Advertisement

ಜನರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ: ದಿನೇಶ್‌ ಹೆಗ್ಡೆ

05:22 PM May 06, 2023 | Team Udayavani |

ಕುಂದಾಪುರ: ವಾರಾಹಿ ನೀರಾವರಿ ಯೋಜನೆಯ ಮೂಲ ಯೋಜನೆಯ 15,000 ಹೆಕ್ಟೇರ್‌ ಕೃಷಿ ಭೂಮಿಗೆ ನೀರು ಒದಗಿಸುವ ಪ್ರಯತ್ನ ಮಾಡಲಾಗುವುದು. ಸಿಆರ್‌ಝಡ್‌ ನಿಯಮದಲ್ಲಿ ಸಡಿಲೀಕರಣ ಮಾಡಲಾಗುವುದು. ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ಮಾಡಿ ಜನರ ಅಹವಾಲು ಆಲಿಸಲಾಗುವುದು. ಡೀಮ್ಡ್ ಅರಣ್ಯ ಸಮಸ್ಯೆಯ ಪರಿಹಾರದ ಬಗ್ಗೆ ಪ್ರಯತ್ನ , ಅಕ್ರಮ ಸಕ್ರಮ ಬಾಕಿ ಇರುವ ಅರ್ಜಿಗಳ ಶೀಘ್ರ ವಿಲೇವಾರಿ ಹಾಗೂ ಹಕ್ಕುಪತ್ರ ವಿತರಣೆ, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಂಸ್ಥೆಗಳನ್ನು ಕ್ಷೇತ್ರಕ್ಕೆ ತರುವ ಪ್ರಯತ್ನ ಮಾಡುವುದಾಗಿ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಹೆಗ್ಡೆ ಮೊಳಹಳ್ಳಿ ಹೇಳಿದರು.

Advertisement

ಅವರು ತೆಕ್ಕಟ್ಟೆಯ ಕೊಮೆಯಲ್ಲಿ ಮೇ 4ರಂದು ನಡೆದ ಬಹಿರಂಗ ಕಾಂಗ್ರೆಸ್‌ ಚುನಾವಣ ಪ್ರಚಾರದಲ್ಲಿ ಮಾತನಾಡಿದರು.

ಮೀನುಗಾರರಿಗೆ ಆದ್ಯತೆ
ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಉದ್ಯೋಗ ಮೇಳ. ಸರಕಾರಿ ವೈದ್ಯಕೀಯ ಹಾಗೂ ತಾಂತ್ರಿಕ ಕಾಲೇಜು ಮಂಜೂರಾತಿಗೆ ಪ್ರಯತ್ನ. ಅಕ್ರಮ ಸಕ್ರಮ, ಭೂ ನ್ಯಾಯ ಮಂಡಳಿ, ಆಶ್ರಯ, ಆರಾಧನ ಇತರೆ ಎಲ್ಲಾ ಸಮಿತಿಗಳ ಶೀಘ್ರ ರಚನೆ ಹಾಗೂ ಸಮಯಕ್ಕೆ ಸರಿಯಾಗಿ ಸಭೆ ನಡೆಸಲಾಗುವುದು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಜತೆಗೆ ಮೀನುಗಾರಿಕೆ ರಸ್ತೆಗಳ, ಕಿರು ಬಂದರುಗಳ ಅಭಿವೃದ್ಧಿಗೆ ಅನುದಾನ, ಸಮಯಕ್ಕೆ ಸರಿಯಾಗಿ, ಬೇಡಿಕೆಗೆ ಅನುಗುಣವಾಗಿ ಸಬ್ಸಿಡಿ ಸೀಮೆಎಣ್ಣೆ ಹಾಗೂ ಡೀಸೆಲ್‌ ಪೂರೈಕೆಗೆ ಯತ್ನಿಸಲಾಗುವುದು. ಮೂರ್ತೆದಾರರ ಬೇಡಿಕೆ ಹಾಗೂ ಸಮಸ್ಯೆಗಳ ಪರಿಹಾರ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮಳಿಗೆ ಸ್ಥಾಪನೆ ಹಾಗೂ ಬೆಂಬಲ ಬೆಲೆ ಸಮಯಕ್ಕೆ ಸರಿಯಾಗಿ ನೀಡಲು ಸರಕಾರಕ್ಕೆ ಒತ್ತಡ ತರಲಾಗುವುದು ಎಂದರು.

