ಹೊನ್ನಾಳಿ: ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಮಹತ್ತರವಾದುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
18.22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯತ್ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂಪರ್ಕ ಸೇತುವಿ ನಂತೆ ಗ್ರಾಪಂಗಳು ಕಾರ್ಯ ನಿರ್ವಹಿಸಬೇಕು. ಸಂಕಷ್ಟ ಸಮಯದಲ್ಲಿ ಗ್ರಾಮೀಣ ಪ್ರದೇಶಗಳ ಜನತೆಯ ನೆರವಿಗೆ ಗ್ರಾಪಂಗಳು ನಿಲ್ಲಬೇಕು. ಇದಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಅರಸಿ ಪಟ್ಟಣ-ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.
ಜಿಪಂ ಅಧ್ಯಕ್ಷೆ ದೀಪಾ ಜಗದೀಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ನೈರ್ಮಲ್ಯ ಕಾಪಾಡಲು ಗ್ರಾಮಾಡಳಿತದೊಂದಿಗೆ ಎಲ್ಲರೂ ಸಹಕರಿಸಬೇಕು. ಶೌಚಾಲಯಗಳನ್ನು ನಿರ್ಮಿಸಿಕೊಂಡು ತಪ್ಪದೇ ಬಳಸಬೇಕು. ಇದೀಗ ಮಾರಣಾಂತಿಕ ಕೋವಿಡ್ ತೀವ್ರ ಗತಿಯಲ್ಲಿ ಹರಡುತ್ತಿರುವ ಕಾರಣಕ್ಕೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು ಎಂದರು.
ತಿಮ್ಲಾಪುರ ಗ್ರಾಪಂ ಅಧ್ಯಕ್ಷ ನೇರಲಗುಂಡಿ ಬಿ.ಸಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಪ್ರಭಾರಿ ಅಧ್ಯಕ್ಷ ಕೆ.ಎಲ್. ರಂಗನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ತಿಪ್ಪೇಶಪ್ಪ, ಸದಸ್ಯೆ ಅಮೃತಬಾಯಿ, ಬಿಜೆಪಿ ಮುಖಂಡರಾದ ಯಕ್ಕನಹಳ್ಳಿ ಟಿ.ಎಸ್. ಜಗದೀಶ್, ತಿಮ್ಲಾಪುರ ಗ್ರಾಪಂ ಉಪಾಧ್ಯಕ್ಷ ಕೆ.ಪಿ. ಮಧು ಪ್ರಭಾಕರ್, ಸದಸ್ಯರಾದ ಜಿ.ಬಿ. ಪ್ರಭು, ವನಮಾಲಮ್ಮ ಗುರುವಪ್ಪ, ಎಲ್. ಲಕ್ಷ್ಮಣ ನಾಯ್ಕ, ಲಲಿತಾಬಾಯಿ ಮಂಜಾ ನಾಯ್ಕ, ಕರಿಬಸಮ್ಮ ಯಲ್ಲಪ್ಪ, ಸೈಯ್ಯದ್ ಮುನೀರ್ ಸಾಬ್, ಜಾವೀದ್ ಮುಷರ್ರಫ್, ಎಚ್.ಜಿ. ರುದ್ರೇಶ್, ಲಕ್ಷ್ಮೀಬಾಯಿ ದೂದ್ಯಾ ನಾಯ್ಕ, ರತ್ನಮ್ಮ ಸುರೇಶ್, ಕೆ. ಶೀಲಾ ಹಾಲೇಶಪ್ಪ, ಎ.ಕೆ. ರಾಜಪ್ಪ, ಬಿ. ಕೆಂಚಪ್ಪ ಉಪಸ್ಥಿತರಿದ್ದರು.