Advertisement

‘ಗೃಹ ಬಳಕೆ ನೀರಿನ ದರ ಪರಿಷ್ಕರಣೆ; ತಿಂಗಳೊಳಗೆ ಜಾರಿ’

11:56 AM Jun 01, 2022 | Team Udayavani |

ಲಾಲ್‌ಬಾಗ್‌: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೃಹ ಬಳಕೆ ಕುಡಿಯುವ ನೀರಿನ ಪ್ರಮಾಣವನ್ನು ಗರಿಷ್ಠ 10 ಸಾವಿರ ಲೀ.ನಿಂದ 20 ಸಾವಿರ ಲೀ.ಗೆ ಏರಿಕೆ ಮಾಡುವುದು ಹಾಗೂ ದರವನ್ನು ಲೀ.ಗೆ 6 ರೂ.ನಿಂದ 5 ರೂ.ಗೆ ಇಳಿಕೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಈ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿ ತಿಂಗಳೊಳಗೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ತಿಳಿಸಿದರು.

Advertisement

ಮಂಗಳವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹೊಸದಾಗಿ ನಿಗದಿಪಡಿಸುವ ದರದಂತೆ 20 ಸಾವಿರ ಲೀ. ನೀರು ಬಳಕೆ ಮಾಡಿದರೆ ಈ ಹಿಂದೆ 140 ರೂ. ಶುಲ್ಕವಿದ್ದರೆ, ಮುಂದೆ 100ರೂ. ಆಗಲಿದೆ. ಪ್ರತೀ 25 ಸಾವಿರ ಲೀ.ಗೆ ಹಾಲಿ 185 ರೂ. ಇದ್ದರೆ ಮುಂದೆ 155 ರೂ.ಗೆ ದೊರೆಯಲಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಸದಸ್ಯ ಅಬ್ದುಲ್‌ ರವೂಫ್‌ ಅವರು ‘ನೀರಿನ ದರ ಪರಿಷ್ಕರಣೆ ಮಾಡುವ ಬಗ್ಗೆ ಸುದೀರ್ಘ‌ ಸಮಯದಿಂದ ತಿಳಿಸಿದರೂ ಕೂಡ ಮಾತು ಈಡೇರಿಲ್ಲ. ನಮ್ಮ ಕಾಲದಲ್ಲಿ ಗರಿಷ್ಠ 24 ಸಾವಿರ ಲೀ. ನೀರು ಇರುವುದನ್ನು ಈಗ 8 ಸಾವಿರ ಲೀ.ಗೆ ಇಳಿಕೆ ಮಾಡಿದ್ದೀರಿ’ ಎಂದರು. ಪ್ರವೀಣ್‌ಚಂದ್ರ ಆಳ್ವ ಮಾತನಾಡಿ, ನೀರಿನ ದರ ಪರಿಷ್ಕರಣೆ ಮಾಡುವ ಬಗ್ಗೆ ಪಾಲಿಕೆಯು ಸರಕಾರಕ್ಕೆ ಪತ್ರ ಬರೆದಿದೆ ಎಂದು ಹೇಳಿ ವರ್ಷ ಎರಡಾದರೂ ಇನ್ನೂ ಏನೂ ಆಗಿಲ್ಲ. ಜನರಿಗೆ ಮೋಸ ಮಾಡುವುದು ಯಾಕೆ? ಎಂದರು.

