Advertisement

ನಾಡು ಕಂಡ ಶ್ರೇಷ್ಠ ಕವಿ ಕುವೆಂಪು

04:26 PM Dec 30, 2019 | Naveen |

ಹೊನ್ನಾಳಿ: ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ನ್ಯಾಮತಿ ತಾಲೂಕಿನ ಜೀನಹಳ್ಳಿ ಸರ್ಕಾರಿ ಪ್ರೌಢಶಾಲೆ ಸಂಸ್ಥಾಪಕ ದಿ| ಜೆ.ರಾಮಪ್ಪ ಅವರ ಪುತ್ರ ಷಣ್ಮುಖಪ್ಪ ಹೇಳಿದರು.

Advertisement

ನ್ಯಾಮತಿ ತಾಲೂಕಿನ ಜೀನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಹಾಗೂ ಗುರು ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲೆಗಳು ಉಳಿಯಬೇಕಾದರೆ ಶಿಕ್ಷಕರು, ಪೋಷಕರು ಹಾಗೂ ಇಲಾಖೆ ಸೂಕ್ತವಾಗಿ ಸ್ಪಂದಿಸಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಿದೆ. ಇಲ್ಲದಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಇನ್ನಿಲ್ಲದಂತೆ ಮಾಯವಾಗಬಹುದು ಎಂದು ಎಚ್ಚರಿಸಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಎಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳನ್ನು ಶಾಲೆಯತ್ತ ಆಕರ್ಷಿಸಬೇಕು ಎಂದು ಹೇಳಿದರು.

ಕುವೆಂಪು ಅವರು ನಾಡು ಕಂಡ ಶ್ರೇಷ್ಠ ಕವಿ. ಅವರ ಕೃತಿಗಳನ್ನು ಎಲ್ಲರೂ ಓದಬೇಕು. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದು ಕರೆ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯ ಮಹಾಂತೇಶ್‌ ಮಾತನಾಡಿ, 2010-11ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ರೂ.1.60 ಲಕ್ಷ ವೆಚ್ಚದಲ್ಲಿ ಶಾಲೆಯಲ್ಲಿ ಸಮಾಜ ವಿಜ್ಞಾನ ಪ್ರಯೋಗ ಮಂದಿರ ನಿರ್ಮಾಣ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಗ್ರಾಮದ ಸುತ್ತಮುತ್ತ ಹೆಚ್ಚು ಖಾಸಗಿ ಶಾಲೆಗಳು ಪ್ರಾರಂಭವಾಗಿರುವುದರಿಂದ ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ ಎಂದು ಹೇಳಿದರು.

Advertisement

ಪ್ರೌಢಶಾಲೆಯ 130 ವಿದ್ಯಾರ್ಥಿಗಳ ಪೈಕಿ ಗ್ರಾಮದ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ವಿದ್ಯಾರ್ಥಿನಿಲಯದಿಂದಲೇ 80 ವಿದ್ಯಾರ್ಥಿಗಳು ಬರುತ್ತಿದ್ದು, ವಿದ್ಯಾರ್ಥಿನಿಲಯಗಳಿಲ್ಲದಿದ್ದರೆ ನಮ್ಮ ಶಾಲೆಯ ಸ್ಥಿತಿ ಅಯೋಮಯವಾಗುತ್ತಿತ್ತು ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಜಿ.ಪಿ.ಚನ್ನೇಶಪ್ಪ, ನಿವೃತ್ತ ಶಿಕ್ಷಕ ಶಿವಪ್ಪ, ಮುಖಂಡರಾದ ಈಶ್ವರಪ್ಪ, ಷಣ್ಮುಖಪ್ಪ, ಶಿಕ್ಷಕರಾದ ಎಂ.ಜಿ.ಮುರುಗೇಂದ್ರಯ್ಯ, ವೆಂಕಟೇಶ್‌, ನಾಗರಾಜ್‌ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2010-11 ಸಾಲಿನಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next