Advertisement

ಪ್ರಾಮಾಣಿಕವಾಗಿ ಜವಾಬ್ದಾರಿ ನಿಭಾಯಿಸಿ

12:00 PM Jul 01, 2018 | Team Udayavani |

ಬೀದರ: ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಆಯಾ ಇಲಾಖೆಗಳ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಶಾಸಕ ರಹೀಂಖಾನ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರಿಗಳು ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಪ್ರಾಮಾಣಿಕತೆ ತೋರಬೇಕು. ಆಗ ಮಾತ್ರ ಯೋಜನೆಗಳ ಪ್ರಯೋಜನ ಜನಸಾಮಾನ್ಯರಿಗೆ  ಲಭ್ಯವಾಗುತ್ತದೆ. ಕೆಲಸ ನಿರ್ವಹಣೆ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ ಎಂದ ಅವರು, ಕರ್ತವ್ಯ ಲೋಪ ಮಾಡುವುದು ಕಂಡುಬಂದಲ್ಲಿ ಶಿಸ್ತು ಕ್ರಮಕ್ಕೆ ಸೂಚಿಸಲಾಗುವುದು ಎಂದು ಎಚ್ಚರಿಸಿದರು. 

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 143 ಪ್ರೌಢಶಾಲೆಗಳಿದ್ದು, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ. 61.97 ಫಲಿತಾಂಶ ಬಂದಿದೆ. ಈ ವರ್ಷದಲ್ಲಿ ಕೂಡ ಶೈಕ್ಷಣಿಕ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ವಿಶೇಷ ತರಬೇತಿ ನಡೆಸಲಾಗುತ್ತಿದೆ ಎಂದು ಶೈಕ್ಷಣಿಕ ಕಾರ್ಯಾಗಾರ ನಡೆಸಿ ಪರಿಶೀಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಕುರಿತು ಶಾಸಕ ತಹೀಂ ಖಾನ್‌ ಮಾತನಾಡಿ, ಅಧಿಕಾರಿ ಕೇವಲ ಕಚೇರಿಯಲ್ಲಿ ಕುಳಿತುಕೊಳ್ಳದೇ ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಮಸ್ಯೆ ಇರುವ ಶಾಲೆಗಳನ್ನು ಗುರುತಿಸಿ ಪರಿಹಾರ ಕ್ರಮಗಳು ಕೈಗೊಳ್ಳಬೇಕು ಎಂದರು. ಅಲ್ಪಸಂಖ್ಯಾತರ ಶಾಲೆಗಳಿಗೆ ಯಾಕೆ ಇನ್ನೂ ಕೂಡ ಪಠ್ಯಪುಸ್ತಕ ವಿತರಣೆ ಆಗಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು, ಇನ್ನೂ ಪುಸ್ತಕಗಳು ಬರಬೇಕಾಗಿದೆ ಎಂದ ಮಾಹಿತಿ ನೀಡಿದರು.

ಆಹಾರ ಸುರಕ್ಷತಾ ಅಧಿಕಾರಿ ಮಾತನಾಡಿ, ತಾಲೂಕಿನಲ್ಲಿ ಈ ವರೆಗೆ ಡೆಂಘೀ ಪ್ರಕರಣಗಳು ಪತ್ತೆಯಾಗಿಲ್ಲ. 10 ಶಿಶುಮರಣ, 2 ತಾಯಿ ಮರಣ ಪ್ರಕರಣಗಳು ದಾಖಲಾಗಿವೆ. 26 ಹಾವು ಕಡಿತ ಪ್ರಕರಣಗಳು ದಾಖಲಾಗಿವೆ. ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ 26 ಪ್ರಕರಣಗಳನ್ನು ದಾಖಲಿಸಿದ್ದು, 2.66 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಕಳಪೆ ನೀರಿನ ಬಾಟಲ್‌ಗ‌ಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ, ತಾಲೂಕಿನ ಅಂಗನವಾಡಿಗಳಲ್ಲಿ 21,787 ಫಲಾನುಭವಿಗಳು ವಿವಿಧ ಯೋಜನೆಗಳಡಿ ಸೌಕರ್ಯ ಪಡೆಯುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ ಕೊಡಲಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ನಿಯಮದಂತೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.

Advertisement

ಬೀದರ ತಾಲೂಕಿನಲ್ಲಿ ಮಾತೃಪೂರ್ಣ ಯೋಜನೆಯ ಪ್ರಗತಿ ಶೇ.68ರಷ್ಟಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಬೀದರ ತಾಲೂಕು ವ್ಯಾಪ್ತಿಯ ಶಾಲೆಗಳಲ್ಲಿ ಪಠ್ಯಪುಸ್ತಕ ವಿತರಣೆ, ಆಸ್ಪತ್ರೆಗಳ ಸ್ಥಿತಿಗತಿ, ವಸತಿ ನಿಲಯದ ಪ್ರವೇಶಾತಿ ಪ್ರಕ್ರಿಯೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದ ಮಾಹಿತಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next