ಹೊನ್ನಾಳಿ: ಕೊರೊನಾ ವೈರಸ್ ಬಗ್ಗೆ ಯಾರೂ ಭಯಪಡುವ ಅವಶ್ಯಕತೆಯಿಲ್ಲ. ಆದರೆ ನಿರ್ಲಕ್ಷé ಮಾಡುವಂತಿಲ್ಲ. ಕೆಮ್ಮು, ಶೀತ, ಜ್ವರ ಬಂದಾಗ ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಬೇಕು ಎಂದು ತಾಲೂಕು ಆರೊಗ್ಯಾಧಿಕಾರಿ ಡಾ| ಕೆಂಚಪ್ಪ ಆರ್.ಬಂತಿ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಪ.ಪಂ ಮತ್ತು ತಾಲೂಕು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಬುಧವಾರ ಪಟ್ಟಣದ 30ಕ್ಕೂ ಹೆಚ್ಚು ಸ್ವಸಹಾಯ ಸ್ತ್ರೀಶಕ್ತಿ ಸಂಘದ ಸದಸ್ಯೆಯರಿಗೆ ಹಮ್ಮಿಕೊಂಡಿದ್ದ ಕೊರೋನಾ ವೈರಸ್ ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಸಾಬೂನಿನಿಂದ ಕೈ ತೊಳೆದು ಅಡುಗೆ ಪ್ರಾರಂಭಿಸಬೇಕು ಎಂದ ಅವರು, ನಿಮ್ಮ ಅಕ್ಕ-ಪಕ್ಕದ ಮನೆಯವರಿಗೂ ಈ ವಿಚಾರವನ್ನು ತಿಳಿಸಬೇಕು ಎಂದು ಹೇಳಿದರು.
ಪ.ಪಂ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಮಾತನಾಡಿ, ವೈರಸ್ ರೋಗದ ಬಗ್ಗೆ ಮುಂಜಾಗ್ರತೆ ಕ್ರಮ ವಹಿಸಲು ಎಲ್ಲಾ ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರು ಸ್ವಚ್ಚತೆ ಮಾಡುತ್ತಿದ್ದಾರೆ. ಸ್ವಸಹಾಯ, ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು ನಿಮ್ಮ ಅಕ್ಕಪಕ್ಕದ ಮನೆಯ ಎಲ್ಲಾ ಸದಸ್ಯರು ಸ್ವಚ್ಚತೆ ಮತ್ತು ಆರೋಗ್ಯದಿಂದರಲು ಸೂಚಿಸಬೇಕು. ನಿಮ್ಮ ಹತ್ತಿರವಿರುವ ಯಾರೇ ಆದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ತಕ್ಷಣ ವೈದ್ಯರ ಬಳಿ ತೋರಿಸಲು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು. ಪ.ಪಂ ಆರೋಗ್ಯ ನಿರೀಕ್ಷಕ ನಾಗೇಶ್, ರಾಜಸ್ವ ನಿರೀಕ್ಷಕ ಬಿ.ರಾಮಚಂದ್ರಪ್ಪ, ಸಿಬ್ಬಂದಿ ಸಹಾಯಕ ಶಿವಪ್ಪ ಇದ್ದರು.