ಗ್ರಾಮಾಂತರಕ್ಕೆ ಸೌಲಭ್ಯ
ಬಹುಗ್ರಾಮ ಕುಡಿಯುವ ನೀರಿಗೆ ಆದ್ಯತೆ ಆದರೆ ನೀರಿನ ಮೂಲಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಶೂನ್ಯ ಶಿಕ್ಷಕರಿರುವ ಸರಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ ಮಾಡಲಾಗುವುದು. ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮ ಹಾಗೂ ಹೆಚ್ಚಿನ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವ ಕಡೆ ಆದ್ಯತೆಗೆ ಅನುಗುಣವಾಗಿ ರಸ್ತೆ, ಸೇತುವೆ, ಕಿಂಡಿ ಅಣೆಕಟ್ಟುಗಳ ನಿರ್ಮಾಣ ಹಾಗೂ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಲಾಗುವುದು ಎಂದರು.

ಅಪಾರ ಬೆಂಬಲ
ಜಿಲ್ಲಾ ಕಾಂಗ್ರೆಸ್‌ ವಕ್ತಾರ ವಿಕಾಸ್‌ ಹೆಗ್ಡೆ ಕೆ., ಇಲ್ಲಿ ಸೇರಿದ 2,000 ಕ್ಕೂ ಮೀರಿದ ಜನಸ್ತೋಮ, ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಇರೋದು ಕಾರ್ಯಕ್ರಮದ ವಿಶೇಷ. ಮಹಿಳಾ ಮತದಾರರು ದಿನೇಶ್‌ ಹೆಗ್ಡೆ ಅವರ ಪರವಾಗಿರುವುದು ಸ್ಪಷ್ಟ. ಕುಂದಾಪುರ ಕ್ಷೇತ್ರದಾದ್ಯಂತ ಬೂತ್‌ ಮಟ್ಟದಲ್ಲಿ ಮನೆ ಮನೆಗೆ ಗುಂಪು ಗುಂಪಾಗಿ ಹೋಗಿ ಅತ್ಯುತ್ಸಾಹದಿಂದ ಕಾಂಗ್ರೆಸ್‌ ಅಭ್ಯರ್ಥಿ ಮೊಳಹಳ್ಳಿ ದಿನೇಶ್‌ ಹೆಗ್ಡೆಯವರ ಪರ ಪ್ರಚಾರ ನಡೆಸುತ್ತಿರುವ ಸಾವಿರಾರು ಕಾಂಗ್ರೆಸ್‌ ಪಕ್ಷದ ನಿಸ್ವಾರ್ಥ ಕಾರ್ಯಕರ್ತರು ಗೆಲುವಿಗೆ ಕಾರಣರಾಗಲಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಯಕ್ರಮ ಮನೆ ಮನೆಗೆ ತಲುಪುತ್ತಿದೆ ಎಂದರು.

Advertisement

ಅಂತರ ಹೆಚ್ಚು
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ, ದಿನೇ ದಿನೇ ಇವರ ಸಂಖ್ಯಾಬಲ ಹೆಚ್ಚುತ್ತಿರುವುದು ಹಾಗೂ ಪ್ರತಿಯೊಂದು ಬೂತ್‌ ನಲ್ಲಿಯೂ ಕೂಡ ಸಿಗುತ್ತಿರುವ ಧನಾತ್ಮಕ ಪ್ರತಿಕ್ರೀಯೆ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಹೆಗ್ಡೆ ಮೊಳಹಳ್ಳಿಯವರ ಗೆಲುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಲಿದೆ ಎನ್ನುವುದನ್ನು ತೋರಿಸುತ್ತಿದೆ. ಮೇ 13ರಂದು ಕುಂದಾಪುರದಲ್ಲಿ 24 ವರ್ಷಗಳ ನಂತರ ಮತ್ತೆ ಕಾಂಗ್ರೆಸ್‌ ಬಾವುಟ ಹಾರಿಸುವುದರೊಂದಿಗೆ ಇತಿಹಾಸ ಸೃಷ್ಟಿಸ‌ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next