ಹೊನ್ನಾವರ: ಉತ್ತರ ಕನ್ನಡದ ಕರಾವಳಿಯಿಂದ ಘಟ್ಟ ಏರಿ ಉತ್ತರಭಾರತ, ಬಯಲುಸೀಮೆ, ಮಲೆನಾಡು ಸೇರಲು 5 ರಸ್ತೆಗಳಿರುವಾಗ ದೇವಿಮನೆ ಘಟ್ಟದ ರಸ್ತೆಯನ್ನು ವಿಸ್ತರಿಸುವ ಅಗತ್ಯವಿದೆಯೇ, ಇಲ್ಲವೇ ಎಂಬುದು ಪ್ರಸ್ತುತ ಚರ್ಚಿತ ವಿಷಯವಾಗಿದೆ. ವಿಸ್ತರಣೆ ಬೇಕು ಅನ್ನುವವರು, ಬೇಡ ಅನ್ನುವವರು ನಿಖರ ಕಾರಣ ಹೇಳುತ್ತಿಲ್ಲ.
ಜಿಲ್ಲೆಯಿಂದ 1. ಭಟ್ಕಳ-ಕೋಗಾರ-ಸಾಗರ, 2. ಹೊನ್ನಾವರ-ಗೇರಸೊಪ್ಪಾ-ಮಾವಿನಗುಂಡಿ-ಸಾಗರ, 3. ಕುಮಟಾ-ಚಂದಾವರ-ದೊಡ್ಮನೆ-ಸಿದ್ದಾಪುರ , 4. ಕುಮಟಾ-ದೇವಿಮನೆ-ಶಿರಸಿ, 5. ಅಂಕೋಲಾ-ಯಲ್ಲಾಪುರ-ಹುಬ್ಬಳ್ಳಿ-ಧಾರವಾಡ ಈ ರಸ್ತೆಗಳಿವೆ. ಇದರ ಹೊರತಾಗಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದಾಗ ಹೊನ್ನಾವರ-ಸಾಲಕೋಡ-ದೊಡ್ಮನೆ-ಸಿದ್ದಾಪುರ ರಸ್ತೆಗೆ ಮಂಜೂರಾತಿ ಕೊಟ್ಟಿದ್ದರು. ಈಗಲೂ ಕಚ್ಚಾ ರಸ್ತೆ ಇದೆ. ಹೆಗಡೆಯವರ ಅಧಿಕಾರ ಹೋದ ಕಾರಣ ಪಕ್ಕಾ ರಸ್ತೆ ಆಗಿಲ್ಲ.
ಕೇರಳದ ತುದಿಯಿಂದ ಕರಾವಳಿ ಮಾರ್ಗವಾಗಿ ಕಾರವಾರ-ಗೋವಾ ಮತ್ತು ಮಹಾರಾಷ್ಟ್ರಕ್ಕೆ ಹೋಗುವ ರಸ್ತೆ ಚತುಷ್ಪಥವಾಗುತ್ತಿದೆ. ಹುಬ್ಬಳ್ಳಿ- ಧಾರವಾಡ- ಬಯಲುಸೀಮೆ- ಉತ್ತರಭಾರತಕ್ಕೆ ಹೋಗಲು ಅಂಕೋಲಾ-ಯಲ್ಲಾಪುರ ರಸ್ತೆ ಈಗಾಗಲೇ ದ್ವಿಪಥವಾಗಿದೆ. ಕುಮಟಾ-ದೇವಿಮನೆ ರಸ್ತೆಯ ಕಾಂಕ್ರೀಟೀಕರಣ ಕಾಗೇರಿಯವರ ಕಾಲದಲ್ಲಿ ಆಗಿದೆ. ಮಧ್ಯಾಹ್ನ 12ಗಂಟೆಗೂ ಒಂದು ಬಿಂದು ಬಿಸಿಲು ಬೀಳದ ಈ ಘಟ್ಟದ ಮಾರ್ಗವನ್ನು ಚತುಷ್ಪಥ ಮಾಡಿದರೆ ನಿತ್ಯಹರಿದ್ವರ್ಣದ ಕಾಡು ನಾಶವಾಗುವುದಲ್ಲದೇ ವಾಹನಗಳ ಓಡಾಟ ಹೆಚ್ಚಿ ಪರಿಸರಕ್ಕೆ ಹಾನಿಯಾಗಲಿದೆ. ಇದನ್ನು ಲೈಬಿಟ್ಟು ಕುಮಟಾ-ಚಂದಾವರ-ಸಿದ್ದಾಪುರ ಮತ್ತು ಹೊನ್ನಾವರ-ಗೇರಸೊಪ್ಪಾ- ಮಾವಿನಗುಂಡಿ ರಸ್ತೆಯನ್ನು ಮತ್ತು ಭಟ್ಕಳ-ಕೋಗಾರ-ಸಾಗರ ರಸ್ತೆಯನ್ನು ಇನ್ನಷ್ಟು