 ಖಾತಾ-ಒಟಿಪಿ ಬದಲು ಬಯೋಮೆಟ್ರಿಕ್‌

ಮಾಜಿ ಮೇಯರ್‌ ಎಂ.ಶಶಿಧರ ಹೆಗ್ಡೆ ಮಾತನಾಡಿ, ನಗರದಲ್ಲಿ ಗೈಲ್‌ ಗ್ಯಾಸ್‌ ಯೋಜನೆಗಾಗಿ ಅಲ್ಲಲ್ಲಿ ರಸ್ತೆಯನ್ನು ಅಗೆಯುತ್ತಿದ್ದಾರೆ. ಆದರೆ ಅದೇ ಸ್ಥಳವನ್ನು ರೀಫಿಲ್ಲಿಂಗ್‌ ಮಾಡುತ್ತಿಲ್ಲ. ಹೀಗಾಗಿ ಮಂಗಳೂರಿನ ವಿವಿಧ ಕಡೆ ಸಮಸ್ಯೆ ಆಗುತ್ತಿದೆ. ಜತೆಗೆ ಇ-ಖಾತಾ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಸಾಪ್ಟ್ವೇರ್‌ ಸಮಸ್ಯೆಯ ಜತೆಗೆ 5-6 ಮಂದಿಗೆ ಒಟಿಪಿ ಕಳುಹಿಸುವ ನಿಯಮದಿಂದ ಜನರು ಹೈರಾಣಾಗಿದ್ದಾರೆ ಎಂದರು. ಮಾಜಿ ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ಕದ್ರಿ ಮತ್ತು ಸುರತ್ಕಲ್‌ ವಲಯ ಕಚೇರಿಗಳಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದರು. ಸದಸ್ಯ ರಾಧಾಕೃಷ್ಣ ಅವರು ಮಾತನಾಡಿ, ಕದ್ರಿ ವಲಯ ಸಹಿತ ಪಾಲಿಕೆ ಭಾಗದಲ್ಲಿ ಸಾಮಾನ್ಯ ಜನರು ಇ ಖಾತಾ ಪಡೆಯಲು ಪರದಾಡುತ್ತಿದ್ದಾರೆ. ಅರ್ಜಿದಾರರು ಅಲೆದು ಸುಸ್ತಾಗುತ್ತಿದ್ದಾರೆ. ಕೆಲವರಿಗೆ ಮಾತ್ರ ಖಾತಾ ತತ್‌ ಕ್ಷಣ ನೀಡಲಾಗುತ್ತಿದೆ ಎಂದರು. ಆಯುಕ್ತರಾದ ಅಕ್ಷಯ್‌ ಶ್ರೀಧರ್‌ ಮಾತನಾಡಿ, ಇ ಖಾತಾ ನೀಡುವಲ್ಲಿ ಯಾವುದೇ ಲೋಪ ಆಗಬಾರದು. ಸರತಿ ಸಾಲು ಜಂಪ್‌ ಮಾಡಬಾರದು. ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಇ ಖಾತೆಗೆ ಒಟಿಪಿ ಬದಲು ಬಯೋಮೆಟ್ರಿಕ್‌ ವ್ಯವಸ್ಥೆ ಅನುಷ್ಠಾನಿಸಲಾಗುವುದು ಎಂದರು. ನವೀನ್‌ ಡಿ’ಸೋಜಾ ಮಾತನಾಡಿ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನಗರದ ವಿವಿಧ ಕಡೆ ಸಮಸ್ಯೆ ಆಗುತ್ತಿದೆ. ಅಧಿಕಾರಿಗಳು ಬದ್ಧತೆ ಪ್ರದರ್ಶಿಸಲಿ ಎಂದರು.

Advertisement

ಸಾಮಾನ್ಯ ಸಭೆ ನಡೆಸಬಹುದೇ? –ಬಿಸಿ ಬಿಸಿ ಚರ್ಚೆ!

ಪಾಲಿಕೆ ಸಾಮಾನ್ಯ ಸಭೆ ನಡೆಸಲು ಅವಕಾಶ ಇದೆಯೇ? ಎಂಬ ವಿಚಾರ ಮೇಯರ್‌ ಹಾಗೂ ಕಾಂಗ್ರೆಸ್‌ನ ಎ.ಸಿ. ವಿನಯ್‌ರಾಜ್‌ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ಮೇಯರ್‌ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ, ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರವಿರುವ ಕಾರಣದಿಂದ ಹೊಸ ಮೇಯರ್‌ ಆಯ್ಕೆ ನಡೆಯಲಿಲ್ಲ. ಆದರೆ ನಿಯಮಾವಳಿ ಪ್ರಕಾರ ಮೇಯರ್‌ ಅವರೇ ಅಧಿಕಾರ ನಡೆಸಲು ಅವಕಾಶವಿದೆ. ಇದರಂತೆ ಆಡಳಿತಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇನೆ. ಆಡಳಿತ ಮಂಜೂರಾತಿಯನ್ನು ನಿಯಮಾವಳಿಯಂತೆ ನಡೆಸಲಾಗಿದೆ. ಕಾನೂನಿನ ಸಲಹೆ ಪಡೆದು ಸಾಮಾನ್ಯ ಸಭೆ ಕರೆಯಲಾಗಿದೆ ಎಂದರು.

