Advertisement

ಕಾಳಸಂತೆಯಲ್ಲಿ ಗೃಹ ಬಳಕೆ ಸಿಲಿಂಡರ್‌ ದಂಧೆ

11:42 AM Jan 24, 2022 | Team Udayavani |

ಕಲಬುರಗಿ: ಮಹಾನಗರದ ವಿವಿಧೆಡೆ ಆಟೋಗಳಿಗೆ ಕಾಳಸಂತೆಯಲ್ಲಿ ಗೃಹ ಬಳಕೆ ಸಿಲಿಂಡರ್‌ನ ಗ್ಯಾಸ್‌ ತುಂಬುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿದೆ. ಆಟೋಗಳಿಗೆ ಬಳಸುವ ಸಿಲಿಂಡರ್‌ ಗಳಿಗೆ ಎಲ್‌ಪಿಜಿ ಗ್ಯಾಸ್‌ ತುಂಬಿಸಲಾಗುತ್ತಿದೆ.

Advertisement

ಗೃಹ ಬಳಕೆ ಸಿಲಿಂಡರ್‌ ಗ್ರಾಹಕರಿಗೆ ಸಕಾಲಕ್ಕೆ ಸಿಗದಿರುವುದು ಒಂದೆಡೆಯಾದರೆ, ಅಸುರಕ್ಷಿತತೆ ಮತ್ತೊಂದೆಡೆಯಾಗಿದೆ. ತುಂಬುವಾಗ ಏನಾದರೂ ಅನಾಹುತ ಸಂಭವಿಸಿದರೆ ಆಟೋ ಭಸ್ಮವಾಗುವುದಲ್ಲದೇ ಜೀವಕ್ಕೆ ಹಾನಿಯಾಗುವ ಸಾಧ್ಯತೆಗಳೇ ಹೆಚ್ಚು.

ಈಗಾಗಲೇ ಒಂದೆರಡು ಸಣ್ಣಪುಟ್ಟ ಘಟನೆಗಳು ಸಂಭವಿಸಿದ್ದರೂ ಬಯಲಿಗೆ ಬಂದಿಲ್ಲ. ಎಲ್‌ಪಿಜಿ ಬಳಕೆ ಆಟೋಗಳು ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ 15ಕ್ಕೂ ಹೆಚ್ಚು ಬಂಕ್‌ಗಳಿವೆ. ಈ ಬಂಕ್‌ಗಳಲ್ಲಿ ಲೀಟರ್‌ ಗ್ಯಾಸ್‌ಗೆ 66ರೂ. ಇದೆ. ಒಂದು ಲೀಟರ್‌ ಗ್ಯಾಸ್‌ಗೆ 25 ಕಿಲೋ ಮೀಟರ್‌ ಮೈಲೇಜ್‌ ಬರುತ್ತದೆ. ಆದರೆ ಗೃಹ ಬಳಕೆಯ ಲೀಟರ್‌ ಗ್ಯಾಸ್‌ ಗೆ 85ರೂ. ಇದ್ದು, 45 ಕಿಲೋಮೀಟರ್‌ ಮೈಲೇಜ್‌ ಬರುತ್ತದೆ. ಅಂದರೆ ಒಂದು ಲೀಟರ್‌ದಿಂದ 20 ಕಿಲೋಮಿಟರ್‌ ಹೆಚ್ಚಿಗೆ ಮೈಲೇಜ್‌ ಬರುತ್ತದೆ. ಹೀಗೆ ಹಣ ಉಳಿತಾಯ ಜತೆಗೆ ಮೈಲೇಜ್‌ ಹೆಚ್ಚಿಗೆ ಬರುತ್ತಿರುವುದೇ ಅಕ್ರಮ ದಂಧೆಗೆ ಕಾರಣವಾಗಿದೆ.

ಈ ದಂಧೆ ಕಳೆದ ಹಲವಾರು ತಿಂಗಳಿಂದ ರಾಜಾರೋಷವಾಗಿ ನಡೆಯುತ್ತಿದ್ದರೂ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಎಲ್ಲೆಲ್ಲಿ ಅಕ್ರಮ

Advertisement

ನಗರದ ರಾಜಾಪುರ ಆಟೋ ನಿಲ್ದಾಣ ಹತ್ತಿರ ಕ್ರೀಡಾಂಗಣ ರಸ್ತೆ, ಆಳಂದ ಚೆಕ್‌ಫೋಸ್ಟ್‌ ಹತ್ತಿರ, ಎಂಎಸ್‌ಕೆ ಮಿಲ್‌ ಹತ್ತಿರ, ಮಿರ್ಚಿ ಗೋದಾಮು ಹಿಂದುಗಡೆ, ಎಂಎಸ್‌ಕೆ ಕೆ ಮಿಲ್‌ ಪ್ರದೇಶ ಸೇರಿದಂತೆ ನಗರದಲ್ಲಿ ಆರೇಳು ಕಡೆ ಗೃಹ ಬಳಕೆಯ ಗ್ಯಾಸ್‌ನ್ನು ಆಟೋಗಳ ಸಿಲಿಂಡರ್‌ಗಳಿಗೆ ತುಂಬುವ ದಂಧೆ ನಡೆಯುತ್ತಿದೆ. ಅನಾಹುತವಾಗುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ಯಾರೂ ಪೂರೈಸುತ್ತಾರೆ, ಯಾವ ಏಜೆನ್ಸಿಯವರು ಭಾಗಿಯಾಗಿದ್ದಾರೆ ಎನ್ನುವುದು ತನಿಖೆಯಿಂದ ಬಯಲಿಗೆ ಬರುತ್ತದೆ. ಒಟ್ಟಾರೆ ಗೃಹ ಬಳಕೆಯ ಸಿಲಿಂಡರ್‌ಗಳ ದುರ್ಬಳಕೆ ತಡೆಯುವುದು ಅಗತ್ಯವಾಗಿದೆ.

ಗೃಹ ಬಳಕೆಗೆ ಉಪಯೋಗಿಸುವ ಅನಿಲವನ್ನು ಆಟೋಗಳ ಸಿಲಿಂಡರ್‌ ಗಳಿಗೆ ತುಂಬುವ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ. ಆದರೆ ಈ ಕುರಿತು ಪರಿಶೀಲಿಸಿ, ದಾಳಿ ನಡೆಸಿ ಖಂಡಿತಾ ಕ್ರಮ ಕೈಗೊಳ್ಳಲಾಗುವುದು. ಈ ದಂಧೆ ಅನಾಹುತಕ್ಕೆ ಎಡೆ ಮಾಡಿಕೊಡುವಂತಿದ್ದು, ಬ್ರೇಕ್‌ ಹಾಕಲಾಗುವುದು. -ಶಾಂತಗೌಡ ಗುಣಕಿ, ಉಪ ನಿರ್ದೇಶಕ ಆಹಾರ ಮತ್ತು ಸಾರ್ವಜನಿಕ ಸರಬರಾಜು ಇಲಾಖೆ

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next