ಭದ್ರಪಡಿಸಿದರೆ ಮಲೆನಾಡು, ಮೈಸೂರು ಪ್ರಾಂತಗಳಿಗೆ ಹೋಗಲು ಸಾಧ್ಯವಿದೆ. ಬೇಕಿದ್ದರೆ ತುಳಸಾಣಿ-ಹಿರೇಬೈಲ್ ವರೆಗೆ ಮುಗಿದಿರುವ ಸಾಲಕೋಡ-ದೊಡ್ಮನೆ ರಸ್ತೆಯನ್ನು ಬಲಪಡಿಸಿ ಇನ್ನೊಂದು 10ಕಿಮೀ ರಸ್ತೆ ನಿರ್ಮಿಸಿದರೆ ಕೇರಳದ ತುದಿಯಿಂದ ಉತ್ತರ ಕನ್ನಡದ ಮಾರ್ಗವಾಗಿ ಹೋಗಲು 5ಘಟ್ಟದ ರಸ್ತೆಗಳಾಗುತ್ತದೆ. ಎಲ್ಲ ರಸ್ತೆಗಳು ಸರಿಯಾಗಿದ್ದರೆ ವಾಹನಗಳು ಹತ್ತಿರದ ಮಾರ್ಗವನ್ನು ಆಯ್ದುಕೊಳ್ಳಬಹುದು. ಇದರಿಂದ ಘಟ್ಟದ ಸೌಂದರ್ಯ, ಪರಿಸರ ಉಳಿಯುತ್ತದೆ.
ದೇವಿಮನೆ ಘಟ್ಟವನ್ನು ವಿಸ್ತರಿಸಿದರೆ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗದ ಅಗತ್ಯಕ್ಕಿಂತ ಹೆಚ್ಚು ಕಾಡು ನಾಶವಾಗುತ್ತದೆ, ಪಶ್ಚಿಮಘಟ್ಟದ ಹೃದಯದಂತಹ ಕಾಡು ಒಣಗಿ ಹೋಗುತ್ತದೆ. ಕೇವಲ 10ಮೀಟರ್ ಅಗಲದಲ್ಲಿ ಹಳಿ ಜೋಡಿಸಿದರೆ ರೈಲು ಓಡುತ್ತದೆ. ರಸ್ತೆ ದ್ವಿಪಥ ಮಾಡಲು 20ಮೀಟರ್ ಅಗಲದ ಕಾಡು ತೆರವಾಗಬೇಕು. ವಾಹನಗಳ ಹೊಗೆ, ಧೂಳು ಕಾಡಿನ ಆಳಕ್ಕೆ ನುಗ್ಗಿ ಪರಿಸರ ಕೆಡಿಸುತ್ತದೆ. ಜಿಲ್ಲೆಯಿಂದ 5ರಸ್ತೆಗಳಿರುವಾಗ 2ರಸ್ತೆಗಳ ಮೇಲೆ ಒತ್ತಡ ಹೇರುವುದು, ಹತ್ತಿರ ಹತ್ತಿರ ಕಾಡಿನ ವಾತಾವರಣ ಕೆಡಿಸುವುದು ನ್ಯಾಯ ಸಮ್ಮತವಲ್ಲ. ರಸ್ತೆಯ ಹೊರತಾಗಿ ಕೊಂಕಣ ರೇಲ್ವೆ ಇದೆ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಹುಬ್ಬಳ್ಳಿ-ಅಂಕೋಲಾ ರೈಲಿಗೆ ಹಸಿರು ನಿಶಾನೆ ತೋರಿದ್ದರು. ಲಘಟಗಿ ತನಕ ಹಳಿಹಾಸಿ ಆಗಿದೆ. ಅವರ ಕನಸಿನ ಯೋಜನೆಯೆಂದು ದೇವಿಮನೆ ಘಟ್ಟಕ್ಕೆ ಕೈ ಹಚ್ಚುವ ಬದಲು ರೈಲಿನ ಕುರಿತು ಚಿಂತಿಸಲಿ. ಬೇಕು ಬೇಡಗಳ ಚರ್ಚೆಯ ನಂತರ ಏಕಾಭಿಪ್ರಾಯ ಮೂಡಿದರೆ ಯಾರೂ ಮುಂದುವರಿಯಲಾರರು. ಭಿನ್ನಾಭಿಪ್ರಾಯಗಳೇ ವಿಜೃಂಭಿಸಿದರೆ ದೇವಿಮನೆ ಘಟ್ಟದ ಕಾಮಗಾರಿ ಆರಂಭವಾಗುತ್ತದೆ ಅಷ್ಟೇ…
ಜೀಯು, ಹೊನ್ನಾವರ