ಅಲ್ ಅಮಿರಾತ್: ಏಷ್ಯಾ ಕಪ್ ಕೂಟದ 6ನೇ ತಂಡವಾಗಿ ಹಾಂಕಾಂಗ್ ಅರ್ಹತೆ ಗಳಿಸಿತು. ಅರ್ಹತಾ ಸುತ್ತಿನ ಅಂತಿಮ ಲೀಗ್ ಪಂದ್ಯದಲ್ಲಿ ಯುಎಇಯನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಹಾಂಕಾಂಗ್ ಈ ಅವಕಾಶವನ್ನು ತನ್ನದಾಗಿಸಿಕೊಂಡಿತು.
ಅರ್ಹತೆ ಸಂಪಾದಿಸಬೇಕಾದರೆ ಹಾಂಕಾಂಗ್ 3ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಜಯ ಸಾಧಿಸಲೇಬೇಕಿತ್ತು. ಇಲ್ಲವಾದರೆ 2 ಪಂದ್ಯಗಳನ್ನು ಗೆದ್ದು ರನ್‌ರೇಟ್‌ನಲ್ಲಿ ಮುಂದಿದ್ದ ಕುವೈಟ್ ಅರ್ಹತೆ ಗಳಿಸುತ್ತಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಯುಎಇ 19.3 ಓವರ್‌ಗಳಲ್ಲಿ 147ಕ್ಕೆ ಆಲೌಟ್ ಆಯಿತು. ಹಾಂಕಾಂಗ್ ಇದನ್ನು ಎರಡೇ ವಿಕೆಟ್ ನಷ್ಟದಲ್ಲಿ ಬೆನ್ನಟ್ಟಿತು. 19 ಓವರ್‌ಗಳಲ್ಲಿ 149 ರನ್ ಬಾರಿಸಿತು. ಮೂರೂ ಪಂದ್ಯಗಳನ್ನು ಗೆದ್ದ ಹಾಂಕಾಂಗ್ 6 ಅಂಕಗಳೊಂದಿಗೆ ಅಗ್ರಸ್ಥಾನಿಯಾಯಿತು.
ಚೇಸಿಂಗ್ ವೇಳೆ ಆರಂಭಿಕರಾದ ಯಾಸಿಮ್ ಮುರ್ತಝ 58, ನಾಯಕ ನಿಝಕತ್ ಖಾನ್ 39, ಬಾಬರ್ ಹಯಾತ್ ಔಟಾಗದೆ 38 ರನ್ ಹೊಡೆದರು. ಹಾಂಕಾಂಗ್‌ನ ಬೌಲಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ಎಹಸಾನ್ ಖಾನ್ (24ಕ್ಕೆ 4), ಆಯುಷ್ ಶುಕ್ಲಾ (30ಕ್ಕೆ 3) ಮತ್ತು ಐಜಾಜ್ ಖಾನ್ (8ಕ್ಕೆ 2). ಯುಎಇ ಪರ ನಾಯಕ ಸಿ. ರಿಜ್ವಾನ್ ಸರ್ವಾಧಿಕ 49, ಝವಾರ್ ಫರೀದ್ 41 ರನ್ ಹೊಡೆದರು.
ಅರ್ಹತಾ ಸುತ್ತಿನಲ್ಲಿ ಒಟ್ಟು 4 ತಂಡಗಳು ಪಾಲ್ಗೊಂಡಿದ್ದವು. ಉಳಿದ 3 ತಂಡಗಳೆಂದರೆ ಕುವೈಟ್ (4 ಅಂಕ), ಯುಎಇ (2 ಅಂಕ) ಮತ್ತು ಸಿಂಗಾಪುರ್ (ಯಾವುದೇ ಅಂಕವಿಲ್ಲ).