ಕಟಪಾಡಿ: ವಾರದ ಹಿಂದೆ ಕಂಡು ಬಂದಂತಹ ನದಿ ಪ್ರವಾಹಕ್ಕೆ ಬೆಳೆ ಕಳೆದುಕೊಂಡು ತತ್ತರಿಸಿದ ಮಟ್ಟುಗುಳ್ಳ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮೂಲಕ ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕನಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.
ಅವರು ಸೆ.29ರಂದು ಕೋಟೆ ಗ್ರಾ.ಪಂ. ವ್ಯಾಪ್ತಿಯ ಮಟ್ಟುವಿನಲ್ಲಿರುವ ಪ್ರಾಪಂಚಿಕವಾಗಿ ಗುರುತಿಸಲ್ಪಟ್ಟ ಜಿ.ಐ. ಮಾನ್ಯತೆಯನ್ನು ಹೊಂದಿರುವ ಮಟ್ಟುಗುಳ್ಳದ ಬೆಳೆಗಾರರ ಬೆಳೆ ಹಾನಿಯನ್ನು ರೈತ ಕ್ಷೇತ್ರಕ್ಕಿಳಿದು ಪರಿಶೀಲಿಸಿ, ಬೆಳೆಗಾರರ ಮನವಿಯನ್ನು ಸ್ವೀಕರಿಸಿ ಬೆಳೆಗಾರರಿಗೆ ಸೂಕ್ತ ಪರಿಹಾರದ ಭರವಸೆ ನೀಡಿ ಮಾತನಾಡಿದರು
ಈ ಭಾಗದಲ್ಲಿ ಪ್ರಮುಖ ನದಿಗಳು ಹರಿಯುತ್ತಿದ್ದು, ಈಗಾಗಲೇ ಮಳೆ ಪ್ರವಾಹದಿಂದಾದ ಆದ ಹಾನಿಯ ಬಗ್ಗೆ ಪರಿಶೀಲಿಸಲಾಗಿದೆ. ನವರಾತ್ರಿಗೆ ಮಟ್ಟುಗುಳ್ಳ ಫಸಲು ಮಾರುಕಟ್ಟೆ ಪ್ರವೇಶಿಸಲು ಸಿದ್ಧಗೊಳ್ಳುತ್ತಿದ್ದು, ಬೆಳೆ ಹಾನಿಯಿಂದ ನಷ್ಟ ಸಂಭವಿಸಿದ್ದು, ಈ ಬಗ್ಗೆ ಆದಷ್ಟು ಬೇಗನೇ ಸಮಗ್ರ ವರದಿಯನ್ನು ಆಧರಿಸಿ ಸಂತ ಶ್ರೇಷ್ಠ ವಾದಿರಾಜ ಸ್ವಾಮೀಜಿಯವರ ವರಪ್ರಸಾದವಾದ ಇತಿಹಾಸ ಪ್ರಸಿದ್ಧ ಮಟ್ಟುಗುಳ್ಳ ಬೆಳೆ ಹಾನಿಗೂ ಹೆಚ್ಚಿನ ಮೊತ್ತದ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದರು.
ಬಳಿಕ ಕೋಟೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪಕ್ಕೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಭಾಗಶಃ ಹಾಗೂ ಪೂರ್ತಿಯಾಗಿ ಹಾನಿಗೀಡಾದ ಮನೆಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಈಗಾಗಲೇ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದ್ದು. ರಾಜ್ಯ ಸರಕಾರದಿಂದ ಕೊಡಮಾಡುವ ಪರಿಹಾರ ಮೊತ್ತವನ್ನು ಆದಷ್ಟು ಶೀಘ್ರದಲ್ಲಿ ನೀಡುವುದಾಗಿ ನೊಂದ ಕುಟುಂಬಸ್ಥರಿಗೆ ಶಾಸಕ ಲಾಲಾಜಿ ಮೆಂಡನ್ ಭರವಸೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಕೋಟೆ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷ, ನ್ಯಾಯವಾದಿ ಗಣೇಶ್ ಕುಮಾರ್ ಮಟ್ಟು, ನಿಕಟಪೂರ್ವ ಗ್ರಾ.ಪಂ. ಸದಸ್ಯ ರತ್ನಾಕರ ಕೋಟ್ಯಾನ್, ಕಾಪು ಬಿಜೆಪಿ ಪ್ರ|ಕಾರ್ಯದರ್ಶಿ ಗೋಪಾಲ ಕೃಷ್ಣ ರಾವ್ ಮಟ್ಟು, ಕುರ್ಕಾಲ್ ಮಹಾಶಕ್ತಿಕೇಂದ್ರದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕುರ್ಕಾಲು, ಪಕ್ಷದ ಪ್ರಮುಖರಾದ ನಾಗರಾಜ್ ಮೆಂಡನ್, ಹರ್ಷಿತ್ ಸನಿಲ್, ಯೋಗೀಶ್ ಕುಮಾರ್, ಸಂತೋಷ ಮೆಂಡನ್, ಉತ್ತಮ್ ಕೋಟ್ಯಾನ್, ಅಶೋಕ್, ಮಟ್ಟುಗುಳ್ಳ ಬೆಳೆಗಾರರಾದ ಜಯೇಂದ್ರ, ಹರೀಶ್ ಮಟ್ಟು, ಸಾಧು, ಜಯಕರ್, ಜಗದೀಶ್, ಶಾರದಾ, ಪ್ರದೀಪ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು