Advertisement

ಮೂರು ವರ್ಷದಲ್ಲಿ ರಾಜ್ಯದ ಅಭಿವೃದಿ

11:28 AM Mar 07, 2020 | Naveen |

ಹೊನ್ನಾಳಿ: ವಿಪಕ್ಷದವರು ಏನೇ ಟೀಕೆ ಮಾಡಲಿ, ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪನವರು ಉತ್ತಮ ಹಾಗೂ ವಸ್ತುಸ್ಥಿತಿ ಬಜೆಟ್‌ ಮಂಡನೆ ಮಾಡಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಹೇಳಿದರು.

Advertisement

ಲಿಂ| ಒಡೆಯರ್‌ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಲಿಂ| ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಪುಣ್ಯಸ್ಮರಣೆ ಅಂಗವಾಗಿ ಶುಕ್ರವಾರ ಚಂದ್ರಸ್ಮರಣೆ ಕೃಷಿಮೇಳ-2020 ಕಾರ್ಯಕ್ರಮದನ್ವಯ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಮೂರು ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತೇವೆ. ಸದಾ ಚಟುವಟಿಕೆಯಿಂದ ಕೆಲಸ ಮಾಡುವ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಅಭಿವೃದ್ಧಿಪರ ಚಿಂತನೆ ಮಾಡುವ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ತೋಟಗಾರಿಕೆ ಸಚಿವ ನಾರಾಯಣಗೌಡ ಮಾತನಾಡಿ, ರೈತರ ಹಿತ ಕಾಪಾಡುವ ಕೃಷಿಮೇಳದೊಂದಿಗೆ ದೇಹದ ಆರೋಗ್ಯ ಕಾಪಾಡುವ ಯೋಗ ಕಾರ್ಯಕ್ರಮ ಹಮ್ಮಿಕೊಂಡು ಯೋಗ ಗುರು ಬಾಬಾ ರಾಮ್‌ದೇವ್‌ ಅವರನ್ನು ಕರೆಯಿಸಿ ಜನರಿಗೆ ಯೋಗದ ಬಗ್ಗೆ ಮಾಹಿತಿ ನೀಡಿರುವುದು ಬಹು ದೊಡ್ಡ ಕಾರ್ಯಕ್ರಮ. ರೈತನಿಗೆ ಶಕ್ತಿ ತುಂಬುವ ಕೆಲಸ ಈ ರಾಜ್ಯಮಟ್ಟದ ಕೃಷಿಮೇಳದಿಂದಾಗಬೇಕು ಎಂದು ನುಡಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರಾಸ್ತಾವಿಕ ಮಾತನಾಡಿ, ಹಿರೇಕಲ್ಮಠ ತನ್ನದೇ ಆದ ಭವ್ಯ ಪರಂಪರೆ, ಇತಿಹಾಸ ಹೊಂದಿದೆ. ನೂರಾರು ಎಕರೆ ಜಮೀನು ಶ್ರೀಮಠಕ್ಕಿದ್ದು, ಗುರುಗಳು ಅತ್ಯಂತ ಕಡಿಮೆ ಅವಧಿಯಲ್ಲಿ ತುಂಗಭದ್ರಾ ನದಿಯಿಂದ ಪೈಪ್‌ಲೈನ್‌ ಮೂಲಕ ಶ್ರೀಮಠದ ಪುಷ್ಕರಣಿಗೆ ನೀರು ಹರಿಸಿದ್ದಾರೆ ಎಂದು ಹೇಳಿದರು.

Advertisement

ರೈತರ ಹಿತ ಕಾಪಾಡಲು ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಲಾಗುವುದು ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ರೈತ ದೇಶದ ಬೆನ್ನೆಲುಬು ಎಂದು ಹೇಳಿದರೆ ಸಾಲದು, ರೈತರ ಹಿತ ಕಾಪಾಡುವಂತಹ ಕೆಲಸ ಅತ್ಯಂತ ಶೀಘ್ರದಲ್ಲಿ ಆಗಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ರೈತರ ಹಿತ ಕಾಪಾಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಹರಿಹರದ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿ, ರಾಜ್ಯದಲ್ಲಿ ಎಲ್ಲರನ್ನು ಒಪ್ಪಿ, ಅಪ್ಪಿಕೊಳ್ಳುವಂತಹ ಮಠ ಇದ್ದರೆ ಅದು ಹಿರೇಕಲ್ಮಠ. ಹಿಂದಿನ ಹಾಗೂ ಈಗಿನ ಗುರುಗಳು ಜಾತಿ ಮೀರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕೆಲ ಮಠಗಳು ಕೇವಲ ತಮ್ಮ ಸಮಾಜದ ಹಿತ ಕಾಪಾಡುವ ಕೆಲಸ ಮಾಡುತ್ತಿವೆ ಎಂದ ಅವರು, ಕೆಲ ಮಠಾಧೀಶರು ರಾಜ್ಯದ ಮುಖ್ಯಮಂತ್ರಿಗಳನ್ನು ಹಿಡಿದಿಟ್ಟುಕೊಳ್ಳಲು ಬೆದರಿಕೆ ಹಾಕುವಂತಹ ಮಟ್ಟಕ್ಕೆ ಹೋಗಿದ್ದಾರೆ ಎಂದು ಯಾರ ಹೆಸರೂ ಹೇಳದೆ ದೂರಿದರು.

ಒಕ್ಕಲುತನ ಮಾಡುವ ವರನಿಗೆ ಹೆಣ್ಣು ಕೊಡದ ಪರಿಸ್ಥಿತಿ ಉಂಟಾಗಿದೆ. ಕೃಷಿಕರು ಎಚ್ಚೆತ್ತುಕೊಂಡು ಸಂಘಟನೆಯಾಗಿ ಕೃಷಿ ದುಡಿಮೆಗಾರನಿಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಸಲಹೆ ನೀಡಿದರು.

ಸರ್ಕಾರಿ ಕೆಲಸ ಯಾವುದೇ ಆಗಿರಲಿ, ಒಬ್ಬ ಕ್ಲಾರ್ಕ್‌ ಆಗಿರಲಿ ಆತನಿಗೆ ತಮ್ಮ ಹೆಣ್ಣುಮಗಳನ್ನು ಕೊಟ್ಟು ಮದುವೆ ಮಾಡುತ್ತೇವೆ ಎಂದು ರೈತರು ಹೇಳುವ ಕಾಲ ಇದಾಗಿದೆ. ಹೀಗಾಗಬಾರದು, ನಾನು ರೈತ ಎಂದು ಹೆಮ್ಮೆಯಿಂದ ಹೇಳಬೇಕು ಎಂದು ಅವರು ಹೇಳಿದರು.

ನಾನು ದಾವಣಗೆರೆ ಜಿಲ್ಲಾಧಿಕಾರಿಯಾಗಿರುವಷ್ಟು ಕಾಲ ಜನರ ಸೇವೆ ಮಾಡಬೇಕೆನ್ನುವುದೇ ನನ್ನ ಗುರಿ ಎಂದು ಹೇಳಿದರು.

ಮಾಜಿ ಶಾಸಕ ಬಿ.ಪಿ. ಹರೀಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಮಾತನಾಡಿದರು. ಶ್ರೀಶೈಲ, ಉಜ್ಜಯನಿ ಹಾಗೂ ಕಾಶಿ ಜಗದ್ಗುರುಗಳು ಸಾನ್ನಿಧ್ಯವಹಿಸಿದ್ದರು. ಹಿರೇಕಲ್ಮಠದ ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next