ್ತದೆ. ಹೀಗೆ ಪ್ರತಿ ಜಾತಿ ಹಣ್ಣಿಗೂ ಒಂದು ಜಾತಕ ಇದೆ.
ಲೋಡ್‌ಗಟ್ಟಲೆ ಸ್ಥಳೀಯ ತಳಿಯ ಸಾವಯವ ಹಣ್ಣುಗಳು ದೂರದೂರಿನ ನಾಲಿಗೆಗೆ ಸವಿ ಕೊಡುತ್ತವೆ. ಅಲ್ಲಿಯ ಹಣ್ಣುಗಳು ರಾಸಾಯನಿಕ ಸಿಂಪಡಿಸಿಕೊಂಡು ಇಲ್ಲಿ ಹಣ್ಣಾಗಿ ಇಲ್ಲಿನವರ ಆರೋಗ್ಯ ಕೆಡಿಸುತ್ತದೆ. ಜಿಪಂ, ತೋಟಗಾರಿಕಾ ಇಲಾಖೆ, ತೋಟಗಾರಿಕಾ ಕಾಲೇಜು ಮನಸ್ಸು ಮಾಡಿದರೆ ಜಿಲ್ಲೆಯ ತಳಿ ಉಳಿಸುವುದು ಕಷ್ಟವೇನಲ್ಲ.