ವಿನಯ್‌ರಾಜ್‌ ಮಾತನಾಡಿ, ನಿಯಮಾವಳಿ ಪ್ರಕಾರ ಕಳೆದ ವರ್ಷ ಮಾ.2ರಿಂದ ಈ ವರ್ಷದ ಮಾ.1ರವರೆಗೆ ಮಾತ್ರ ಮೇಯರ್‌ ಅಧಿಕಾರಾವಧಿ ಇತ್ತು. ಆದರೆ, ಕೆಲವೊಂದು ಕಾರಣದಿಂದ ಮೇಯರ್‌ ಅವರು ಮುಂದುವರಿದಿದ್ದಾರೆ. ಹೀಗಾಗಿ ಈಗ ತಮಗೆ ಪೂರ್ಣ ಪ್ರಮಾಣದ ಅಧಿಕಾರ ಇದೆಯೇ? ಸಾಮಾನ್ಯ ಸಭೆ ನಡೆಸಬಹುದೇ? ಹಂಗಾಮಿ ಮೇಯರ್‌ ತಾವಾಗಿದ್ದರೆ ತಾವು ಕಳೆದ 2 ತಿಂಗಳಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ಮಾನ್ಯತೆ ಇದೆಯೇ? ಪಾಲಿಕೆ ಸಭೆ ನಡೆಸಲು ಅವಕಾಶವಿದೆಯೇ? ಅವಕಾಶ ಇದೆಯಾದರೆ ಕಳೆದ 2 ತಿಂಗಳು ಪಾಲಿಕೆ ಸಭೆ ಯಾಕೆ ಮಾಡಿಲ್ಲ? ಎಂದು ಪ್ರಶ್ನಿಸಿದರು. ಆಯುಕ್ತರು ಉತ್ತರಿಸಿ ಕಾನೂನು ಸಲಹೆಯನ್ನು ಸರಕಾರದಿಂದ ನಿರೀಕ್ಷಿಸಿ ಅದರಂತೆ ಇದೀಗ ಸಭೆ ನಡೆಸಲಾಗಿದೆ. ಮೈಸೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗಳಲ್ಲಿಯೂ ಎಪ್ರಿಲ್‌ ತಿಂಗಳಲ್ಲಿ ಸಾಮಾನ್ಯ ಸಭೆ ನಡೆದಿದೆ ಎಂದರು.

ಉಪಮೇಯರ್‌ ಸುಮಂಗಳಾ ರಾವ್‌, ಆಯುಕ್ತ ಅಕ್ಷಯ್‌ ಶ್ರೀಧರ್‌ ಉಪಸ್ಥಿತರಿದ್ದರು.

ಹ್ಯಾಮಿಲ್ಟನ್‌ ಸರ್ಕಲ್‌ ‘ಟ್ರಾಫಿಕ್‌ ಐಲ್ಯಾಂಡ್‌’ಗೆ ವಿರೋಧ

ಪಾಲಿಕೆ ಸದಸ್ಯ ಅಬ್ದುಲ್‌ ಲತೀಫ್‌ ಅವರು ಮಾತನಾಡಿ, ಸ್ಮಾರ್ಟ್‌ಸಿಟಿಯ ಹೆಸರಿನಲ್ಲಿ ಹ್ಯಾಮಿಲ್ಟನ್‌ ಸರ್ಕಲ್‌ ಕಡೆಗೆ ಈಗ ಹೋಗಲು ಆಗುತ್ತಿಲ್ಲ. ವಾಹನ ಸಂಚರಿಸುವ ರಸ್ತೆಯಲ್ಲಿ ಕಲ್ಲುಗಳನ್ನಿಟ್ಟು ಸಂಚಾರ ದಟ್ಟಣೆಗೆ ಕಾರಣವಾಗಿದೆ. ಅವೈಜ್ಞಾನಿಕ ಯೋಜನೆ ಜಾರಿಗೆ ಮುಂದಾಗಿ ಜನರಿಗೆ ಸಮಸ್ಯೆ ಉಂಟುಮಾಡಲಾಗುತ್ತಿದೆ ಎಂದರು.

