Advertisement

ಹೊನ್ನಾಳಿ: ವಿದ್ಯಾದೇಗುಲಗಳಿಗೆ ಬೇಕಿದೆ ಮೂಲ ಸೌಲಭ್ಯ

05:21 PM Jun 03, 2024 | Team Udayavani |

ಉದಯವಾಣಿ ಸಮಾಚಾರ
ಹೊನ್ನಾಳಿ: ಸರ್ಕಾರಿ ಶಾಲೆಗಳಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೂ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಶಾಲೆಗಳು ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿವೆ. ಹೊನ್ನಾಳಿ-ನ್ಯಾಮತಿ ತಾಲೂಕುಗಳ ಶಾಲೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಕೆಲವೆಡೆ ಸರ್ಕಾರಿ ಶಾಲಾ ಕಟ್ಟಡ, ಶೌಚಾಲಯಗಳು ಬೀಳುವ ಸ್ಥಿತಿಯಲ್ಲಿವೆ. ಅನೇಕ ಕಡೆ ಶಾಲಾ ಕಟ್ಟಡಗಳ ಹೆಂಚುಗಳು ಬೀಳುತ್ತಿದ್ದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಹಳೆ ಕಟ್ಟಡಗಳನ್ನು ನೆಲಸಮಗೊಳಿಸದೆ ಹಾಗೆಯೇ ಬಿಟ್ಟಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

Advertisement

ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಮತ್ತು ಬಿಇಒ ಕಚೇರಿಯಿಂದ ಕೇವಲ 1 ಕಿಮೀ ದೂರದಲ್ಲಿರುವ ಹಿರೇಮಠ ಗ್ರಾಮದ ಶ್ರೀ ಚನ್ನೇಶ್ವರ ಸರ್ಕಾರಿ ಪ್ರಾಥಮಿಕ ಶಾಲೆಯ ಒಂದು ಕೊಠಡಿಯ ಹೆಂಚುಗಳು ಬಿದ್ದಿವೆ. ಅಲ್ಲದೆ ಕೊಠಡಿ ಹಿಂಭಾಗದ ಗೋಡೆ ಕುಸಿದು ಕೊಠಡಿ ಬೀಳುವ ಸ್ಥಿತಿಯಲ್ಲಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲಾ ಶಿಕ್ಷಕರು ಈ ಬಗ್ಗೆ ಗಮನ ಹರಿಸಿದಂತೆ ಕಾಣುತ್ತಿಲ್ಲ. ಬಿಇಒ ಕಚೇರಿ ಹತ್ತಿರದಲ್ಲೇ ಇದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂಬುದಕ್ಕೆ ಇದು ಉತ್ತಮ ನಿದರ್ಶನ. ಎರಡು
ತಾಲೂಕುಗಳ ಹಲವಾರು ಶಾಲೆಗಳು ಇದೇ ಪರಿಸ್ಥಿತಿ ಎದುರಿಸುತ್ತಿವೆ.

ಶಾಲಾ ಮಕ್ಕಳ ದಾಖಲಾತಿ ಉತ್ತಮ: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಭರದಿಂದ ಸಾಗಿದ್ದು, ಮಕ್ಕಳ ದಾಖಲಾತಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷವೂ ಮಕ್ಕಳ ದಾಖಲಾತಿ ಉತ್ತಮವಾಗಿದೆ. ಅವಳಿ ತಾಲೂಕುಗಳಲ್ಲಿ ತರಗತಿ 1ರಿಂದ 10ನೇ ತರಗತಿವರೆಗೆ ಮೇ 31ರವರೆಗೆ 32,566 ಮಕ್ಕಳು ದಾಖಲಾಗಿದ್ದಾರೆ, ಕಳೆದ ವರ್ಷ 33,237 ವಿದ್ಯಾರ್ಥಿಗಳು ದಾಖಲಾಗಿದ್ದರು.

ಪ್ರವೇಶಾವಕಾಶಕ್ಕೆ ಇನ್ನೂ ಸಮಯವಿದ್ದು ಕಳೆದ ವರ್ಷದ ದಾಖಲಾತಿ ಸಂಖ್ಯೆ ಮೀರಬಹುದು, ಶೂನ್ಯ ದಾಖಲಾತಿ ಶಾಲೆ ಯಾವುದೂ ಇಲ್ಲ ಎಂದು ಮೇ 31ಕ್ಕೆ ನಿವೃತ್ತಿ ಹೊಂದಿದ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಕ್ಷೇತ್ರ
ಶಿಕ್ಷಣಾಧಿಕಾರಿ ಎಸ್‌.ಸಿ. ನಂಜರಾಜ್‌ ಮಾಹಿತಿ ನೀಡಿದ್ದಾರೆ. ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 11 ಕೊಠಡಿಗಳ ಕೊರತೆ ಇದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 6 ಕೊಠಡಿಗಳು ಮಂಜೂರಾಗಿವೆ. ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಒಂದೆರೆಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ 45 ಹಾಗೂ ಪ್ರೌಢಶಾಲೆಗಳಲ್ಲಿ 20 ಶಿಕ್ಷಕರ ಕೊರತೆ ಇದೆ. ಕೌನ್ಸೆಲಿಂಗ್‌ನಲ್ಲಿ ಮೂಲಕ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುತ್ತದೆ. ಒಂದೊಮ್ಮೆ ಶಿಕ್ಷಕರ ಕೊರತೆ ನೀಗದೇ ಇದ್ದಲ್ಲಿ ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಇಲಾಖೆ ಅವಕಾಶ ಮಾಡಿಕೊಟ್ಟಿದೆ.

Advertisement

■ ಎಂ.ಪಿ.ಎಂ ವಿಜಯಾನಂದಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next