ಮಾಜಿ ಮೇಯರ್‌ ದಿವಾಕರ ಪಾಂಡೇಶ್ವರ ಮಾತನಾಡಿ, ಸ್ಥಳೀಯ ಕಾರ್ಪೊರೇಟರ್‌ ಗಮನಕ್ಕೆ ತಾರದೆ ಏಕಾಏಕಿ ಕೆಲಸ ಮಾಡಲಾಗುತ್ತಿದೆ. ಸ್ಮಾರ್ಟ್‌ಸಿಟಿ-ಪಾಲಿಕೆಗೆ ಹೊಂದಾಣಿಕೆ ಇಲ್ಲದೆ ಗೊಂದಲ ಉಂಟಾಗಿದೆ. ಹ್ಯಾಮಿಲ್ಟನ್‌ ಸರ್ಕಲ್‌ ಸಂಚಾರ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾವ್‌ ಆ್ಯಂಡ್‌ ರಾವ್‌ ವೃತ್ತದಲ್ಲಿದ್ದ ರಿಕ್ಷಾ ಪಾರ್ಕ್‌ ತೆಗೆದು ಇನ್ನೂ ನಿರ್ಮಾಣ ಮಾಡಿಲ್ಲ ಎಂದರು. ಮೇಯರ್‌ ಹಾಗೂ ಆಯುಕ್ತರು ಪ್ರತಿಕ್ರಿಯಿಸಿ ವಾರ ದೊಳಗೆ ಸ್ಥಳಕ್ಕೆ ಭೇಟಿ ನೀಡಿ ಇದರ ಬಗ್ಗೆ ಪರಿಶೀಲಿಸ ಲಾಗುವುದು ಎಂದರು.

ಲ್ಯಾನ್ಸ್‌ಲಾಟ್‌ ಪಿಂಟೋ ಅವರು ಮಾತನಾಡಿ, ಸ್ಮಾರ್ಟ್‌ಸಿಟಿಯಲ್ಲಿ ಕದ್ರಿ ಪಾರ್ಕ್‌ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ, ಪಾರ್ಕಿಂಗ್‌ಗೆ ಇಲ್ಲಿ ಜಾಗವೇ ಇಲ್ಲ. ಪಾರ್ಕ್‌ಗೆ ಬರುವ ಜನರು ಮುಂದೆ ಮಂಗಳಾ ಕ್ರೀಡಾಂಗಣದಲ್ಲಿ ವಾಹನವಿಟ್ಟು ಕದ್ರಿ ಪಾರ್ಕ್‌ಗೆ ತೆರಳಬೇಕಾ? ಎಂದು ಪ್ರಶ್ನಿಸಿದರು.

ವಾರಕ್ಕೊಮ್ಮೆ ತಲಾ 15 ವಾರ್ಡ್‌ಗಳ ವಿಶೇಷ ಸಭೆ

ಮೇಯರ್‌ ಪ್ರೇಮಾನಂದ ಶಟ್ಟಿ ಅವರು ಮಾತನಾಡಿ, ನಗರದ ವಿವಿಧ ವಾರ್ಡ್‌ಗಳಲ್ಲಿ ವಿವಿಧ ರೀತಿಯ ಸಮಸ್ಯೆಗಳಿದೆ. ಕೆಲವೊಮ್ಮೆ ಸಮನ್ವಯತೆ ಇಲ್ಲದೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಪ್ರತೀ ವಾರ ವಲಯವಾರು ತಲಾ 15 ವಾರ್ಡ್‌ಗಳ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಜತೆಗೆ ವಿಶೇಷ ಸಭೆ ನಡೆಸಲಾಗುವುದು. ಈ ವಾರದಿಂದಲೇ ಈ ಕ್ರಮವನ್ನು ಜಾರಿಗೊಳಿಸಲಾಗುವುದು. 1 ತಿಂಗಳಲ್ಲಿ 60 ವಾರ್ಡ್‌ಗಳ ಸಭೆಯನ್ನು ಪ್ರತ್ಯೇಕವಾಗಿ ಈ ಮುಖೇನ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next